ಸೇತುವೆ ಕುಸಿತ, ಸಂಚಾರ ದುಸ್ತರ

KannadaprabhaNewsNetwork | Published : Mar 17, 2024 2:01 AM

ಸಾರಾಂಶ

ಸಮೀಪದ ನವಲಿ-ಕರಡೋಣಿ ಮಾರ್ಗದ ರಸ್ತೆ ಮಧ್ಯದಲ್ಲಿರುವ ಸೇತುವೆ ಕುಸಿದಿದ್ದರಿಂದ ವಾಹನಗಳ ಸಂಚಾರ ದುಸ್ತರವಾಗಿದ್ದು, ಸಾರ್ವಜನಿಕರು, ಹೊಲಗದ್ದೆಗಳಿಗೆ ತೆರಳುವ ರೈತರು ಪರದಾಡುವಂತಾಗಿದೆ.

ನವಲಿ- ಕರಡೋಣಿ ರಸ್ತೆ ಮಾರ್ಗದಲ್ಲಿ ಮರಳು ಸಾಗಾಣಿಕೆ ಅವ್ಯಾಹತರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಸಮೀಪದ ನವಲಿ-ಕರಡೋಣಿ ಮಾರ್ಗದ ರಸ್ತೆ ಮಧ್ಯದಲ್ಲಿರುವ ಸೇತುವೆ ಕುಸಿದಿದ್ದರಿಂದ ವಾಹನಗಳ ಸಂಚಾರ ದುಸ್ತರವಾಗಿದ್ದು, ಸಾರ್ವಜನಿಕರು, ಹೊಲಗದ್ದೆಗಳಿಗೆ ತೆರಳುವ ರೈತರು ಪರದಾಡುವಂತಾಗಿದೆ.

ನವಲಿಯಿಂದ ಕರಡೋಣಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಸೇತುವೆ ಕುಸಿದ ಪರಿಣಾಮವಾಗಿ ರೈತರು ಹೊಲಗದ್ದೆಗಳಿಗೆ ಚಕ್ಕಡಿಗಳಲ್ಲಿ ತೆರಳುವ ಸಂದರ್ಭದಲ್ಲಿ ಹಲವು ಅವಘಡಗಳು ಸಂಭವಿಸಿವೆ.

ನವಲಿ ಸುತ್ತಮುತ್ತಲಿನಲ್ಲಿ ಅನಧಿಕೃತವಾಗಿ ಮರಳು ದಂಧೆ ನಡೆಯುತ್ತಿದ್ದು, ರಾತ್ರೋರಾತ್ರಿ ಮರಳು ತುಂಬಿದ ವಾಹನ ಓಡಾಟವೇ ಸೇತುವೆ ಕುಸಿಯಲು ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಉದ್ದಿಹಾಳ, ಕ್ಯಾರಿಹಾಳ, ಈಚನಾಳ ಸೇರಿದಂತೆ ನವಲಿಯ ಕೆಲವು ಸ್ಥಳಗಳಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿದೆ. ಹೊಸಪೇಟೆ, ಗಂಗಾವತಿ, ತಾವರಗೇರಾ ಸೇರಿದಂತೆ ವಿವಿಧ ನಗರಗಳಿಗೆ ಮರಳು ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ವಾಹನ ಮರಳು ತುಂಬಿಕೊಂಡು ಹೋಗುತ್ತಿರುವುದರಿಂದ ರಸ್ತೆ ಹಾಗೂ ಸೇತುವೆ ಹಾಳಾಗುತ್ತಿವೆ.

ನವಲಿಯಿಂದ 1.5 ಕಿಮೀ ದೂರದಲ್ಲಿ ಐತಿಹಾಸಿಕ ಪ್ರಸಿದ್ಧ ಭೋಗಾಪುರೇಶ ದೇವಸ್ಥಾನ ಮತ್ತು 8 ಕಿಮೀ ಅಂತರದಲ್ಲಿ ಪುರದ ಕೋಟಿ ಲಿಂಗ ದೇವಸ್ಥಾನ ಇವೆ. ಈ ಸ್ಥಳಗಳಿಗೆ ನಿತ್ಯ ನೂರಾರು ಭಕ್ತರು ವಾಹನಗಳು ಮತ್ತು ಚಕ್ಕಡಿಗಳಲ್ಲಿ ತೆರುಳುತ್ತಿದ್ದಾರೆ. ಆದರೆ ಸೇತುವೆ ಕುಸಿದಿದ್ದರಿಂದ ಇದು ಅಪಘಾತವಲಯವಾಗಿ ಮಾರ್ಪಟ್ಟಿದೆ. ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡ ಉದಾಹರಣೆಗಳು ಸಾಕಷ್ಟಿವೆ.

ಅಲ್ಲದೇ ಸಮೀಪದಲ್ಲಿಯೇ ನವಲಿ ತಾಂಡಾ ಇದ್ದು ಇಲ್ಲಿಯ ನಾಗರಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಮುಳ್ಳು ಕಂಟಿಯಿಂದ ಕುಸಿತವಾದ ಸೇತುವೆ ಮುಚ್ಚಿ ಅವಘಡ ಸಂಭವಿಸಬಾರದೆಂದು ರಕ್ಷಣೆ ಮಾಡಿದ್ದಾರೆ.

ಪ್ರಸಿದ್ಧ ದೇಗುಲವಾದ ಭೋಗಾಪುರೇಶ ಜಾತ್ರೆಯು ಸಹ ಇನ್ನು ಒಂದು ತಿಂಗಳು ಇದೆ. ಈ ಜಾತ್ರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಹೆಚ್ಚಿನ ಅನಾಹುತ ತಡೆಯುವ ನಿಟ್ಟಿನಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಸೇತುವೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share this article