ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಸಾಮಾನ್ಯ ಜನರು ಕೂಡ ತ್ವರಿತವಾಗಿ ಸಂಚರಿಸುವಂತಾಗಲಿ, ಅದು ಕೂಡ ಹವಾನಿಯಂತ್ರಿತ ವಾಹನಗಳಲ್ಲಿ ಸಂಚರಿಸಲಿ ಎಂಬ ಸುದ್ದುದದೇಶದಿಂದ ಪ್ರಾರಂಭಿಸಲಾದ ಬಿಆರ್‌ಟಿಎಸ್‌ಗೆ ಬಂದ್ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ. ಆರಂಭವಾಗಿ ಆರೇ ವರ್ಷಕ್ಕೆ ಬಿಆರ್‌ಟಿಎಸ್ ಬೇಸರವಾಗಿದೆಯೇ? ಇಂತಹ ಪ್ರಶ್ನೆಗಳು ಇದೀಗ ಮಹಾನಗರದ ಸಾರ್ವಜನಿಕರಲ್ಲಿ ಹುಟ್ಟುಕೊಂಡಿವೆ.
ಬಿಆರ್‌ಟಿಎಸ್ ಎಂದರೆ ಚಿಗರಿ ಬಸ್ ಎಂದು ಕರೆಯಲಾಗುತ್ತಿದೆ. ₹ 1200 ಕೋಟಿಗೂ ಅಧಿಕ ಖರ್ಚು ಮಾಡಿ ಕಾರಿಡಾರ್ ನಿರ್ಮಿಸಲಾಗಿದೆ. ಅಹಮ್ಮದಾಬಾದ್, ಇಂದೋರ್, ಪುಣೆ, ಕೊಲ್ಲಾಪುರ ಸೇರಿದಂತೆ ದೇಶದ 11 ಮಹಾನಗರಗಳಲ್ಲಿ ವಿಫಲವಾಗಿದ್ದ ಬಿಆರ್‌ಟಿಎಸ್ ಸಾರಿಗೆ ವ್ಯವಸ್ಥೆಯನ್ನು ಹುಬ್ಬಳ್ಳಿ-ಧಾರವಾಡದ ಮಧ್ಯೆ ಜಾರಿಗೊಳಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಹೊಸ ಪ್ರಯೋಗ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ.2018ರಲ್ಲಿ ಈ ಯೋಜನೆಗೆ ಆಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಸಿರು ನಿಶಾನೆ ತೋರಿಸಿದ್ದರು. ಪ್ರತ್ಯೇಕ ಕಾರಿಡಾರ್, ಅಕ್ಕಪಕ್ಕಗಳಲ್ಲಿ ಮಿಶ್ರಪಥ ಹಾಗೆ ನೋಡಿದರೆ ಮೆಟ್ರೋಗಿಂತ ಯಾವುದೇ ಕಮ್ಮಿಯಿಲ್ಲ ಎಂಬ ಮಾತು ಇದೆ. ದಕ್ಷಿಣ ಭಾರತದ ಮೊದಲ ಬಿಆರ್‌ಟಿಎಸ್ ಕಾರಿಡಾರ್ ಎಂಬ ಹೆಗ್ಗಳಿಕೆ ಕೂಡ ಮಹಾನಗರದ್ದು. ಇವುಗಳ ಮಧ್ಯೆಯೇ 11 ನಗರಗಳಲ್ಲಿ ವಿಫಲವಾಗಿದ್ದರೂ ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ ಈ ಬಸ್‌ಗಳು ನಿತ್ಯವೂ ಜನಜಂಗುಳಿಯಿಂದಲೇ ಸಂಚರಿಸುತ್ತಿವೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಪ್ರತಿನಿತ್ಯ 1.40 ಲಕ್ಷದಿಂದ 1.50 ಲಕ್ಷ ಜನ ಓಡಾಡುತ್ತಾರೆ. ಅವರಲ್ಲಿ 90 ಸಾವಿರದಷ್ಟು ಜನರು ಬಿಆರ್‌ಟಿಎಸ್ ಅವಲಂಬಿಸಿದ್ದರೆ, ಇನ್ನುಳಿದವರು ಖಾಸಗಿ ಹಾಗೂ ಕೆಂಪು ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಪ್ರತಿನಿತ್ಯ 90 ಬಿಆರ್‌ಟಿಎಸ್ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಪೀಕ್ ಅವರ್‌ನಲ್ಲಂತೂ ಈ ಬಸ್‌ನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗಲ್ಲ. ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಉತ್ತಮ ಸಾಮೂಹಿಕ ಸಾರಿಗೆ ವ್ಯವಸ್ಥೆ ಎಂದು ನಾಲ್ಕೈದು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಪಡೆದಿದೆ. ಆದರೂ ಬಿಆರ್‌ಟಿಎಸ್ ಬಂದ್ ಮಾಡಬೇಕು. ಅದು ನಷ್ಟದಲ್ಲಿದೆ ಎಂಬ ಕೂಗು ಕೇಳಿ ಬರುತ್ತಿದೆ.
