ಸಮಾಜದ ತಲ್ಲಣಕ್ಕೆ ಬುದ್ಧನ ಚಿಂತನೆಗಳೇ ಪರಿಹಾರ: ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ

KannadaprabhaNewsNetwork | Published : May 24, 2024 12:57 AM

ಸಾರಾಂಶ

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರ ಕೇಂದ್ರದ ವತಿಯಿಂದ ಆಯೋಜಿಸಿದ್ದ ವೈಶಾಖ ಬುದ್ಧ ಪೂರ್ಣಿಮೆ ಜಯಂತಿ ಆಚರಣೆಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಚಾಲನೆ ನೀಡಿ, ಯುವ ಪೀಳಿಗೆ ಬುದ್ಧ, ಬಸವ, ಅಂಬೇಡ್ಕರ್ ಮಾರ್ಗ ಪಾಲನೆಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ / ಚಳ್ಳಕೆರೆ

ಆಧುನಿಕ ಸಮಾಜದ ತಲ್ಲಣಗಳಿಗೆ ಬುದ್ಧನ ಚಿಂತನೆಗಳು ಪರಿಹಾರ ಒದಗಿಸುತ್ತವೆ ಎಂದು ಚಿಂತಕ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧವಿಹಾರ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವೈಶಾಖ ಬುದ್ಧ ಪೂರ್ಣಿಮೆ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜಗತ್ತಿನ ಮೊದಲ ವಿಜ್ಞಾನಿ ಗೌತಮ ಬುದ್ಧ. ಪರಿಸರ ಮಾಲಿನ್ಯ, ಆರ್ಥಿಕ ಅಸಮಾನತೆ, ಅಸಮತೋಲನ ಇನ್ನೂ ಮುಂತಾದ ಸಮಸ್ಯೆ ಗಳಿಗೆ ಪರಿಹಾರಕ್ಕೆ ಬುದ್ಧನಲ್ಲಿ ಉತ್ತರವಿದೆ. ಆಡಳಿತ ನಿರ್ವಹಣಾ ಶಾಸ್ತ್ರ ಪಿತಾಮಹ ಪೀಟರ್ ಅಭಿಪ್ರಾಯದಂತೆ ಬುದ್ಧನ ಚಿಂತನೆಗಳ ನೆಲೆಯಲ್ಲಿನ ಮಾನವ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ. ಆಲ್ಬರ್ಟ್ ಐನ್‍ಸ್ಟೈನ್ ಹೇಳಿದಂತೆ ಬುದ್ಧನ ಚಿಂತನೆಗಳನ್ನು ಪ್ರಯೋಗ, ಪರಿಶೀಲನೆಗೆ ಒಳಪಡಿಸಿದರೆ ಆಧುನಿಕ ವಿಜ್ಞಾನದ ಮರುಹುಟ್ಟು ಕಾಣಬಹುದು ಎಂದರು.

ಜಯಂತಿ ಆಚರಣೆ ಉದ್ಘಾಟಿಸಿ ಮತನಾಡಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಇಂದಿನ ಯುವ ಪೀಳಿಗೆಗೆ ಬುದ್ಧ, ಬಸವ, ಅಂಬೇಡ್ಕರ್ ಅವರೇ ಮಾರ್ಗದರ್ಶಿಗಳು. ಇಂತಹವರ ತತ್ವಾದರ್ಶಗಳನ್ನು ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಆಶಯದ ಸಮಾಜ ಕಟ್ಟಲು ಸಾಧ್ಯ ಎಂದರು.

ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳನ್ನು ಪಾಲಿಸುವ ಬದಲು ಇಂತಹ ಮಹಾನೀಯರ ಆಚರಣೆಗಳು ಶಾಲಾ ಕಾಲೇಜುಗಳಲ್ಲಿ ನಡೆಯಬೇಕು. ಅದರಲ್ಲೂ ಈ ದೇಶದ ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಿಗೆ ಅವರ ಆಲೋಚನೆಗಳು ತಲುಪಬೇಕು. ಬುದ್ದನ ಚಿಂತನೆಯಲ್ಲಿ ಎಲ್ಲವೂ ಅಡಗಿದೆ. ನಿಜದನಿಯಲ್ಲಿ ಅನುಸರಿಸಿದರೆ ಆಗ ಸಮ ಸಮಾಜದ ನಿರ್ಮಾಣಗುತ್ತದೆ ಎಂದರು.

ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಮಾನವ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ. ಇಂದಿನ ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿಯ ಬದಲು ಬುದ್ದ, ಬಸವ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಬದುಕು ಸಾಗಿಸಬಹುದು. ಬೌದ್ಧ ಅನುಯಾಯಿಗಳಿಗೆ ಯಾವುದೇ ಸಹಾಯ, ಸಹಕಾರ ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಬುದ್ಧ ಆಹಾರ ಪದ್ಧತಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಬಗ್ಗೆ ಯಾವುದೇ ವ್ಯತ್ಯಾಸ ಹೇಳಿಲ್ಲ. ಬುದ್ಧನ ಬಗ್ಗೆ ನಿಜವಾದ ಅಭಿಮಾನವಿದ್ದರೆ ಬುದ್ಧ ಪೂರ್ಣಿಮೆಯಂದು ಮದ್ಯಪಾನವನ್ನು ಸಂಪೂರ್ಣ ನಿಷೇಧ ಮಾಡಿ. ಆದರೆ ಮಾಂಸಹಾರ ವನ್ನು ನೀಷೇಧಿಸಬೇಡಿ. ಹಾಗೆ ಮಾಡಿದರೆ ಅದು ಬುದ್ಧನಿಗೆ ಮಾಡುವ ಅವಮಾನ. ಬೆಂಗಳೂರು ಬಿಬಿಎಂಪಿಯು ಬುದ್ದ ಪೂರ್ಣಿಮೆ ನಿಮಿತ್ತ ಮಾಂಸ ಮಾರಾಟ ನಿಷೇಧ ಮಾಡಿದ್ದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಿದ್ದಲಿಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ಎಚ್.ಲಿಂಗಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಟಿ.ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ನಿರಂಜನ ಮೂರ್ತಿ ಮಾತನಾಡಿದರು.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಪಿ.ಪ್ರೇಮನಾಥ್, ಕಲಾ ಕಾಲೇಜು ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಪ್ಪ, ಕೆ.ಆರ್.ಮದ್ದಪ್ಪ, ಹಿರಿಯೂರು ಎಲ್.ಐಸಿ ಮ್ಯಾನೇಜರ್ ಕೇಶವ ಮೂರ್ತಿ, ಜಂಬೂದ್ವೀಪದ ರಾಜ್ಯಾಧ್ಯಕ್ಷ ಸಿ.ರಾಮಣ್ಣ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್, ಉಪನ್ಯಾಸಕರಾದ ಜಿ.ಎಸ್.ತಿಪ್ಪೇಸ್ವಾಮಿ, ಬಿ.ಎಂ.ಗುರುನಾಥ್, ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಶಿಕ್ಷಕರಾದ ಬಸವರಾಜ್, ಪ್ರಕಾಶ್, ಜಮುನಾ, ಉಪಾಸಕ ತುರುವನೂರು ಜಗನ್ನಾಥ್ ಇತರರಿದ್ದರು.

‘ಅಹಿಂಸೆ, ಶಾಂತಿ ಪ್ರತಿಪಾದಿಸಿದ ಬೌದ್ಧ ಧರ್ಮಕ್ಕೆ ವಿಶ್ವದಲ್ಲೆ ಗೌರವ’ಚಳ್ಳಕೆರೆ: ಹಲವಾರು ಧರ್ಮಗಳು ನಮ್ಮಲ್ಲಿದ್ದರೂ ಸಹ ಅಂಬೇಡ್ಕರ್ ಮಾತ್ರ ಅಹಿಂಸೆ ಮತ್ತು ಶಾಂತಿಯನ್ನು ಪ್ರತಿಪಾದಿಸುವ ಬೌದ್ಧಧರ್ಮ ವನ್ನು ಸ್ವೀಕರಿಸಿದ್ದು, ನಾವೆಲ್ಲರೂ ಅಹಿಂಸೆ ಮತ್ತು ಶಾಂತಿ ಪ್ರತಿಪಾದಕರಾಗೋಣವೆಂದು ಲೇಖಕ ಹಾಗೂ ಕಥೆಗಾರ ಮೋದೂರು ತೇಜ ತಿಳಿಸಿದರು.

