ಕ್ಯಾ.ಬ್ರಿಜೇಶ್‌ ಚೌಟ ನಾಮಪತ್ರ ಸಲ್ಲಿಕೆ, ಬಿಜೆಪಿ ಬೃಹತ್‌ ಶಕ್ತಿ ಪ್ರದರ್ಶನ

KannadaprabhaNewsNetwork |  
Published : Apr 05, 2024, 01:05 AM IST
ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅಭ್ಯರ್ಥಿ ಸಹಿತ ಪಕ್ಷದ ಪ್ರಮುಖರು | Kannada Prabha

ಸಾರಾಂಶ

ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಶರವು, ಕುದ್ರೋಳಿ, ಕಾರ್‌ಸ್ಟ್ರೀಟ್‌, ಮಂಗಳಾದೇವಿ ಹಾಗೂ ಕದ್ರಿ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಚುನಾವಣಾ ಕಚೇರಿಗೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಬೃಹತ್‌ ಶಕ್ತಿ ಪ್ರದರ್ಶನ ನಡೆಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಪಕ್ಷದ ಕಚೇರಿಯಿಂದ ಭಾರಿ ಮೆರವಣಿಗೆ ನಡೆಸಿ ಪುರಭವನ ಎದುರು ಬಹಿರಂಗ ಸಭೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಶರವು, ಕುದ್ರೋಳಿ, ಕಾರ್‌ಸ್ಟ್ರೀಟ್‌, ಮಂಗಳಾದೇವಿ ಹಾಗೂ ಕದ್ರಿ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಚುನಾವಣಾ ಕಚೇರಿಗೆ ಆಗಮಿಸಿದರು.

ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ ಬಳಿಯ ಬಿಜೆಪಿ ಚುನಾವಣಾ ಕಚೇರಿಯಿಂದ ಬ್ಯಾಂಡ್‌, ಚೆಂಡೆ ವಾದನ, ಬಣ್ಣದ ಧ್ವಜದೊಂದಿಗೆ ಮೆರವಣಿಗೆ ಹೊರಟಿತು. ಪಕ್ಷದ ಹಿರಿಯರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರೆ, ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಸಹಿತ ಪ್ರಮುಖರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ಮೈತ್ರಿ ಪಕ್ಷವಾದ ಜೆಡಿಎಸ್‌ ಮುಖಂಡರೂ ಇದ್ದರು.

ಮೆರ‍ಣಿಗೆಯಲ್ಲಿ ಕೇಸರಿ-ಜಾತ್ಯತೀತ ಬಾವುಟ:

ಬಂಟ್ಸ್‌ಹಾಸ್ಟೆಲ್‌ನಿಂದ ಹೊರಟ ಮೆರವಣಿಗೆ ಅಂಬೇಡ್ಕರ್ ವೃತ್ತ, ಹಂಪನಕಟ್ಟೆ ಮೂಲಕ ಪುರಭವನ ಎದುರು ತಲುಪಿತು. ಮೆರವಣಿಗೆಯುದ್ಧಕ್ಕೂ ಕೇಸರಿ ಪತಾಕೆ, ಬಿಜೆಪಿ-ಜೆಡಿಎಸ್‌ ಬಾವುಟ ಹಾಗೂ ತುಳುನಾಡ ಧ್ವಜವನ್ನು ಬೀಸುತ್ತಾ ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಾಗಿದರು.

ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಚುನಾವಣಾ ಉಸ್ತುವಾರಿ ಸುನಿಲ್‌ ಕುಮಾರ್‌, ಮಾಜಿ ಸಚಿವ ಸಿ.ಟಿ.ರವಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್‌ ಪೂಂಜಾ, ಭಾಗೀರಥಿ, ಪ್ರತಾಪ್‌ಸಿಂಹ ನಾಯಕ್‌, ಯಶ್‌ಪಾಲ್‌ ಸುವರ್ಣ, ಸುರೇಶ್‌ ಶೆಟ್ಟಿ ಗುರ್ಮೆ, ಮುಖಂಡರಾದ ಅರುಣ್‌ ಕುಮಾರ್‌ ಪುತ್ತಿಲ, ಪ್ರಮೋದ್‌ ಮಧ್ವರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಜಿಲ್ಲಾ ಚುನಾವಣಾ ಉಸ್ತುವಾರಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಪ್ರಭಾರಿ ನಿತಿನ್‌ ಕುಮಾರ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ರಾಷ್ಟ್ರೀಯ ವಕ್ತಾರ ಎಂ.ಬಿ.ಸದಾಶಿವ ಮತ್ತಿತರರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಈ ಸಂದರ್ಭ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಅವರು ಕಾರ್ಯಕರ್ತರ ಜತೆ ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಲ್ಲಿ ಭಾರತಮಾತೆಗೆ ಹಾಗೂ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಗೆ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡಿ ಜೈಕಾರ ಹಾಕಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