ಬಿಆರ್‌ಟಿಎಸ್ ಬಿಳಿಯಾನೆ:ಬಿಆರ್‌ಟಿಎಸ್ ಎನ್ನುವುದು ಬಿಳಿಯಾನೆಯಾಗಿದ್ದು ಅದನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾಗುತ್ತದೆ. ಎಷ್ಟೋ ಬಸ್‌ಗಳು ದುರಸ್ತಿಗೆ ಬಂದರೂ ಆಗುತ್ತಿಲ್ಲ. ಹುಬ್ಬಳ್ಳಿ- ಧಾರವಾಡ ಮಧ್ಯೆದ ಅರ್ಧಕ್ಕೂ ಹೆಚ್ಚು ರಸ್ತೆಯನ್ನು ತಾನೇ ನುಂಗಿ ಹಾಕಿದ್ದರೆ, ಇನ್ನರ್ಧದಲ್ಲಿ ಉಳಿದ ವಾಹನಗಳು ಸಂಚರಿಸಬೇಕು. ರಸ್ತೆ ಕೂಡ ಕಡಿತವಾಗಿದೆ. ಈ ಬಸ್‌ಗಳ ಸಂಚಾರದಿಂದ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಬಿಆರ್‌ಟಿಎಸ್‌ಗೆ ಕೊನೆ ಮೊಳೆ ಹೊಡೆಯುವುದು ಲೇಸು ಎಂಬ ವಾದ ಕೆಲವರದ್ದು.
ವಿರೋಧ-ಪಾದಯಾತ್ರೆ:ಈ ಬಸ್‌ಗಳು ರಶ್ ಇರುತ್ತವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಧ್ಯೆ ಓಡಾಡುವ ಸಾಮಾನ್ಯರು ಈ ಬಸ್‌ಗಳನ್ನು ಬಳಸುತ್ತಿದ್ದಾರೆ. ಆದರೂ ಅಷ್ಟೇ ಪ್ರಮಾಣದಲ್ಲಿ ವಿರೋಧವೂ ವ್ಯಕ್ತವಾಗುತ್ತಿದೆ. ಇದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದುಂಟು. ಸಾರ್ವಜನಿಕ ಬಳಕೆಗೂ ಕಾರಿಡಾರ್ ಮುಕ್ತವಾಗಲಿ ಎಂಬ ಬೇಡಿಕೆ ಕೆಲವೊಂದಿಷ್ಟು ಸಾರ್ವಜನಿಕ ಸಂಘಟನೆಗಳು ಮುಂದಿಟ್ಟಿವೆ. ಇದಕ್ಕಾಗಿ ಪಾದಯಾತ್ರೆಯನ್ನು ಧಾರವಾಡದಲ್ಲಿ ನಡೆಸಲಾಗಿದೆ.
ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪರ್ಯಾಯ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಸಮೀಕ್ಷೆಯನ್ನೂ ಮಾಡಿಸಿದ್ದಾರೆ. ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಜಾರಿಯಲ್ಲಿರುವ ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ಅಥವಾ ಲೈಟ್ರಾಮ್ ಸಾರಿಗೆ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಮುಂದಿಟ್ಟಿದ್ದಾರೆ. ಈ ಸಂಬಂಧ ಸಭೆಯೊಂದನ್ನು ಮಾಡಿದ್ದಾರೆ. ಇನ್ನು ಮೂರ್ನಾಲ್ಕು ಸಭೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ. 250 ಜನರನ್ನು ಏಕಕಾಲಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ಸಾರಿಗೆ ವ್ಯವಸ್ಥೆ ಹುಬ್ಬಳ್ಳಿ-ಧಾರವಾಡಕ್ಕೆ ಸೂಕ್ತವಾಗುತ್ತದೆಯೇ? ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಕೇಳುತ್ತಿದ್ದಾರೆ.ಒಟ್ಟಿನಲ್ಲಿ ಬಿಆರ್‌ಟಿಎಸ್ ಬಂದ್ ಮಾಡುವ ಕುರಿತು ಚಿಂತನೆ ಶುರುವಾಗಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದು, ಚರ್ಚೆಗೆ ಗ್ರಾಸ್‌ವನ್ನುಂಟು ಮಾಡಿರುವುದಂತೂ ಸತ್ಯ.