ದೇವರಾಜು ಕಪ್ಪಸೋಗೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಶುಕ್ರವಾರ ಎರಡನೇ ರಾಜ್ಯ ಬಜೆಟ್‌ಗೆ ಸಿದ್ಧರಾಗುತ್ತಿದ್ದು, ಈ ಬಾರಿ ತಮ್ಮ ನೆಚ್ಚಿನ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವರೆ ಎಂಬ ಜನರ ಚಿತ್ತ ಬಜೆಟ್‌ನತ್ತ ನೆಟ್ಟಿದೆ. ಚಾಮರಾಜನಗರ ಜಿಲ್ಲಾಕೇಂದ್ರವಾಗಿ 26 ವರ್ಷವಾದರೂ ಇದರ ಜೊತೆಗೆ ಜಿಲ್ಲಾ ಕೇಂದ್ರಗಳಾದ ಜಿಲ್ಲೆಗಳ ಮಟ್ಟಿಗೆ ಅಭಿವೃದ್ಧಿಯಾಗಿಲ್ಲ. ಉಪ ಮುಖ್ಯಮಂತ್ರಿಯಾಗಿದ್ದ ವೇಳೆ 1997ರಲ್ಲಿ ಸಿದ್ದರಾಮಯ್ಯ ಅವರೇ ಜಿಲ್ಲಾ ಕೇಂದ್ರವನ್ನು ಉದ್ಘಾಟಿಸಿದ್ದು, ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಚಾಮರಾಜನಗರ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ 50 ಕೋಟಿ ರು. ವಿಶೇಷ ಅನುದಾನ ಒದಗಿಸಿದ್ದರು. ಇದರಿಂದಾಗಿ ಜಿಲ್ಲಾ ಕೇಂದ್ರದ ರಸ್ತೆಗಳು ಅಭಿವೃದ್ಧಿಗೊಂಡು, ಜಿಲ್ಲಾ ಕೇಂದ್ರದ ಪ್ರಗತಿಗೆ ಸಹಕಾರಿಯಾಯಿತು. ಇದಲ್ಲದೇ ಆ ವೇಳೆಯಲ್ಲೇ ಚಾಮುಲ್, ಕೈಗಾರಿಕೆ ಪ್ರದೇಶಾಭಿವೃದ್ಧಿ ನಿರ್ಮಾಣವಾಯಿತು.ಇದೀಗ ಮತ್ತೊಂದು ಬಜೆಟ್ ಮಂಡನೆ ಆಗುತ್ತಿದ್ದು, ಮತ್ತೊಮ್ಮೆ ಜಿಲ್ಲೆಗೆ ವಿಶೇಷ ಅನುದಾನ ನೀಡುವ ಮೂಲಕ ನಾನಾ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವರೇ ಎಂದು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.
ಜಿಲ್ಲಾ ಕೇಂದ್ರದ ನೀರಿನ ಬವಣೆ ತಪ್ಪುವುದೇ?ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಇಂದಿಗೂ ವಾರಕ್ಕೊಮ್ಮೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲೇ ನೀರಿನ ಬವಣೆ ಇದೆ. ಎಲ್ಲ ಬಡಾವಣೆಗಳಿಗೂ ನಿತ್ಯ ಕಾವೇರಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಒಂದು ಬಡಾವಣೆಗೆ ವಾರಕ್ಕೆರಡು ಬಾರಿ ಕಾವೇರಿ ನೀರು ಕೊಟ್ಟರೆ ಅದೇ ಹೆಚ್ಚು ಎಂಬಂತಹ ಸ್ಥಿತಿ ಇದೆ. 276 ಕೋಟಿ ರು. ವೆಚ್ಚದ ಹೊಸ ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿ ಹಲವು ವರ್ಷಗಳೇ ಉರುಳಿವೆ. ಹಾಗಾಗಿ ಈ ಹೊಸ ಯೋಜನೆಯಡಿಗೆ ಸಿದ್ದರಾಮಯ್ಯ ಅವರು ಕಾಳಜಿ ವಹಿಸಿದ್ದೇಯಾದರೆ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚಾ.ನಗರದ ನೀರಿನ ಬವಣೆ ನೀಗಲಿದೆ.ಬೇಡಗಂಪಣರ ಅಭಿವೃದ್ಧಿಗೆ ಪ್ಯಾಕೇಜ್:
ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಬೇಡಗಂಪಣರು ವಾಸಿಸುವ ಹಾಡಿಗಳು ಮೂಲ ಸೌಕರ್ಯ ಕೊರತೆಯಿಂದ ಅತ್ಯಂತ ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಗಮನಹರಿಸಬೇಕು. ಈ ಭಾಗದ ರೈತರು ಬೆಳೆಯುವ ಸಾವಯವ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡುವ ನಿಟ್ಟನಲ್ಲಿ ಕೃಷಿ ಆಧಾರಿತ ಉದ್ದಿಮೆಗಳ ಸ್ಥಾಪನೆಗೆ ಮುಂದಾಗಬೇಕಿದೆ.ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಬೇಕಿದೆ:ಚಾಮರಾಜನಗರ ಜಿಲ್ಲೆಯಲ್ಲಿ ಶೇ. 50ರಷ್ಟು ಅರಣ್ಯ ಪ್ರದೇಶವಿದ್ದು, ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಪ್ಯಾಕೇಜ್ ನೀಡಬೇಕಿದೆ.
