ರಾಮನಗರ: ಹಾರೋಹಳ್ಳಿ ತಾಲೂಕು ಮರಳವಾಡಿಯ ದೇವರಹಳ್ಳಿ ಸರ್ವೇ ನಂ.104ರ ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಪತ್ರ ಪಡೆದು 50 ವರ್ಷಗಳಿಂದ ಸ್ವಾಧೀನ ಮತ್ತು ಭೂ ದಾಖಲೆಯುಳ್ಳ ಪ.ಜಾತಿ ಮತ್ತು ಹಿಂದುಳಿದ ವರ್ಗಗಳ ಭೂ ಕಬಳಿಕೆ ಖಂಡಿಸಿ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣಕ್ಕೆ ತಲುಪಿ ಧರಣಿ ಕುಳಿತು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಹಾರೋಹಳ್ಳಿ ದೇವರಹಳ್ಳಿ ಗ್ರಾಮದ ಸರ್ವೇ ನಂ.104ರ 200ಕ್ಕೂ ಹೆಚ್ಚು ಮಂದಿ ಉಳುಮೆ ಮಾಡುತ್ತಿದ್ದಾರೆ. ಇಷ್ಟು ಮಂದಿಗೂ ಭೂಮಿ ಹಕ್ಕುಪತ್ರವನ್ನು ಕಳೆದ 30 ವರ್ಷದ ಹಿಂದೆಯೇ ವಿತರಿಸಲಾಗಿದೆ. ಇಷ್ಟು ಮಂದಿಯ ಬಳಿಕ ಭೂಮಿಯ ಪಹಣಿ, ಮ್ಯೂಟೇಷನ್ ಸೇರಿದಂತೆ ದಾಖಲೆಗಳು ಇವೆ. ಕಳೆದ ವರ್ಷ ಭೂಮಿ ಉಳುಮೆ ಮಾಡಿಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಜನತೆಯನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ಆರೋಪಿಸಿದರು.
ಭೂಮಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನು ಎಂದು ಬೋರ್ಡ್ ಹಾಕಿದ್ದಾರೆ. ಜತೆಗೆ, ಸ್ಥಳೀಯರನ್ನು ಓಡಿಸಿದ್ದಾರೆ. ಆ ಸ್ಥಳದಲ್ಲಿ ಅರಣ್ಯ ಇಲಾಖೆ ಸಸಿಗಳನ್ನು ನೆಡುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಪಕ್ಷದ ವತಿಯಿಂದ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಇದೇ ರೀತಿಯ ಹಲವು ಸಮಸ್ಯೆಗಳು ಇವೆ. ಜತೆಗೆ, ದಾಖಲೆಗಳು ಇದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಗ್ರಾಮಸ್ಥರಿಗೆ ಜಿಲ್ಲಾಡಳಿತ ರಕ್ಷಣೆ ನೀಡುವ ಕೆಲಸ ಮಾಡಬೇಕು. ಗ್ರಾಮಸ್ಥರಿಗೆ ತೊಂದರೆ ನೀಡಿದ ಅರಣ್ಯ ಅಧಿಕಾರಿಯ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು. ಜತೆಗೆ, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ನಾಗೇಶ್ ಮಾತನಾಡಿ, ದೇವರಹಳ್ಳಿಯ ಸರ್ವೇ ನಂ .104ರ ಎಲ್ಲಾ ಮಂಜೂರಾತಿ ಭೂಮಿಗಳನ್ನು ಅಳತೆ ಮಾಡಿ ಪೋಡಿ ದುರಸ್ಥಿಯನ್ನು ಮಾಡಬೇಕು. ಕಾಡಾನೆ ಇತರೆ ವನ್ಯಜೀವಿಗಳು ಬಾರದಂತೆ ಉಚಿತ ಸೋಲಾರ್ ತಂತಿಬೇಲಿ ನಿರ್ಮಿಸಬೇಕು. ಸರಕಾರಿ ಗೋಮಾಳ ಭೂಮಿಯಲ್ಲಿ ಸಾಗುವಳಿ ಪತ್ರ ಭೂ ಹಕ್ಕುವುಳ್ಳ 5 ವರ್ಷಗಳಿಂದ ಸ್ವಾಧೀನಾನುಭವದ ಪರಿಶಿಷ್ಟ ಜಾತಿಯವರ ಭೂಮಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿ ತೋಡಿ ವಿರೂಪಗೊಳಿಸಿದ್ದಾರೆ. ಇದರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಬಿಎಸ್ಪಿ ಪದಾಧಿಕಾರಿಗಳಾದ ಬಿ.ಅನ್ನದಾನಪ್ಪ, ವಿ.ಸ್ವಾಮಿ, ಮುರುಗೇಶ್, ಟಿ.ಕೃಷ್ಣಮೂರ್ತಿ, ಅಬ್ದುಲ್ ರಹೀಂ, ಪಾರ್ವತಮ್ಮ, ಮುರುಗೇಶ್ ಭಾಗವಹಿಸಿದ್ದರು.
14ಕೆಆರ್ ಎಂಎನ್ 4.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಬಿಎಸ್ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.