ಅವರು ಗುರುವಾರ ತಾಲ್ಲೂಕಿನ ನನ್ನಿವಾಳ ಗ್ರಾಮದ ಬುದ್ಧಮನೆಯಲ್ಲಿ ಬುದ್ಧ ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿ ಅನೇಕ ಧರ್ಮಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಶಾಂತಿಯ ಪ್ರತಿಪಾದಕರಾಗಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಧಾರ್ಮಿಕ ವಿಚಾರಗಳಲ್ಲಿ ತಮ್ಮದೇ ಆದ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರು. ಸಮಾಜದಲ್ಲಿ ಯಾವುದೇ ವ್ಯಕ್ತಿಯಾದರೂ ತನ್ನದೇಯಾದ ಧಾರ್ಮಿಕ ವಿಚಾರಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಆದರೆ, ಬೇರೆಯವರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸ ಬೇಕಿದೆ. ಹಲವಾರು ಧರ್ಮಗಳ ಜೊತೆಯಲ್ಲಿ ನಾವಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಬೌದ್ಧ ಧರ್ಮವನ್ನು ವಿಶ್ವದಲ್ಲಿ ಎಲ್ಲರೂ ಗೌರವಿಸುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಾಜಣ್ಣ, ದೊರೆ ನಾಗರಾಜು, ಎನ್.ತಿಪ್ಪೇರುದ್ರಪ್ಪ, ದ್ಯಾಮಣ್ಣ, ಪಿಡಿಒ ಇನಾಯಿತ್‌ ಪಾಷ, ದ್ಯಾಮರಾಜ್, ಹೊನ್ನೂರು ಮಾರಣ್ಣ, ಗಂಗಾಧರ, ಚನ್ನಕೇಶವ ಮೂರ್ತಿ ಮುಂತಾದವರಿದ್ದರು.ಮಾದಿಗ ಜನಾಂಗ ಬೌದ್ಧ ಧರ್ಮ ಸಿದ್ಧಾಂತವನ್ನು ಅಳವಡಿಸಿಕೊಳ್ಳಿ: ಪ್ರೊ.ಸಿ.ಕೆ.ಮಹೇಶ್ ಕರೆ

ಚಳ್ಳಕೆರೆ: ರಾಜ್ಯದ ಅತಿದೊಡ್ಡ ಸಮುದಾಯದ ಮಾದಿಗ ಸಮುದಾಯ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂದು ಮಾದಿಗ ಸಮುದಾಯದ ವಿಚಾರವಾದಿ ಹಾಗೂ ಕರ್ನಾಟಕ ರಾಜ್ಯ ಮಾದಿಗ ಸಾಂಸ್ಕೃತಿಕ ಸಂಘದ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.

ಅವರು, ನನ್ನಿವಾಳ ಗ್ರಾಮದಲ್ಲಿ ಸಮುದಾಯದ ಮುಖಂಡ ಹಾಗೂ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಕ್ಕೆ ಸಂವಿಧಾನ ಕೊಡುಗೆ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಬುದ್ಧನ ಅನುಯಾಯಿಯಾದರು. ಯಾರು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೋ ಅವರಲ್ಲಿ ಶಾಂತಿ, ನೆಮ್ಮದಿ ತಾನಾಗಿಯೇ ನೆಲೆಸುತ್ತದೆ ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್, ನಾಗರಾಜು, ಬಸವರಾಜು, ಮೈತ್ರಿ ದ್ಯಾಮಣ್ಣ ಮುಂತಾದವರು ಉಪಸ್ಥಿತರಿದ್ದರು.

Share this article