ಬೂದನೂರು ಉತ್ಸವ ‘ಅಂತ್ಯವಲ್ಲ ಆರಂಭ’: ಶಾಸಕ ಪಿ.ರವಿಕುಮಾರ್

KannadaprabhaNewsNetwork | Published : Mar 4, 2024 1:19 AM

ಸಾರಾಂಶ

ನಾನು ಶಾಸಕನಾಗಿರಲಿ, ಇಲ್ಲದಿರಲಿ ಬೂದನೂರು ಉತ್ಸವ ನಿರಂತರವಾಗಿ ಮುಂದುವರೆಯಬೇಕು. ಮಂಡ್ಯದ ಸಾಂಸ್ಕೃತಿಕ ಪರಂಪರೆ ಹೊರ ಜಗತ್ತಿಗೆ ಪರಿಚಯವಾಗಬೇಕು. ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮ ಅಭಿವೃದ್ಧಿ ಕಾಣಬೇಕೆಂಬುದು ಬೂದನೂರು ಉತ್ಸವದ ಉದ್ದೇಶ. ಹೊಸ ಪರಂಪರೆಗೆ ನಾಂದಿ ಹಾಡಿರುವ ಬೂದನೂರು ಉತ್ಸವ ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿದೆ. ಇದು ಉತ್ಸವದ ಅಂತ್ಯವಲ್ಲ, ಆರಂಭ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೊಸ ಪರಂಪರೆಗೆ ನಾಂದಿ ಹಾಡಿರುವ ಬೂದನೂರು ಉತ್ಸವ ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿದೆ. ಇದು ಉತ್ಸವದ ಅಂತ್ಯವಲ್ಲ, ಆರಂಭ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದ ಬೂದನೂರು ಉತ್ಸವ ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಾನು ಶಾಸಕನಾಗಿರಲಿ, ಇಲ್ಲದಿರಲಿ ಉತ್ಸವ ನಿರಂತರವಾಗಿ ಮುಂದುವರೆಯಬೇಕು. ಮಂಡ್ಯದ ಸಾಂಸ್ಕೃತಿಕ ಪರಂಪರೆ ಹೊರ ಜಗತ್ತಿಗೆ ಪರಿಚಯವಾಗಬೇಕು. ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮ ಅಭಿವೃದ್ಧಿ ಕಾಣಬೇಕೆಂಬುದು ಬೂದನೂರು ಉತ್ಸವದ ಉದ್ದೇಶ. ಇದರ ಮೂಲಕ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಿ ಉದ್ಯೋಗ ಸೃಷ್ಟಿಯಾದಾಗ ಇಂತಹ ಉತ್ಸವಗಳನ್ನು ಆಯೋಜಿಸಿದ್ಸಕ್ಕೂ ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ನುಡಿದರು.

ಹಲವು ದಶಕಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ಬೂದನೂರು ಗ್ರಾಮದ ಹಲವು ನಿವಾಸಿಗಳಿಗೆ ಸಚಿವರಿಂದ ಹಕ್ಕು ಪತ್ರ ಕೊಡಿಸಿದ್ದೇನೆ. ಮಾ.10ರಂದು ತಮಿಳು ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರವನ್ನು ಮುಖ್ಯಮಂತ್ರಿಗಳಿಂದ ಕೊಡಿಸುವುದಾಗಿ ಹೇಳಿದರು.

ಹನಕೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಲು ವಿಳಂಬ ಧೋರಣೆ ಸೇರಿದಂತೆ ಹೆದ್ದಾರಿಯಿಂದ ಸುತ್ತಮುತ್ತಲ ಗ್ರಾಮಗಳ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಹೆದ್ಸಾರಿ ಅಧಿಕಾರಿಗಳ ವಿರುದ್ಧ ಪ್ರಾಧಿಕಾರದ ಕಚೇರಿ ಎದುರು ಜನರನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರಸ್ತೆಗೆ ಅಂಬರೀಶ್ ಹೆಸರಿಡಲು ಕ್ರಮ: ರವಿಕುಮಾರ್

ಮಂಡ್ಯ ನಗರದ ಪ್ರಮುಖ ರಸ್ತೆಗೆ ಅಂಬರೀಶ್ ಅವರ ಹೆಸರಿಡಲು ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕ ಪಿ.ರವಿಕುಮಾರ್ ತಿಳಿಸಿದರು.

ತಾಲೂಕಿನ ಬೂದನೂರು ಉತ್ಸವ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅವರು ಮಾಡಿದ ಬಹಿರಂಗ ಮನವಿಗೆ ವೇದಿಕೆಯಲ್ಲೇ ಸ್ಪಂದಿಸಿದ ಶಾಸಕರು, ಅಂಬರೀಶ್ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಭರವಸೆ ನೀಡಿದರು.ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಅವರು ಅಂಬರೀಶ್ ಹೆಸರನ್ನು ಶಾಶ್ವತವಾಗಿ ಉಳಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ನಾವು ಅದನ್ನು ಮಾಡಿ ತೋರಿಸುತ್ತೇವೆ. ನಿಮ್ಮ ಮನವಿಯ ಮೇರೆಗೆ ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲೇ ರಸ್ತೆಯೊಂದಕ್ಕೆ ಅಂಬರೀಶ್ ಹೆಸರಿಡುವ ಭರವಸೆ ನೀಡಿದರು.

Share this article