ಆರೋಗ್ಯ ಸೇವೆಗೆ ಆದ್ಯತೆ ಬೇಕು:ಹೆಚ್ಚಿನ ಕಾಡಂಚಿನ ಪ್ರದೇಶವನ್ನು ಹೊಂದಿರುವ ಹನೂರು ತಾಲೂಕು ಕೇಂದ್ರವಾಗಿ ಹಲವು ವರ್ಷಗಳೇ ಕಳೆದಿದ್ದರೂ ಇನ್ನೂ ಸಮುದಾಯ ಆರೋಗ್ಯ ಕೇಂದ್ರದ ಮಟ್ಟದಲ್ಲೇ ಇದ್ದು, ತಾಲೂಕು ಆಸ್ಪತ್ರೆ ಸ್ಧಾಪಿಸಲು ಮುಂದಾಗಬೇಕಿದೆ. ಕಾಡಂಚಿನ ರಾಮಾಪುರ ಮತ್ತು ಮಹದೇಶ್ವರ ಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಈ ಭಾಗದ ಜನರಿಗೆ ಸೂಕ್ತ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕಿದೆ. ಯಳಂದೂರು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಿ ಹಿಂದಿನ ಬಜೆಟ್‌ಗಳಲ್ಲಿ ಘೋಷಣೆ ಮಾಡಲಾಗಿದ್ದರೂ ಇದುವರೆಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ 100 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಬೇಕಿದೆ.ಮತ್ತೊಂದು ಉಪ ವಿಭಾಗ ಬೇಕು:ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿದ್ದು, ಒಂದೇ ಉಪ ವಿಭಾಗ (ಕೊಳ್ಳೇಗಾಲ) ಇದೆ. ಆಡಳಿತದ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಮತ್ತೊಂದು ಉಪವಿಭಾಗ ರಚನೆ ಮಾಡಬೇಕು. ಹನೂರು ಜಿಲ್ಲೆಯ ಹೊಸ ತಾಲೂಕಾಗಿದೆ. ಸುಗಮ ಕಾರ್ಯನಿರ್ವಹಣೆಗಾಗಿ ೧೦ ಕೋಟಿ ರು. ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಮಾಡಬೇಕು.
ಹೊಸ ಟೌನ್ ಶಿಪ್ ಚಾಮರಾಜನಗರ:ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೂ ಚಾಮರಾಜನಗರ ಪಟ್ಟಣದಲ್ಲಿ ಜನರಿಗೆ ಚುಡಾದಿಂದ ಯಾವುದೇ ನಿವೇಶನ ಹಂಚಿಕೆಯಾಗಿಲ್ಲ. ಹಾಗಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ನೂತನ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಹೊಸ ಟೌನ್ ಶಿಪ್ ನಿರ್ಮಿಸಬೇಕು.ಕಾನೂನು ಕಾಲೇಜು: ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿದೆ. ಆದರೆ ಅದು ಕಾರ್ಯಾರಂಭ ಮಾಡಿಲ್ಲ. ಅದರ ಚಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.ಹೊಸ ಬಸ್ ನಿಲ್ದಾಣ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಈಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಚಿಕ್ಕದಾಗಿದ್ದು, ವಿಶಾಲವಾದ ಹೈಟೆಕ್ ಬಸ್‌ನಿಲ್ದಾಣವನ್ನು ಸಂತೆಮರಹಳ್ಳಿ ರಸ್ತೆಯ ರೇಷ್ಮೆ ಇಲಾಖೆ ಕಟ್ಟಡದ ಆವರಣದಲ್ಲಿ ನಿರ್ಮಿಸಲು ಅನುದಾನ ನೀಡಬೇಕಿದೆ.ವಿವಿಗೆ ಬೇಕಿದೆ ಅನುದಾನ: ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಿದೆ. ಆದರೆ, ಹೆಚ್ಚು ಅನುದಾನ ನೀಡದ ಪರಿಣಾಮ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಗಡಿ ಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡುವ ಮೂಲಕ ಕಾಳಜಿ ವಹಿಸಬೇಕಿದೆ.