ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸುವ ಮೂಲಕ ಸರ್ಕಾರ ಐತಿಹಾಸಿಕ ಕೊಡುಗೆ ನೀಡಿದೆ. ಇದಲ್ಲದೆ ಮೀನುಗಾರಿಕೆ ಸಹಿತ ವಿವಿಧ ಕ್ಷೇತ್ರಗಳಿಗೆ ಭರ್ಜರಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳೇ ಅಧಿಕವಾಗಿರುವ ಕರಾವಳಿಗೆ ಬಜೆಟ್‌ನಲ್ಲಿ ಕೊಡುಗೆ ನೀಡುವ ಮೂಲಕ ಜನತೆಯ ಚಿತ್ತ ಸೆಳೆಯುವತ್ತ ಮುಖ್ಯಮಂತ್ರಿ ಪ್ರಯತ್ನ ಆರಂಭಿಸಿದ್ದಾರೆ.ಕರಾವಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬಹು ವರ್ಷಗಳ ಬೇಡಿಕೆಯಾಗಿದ್ದು, ಅದನ್ನು ಪುತ್ತೂರಿಗೆ ದೊರಕಿಸಿಕೊಳ್ಳುವಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಯತ್ನ ಫಲ ನೀಡಿದೆ. ಪುತ್ತೂರಿಗೆ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವ ಉದ್ದೇಶವನ್ನು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಇದಕ್ಕಾಗಿ ಹಾಲಿ 100 ಬೆಡ್ ಸಾಮರ್ಥ್ಯದ ಪುತ್ತೂರು ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮೀನುಗಾರಿಕಾ ನೀತಿ, ಭರಪೂರ ಕೊಡುಗೆ:ರಾಜ್ಯದ ಮತ್ಸ್ಯಸಂಪತ್ತು ರಕ್ಷಣೆ ಜೊತೆಗೆ ಸುಸ್ಥಿರ ಮೀನುಗಾರಿಕಾ ಕೃಷಿ, ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ ನಿರೂಪಣೆ ಪ್ರಕಟಿಸಲಾಗಿದೆ. ಇದಲ್ಲದೆ ಮೀನುಗಾರಿಕಾ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಲಾಗಿದೆ.
ಮಂಗಳೂರು ಮೀನುಗಾರಿಕಾ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಸಮ್ಮತಿಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿನ ಮೀನುಗಾರಿಕಾ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದಲ್ಲಿ ಅಭಿವೃದ್ಧಿಗೆ 30 ಕೋಟಿ ರು. ಮೀಸಲಿರಿಸಲಾಗಿದೆ. ಎಸ್‌ಸಿ ಎಸ್‌ಟಿ ಮೀನುಗಾರರಿಗೆ ನಾಲ್ಕು ಚಕ್ರ ವಾಹನವನ್ನು ತಲಾ ಇಬ್ಬರಿಗೆ 50 ಸಾವಿರ ರು.ನಿಂದ ಗರಿಷ್ಠ 3 ಲಕ್ಷ ರು. ವರೆಗೆ ಆರ್ಥಿಕ ನೆರವಿನ ಪ್ರಸ್ತಾಪ ಮಾಡಲಾಗಿದೆ. ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳನ್ನು 15 ವರ್ಷ ಕಾಲಾವಧಿ ಮೀರಿದ ಹಳೆ ಎಂಜಿನನ್ನು ಬದಲಾಯಿಸಲು ಹೊಸ ಎಂಜಿನ್ ಖರೀದಿಗೆ ಶೇ.50ರಷ್ಟು 1 ಲಕ್ಷ ರು. ಮಿತಿಯಲ್ಲಿ ಸಹಾಯಧನ ಪ್ರಸ್ತಾಪಿಸಲಾಗಿದೆ. ಆಳ ಸಮುದ್ರ ಮೀನುಗಾರಿಕೆ ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.ಅಡಕೆ ಬೆಳೆಗಾರರಿಗೆ ನೆರವು:
ಮಲೆನಾಡಿನಲ್ಲಿ ಎಲೆಚುಕ್ಕಿ ರೋಗ ಬಾಧೆಗೆ 2 ಲಕ್ಷ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಸ್ಯ ಸಂರಕ್ಷಣಾ ಕ್ರಮಕ್ಕೆ 62 ಕೋಟಿ ರು. ನೆರವು ನೀಡಲಾಗುವುದು. ತೆಂಗು ಬೆಳೆ ಪ್ರದೇಶದಲ್ಲಿ ಕಪ್ಪು ಹುಳ ಬಾಧೆ ನಿಯಂತ್ರಣಕ್ಕೆ ವೈಜ್ಞಾನಿಕ ಸಮೀಕ್ಷೆ ಕೈಗೊಂಡು ಅದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.ಜಲ ಪ್ರವಾಸೋದ್ಯಮ: ಜಲಸಾರಿಗೆ ಕ್ಷೇತ್ರ ಅಭಿವೃದ್ಧಿಗೆ ಅಪಾರ ಸಾಧ್ಯತೆ ಸಲುವಾಗಿ ಕರ್ನಾಟಕ ಜಲಸಾರಿಗೆ ನೀತಿಗೆ ಮಂಜೂರಾತಿ. ಕರಾವಳಿಯಲ್ಲಿ ವ್ಯವಸ್ಥಿತ ಮೂಲಸೌಕರ್ಯ ಮತ್ತು ನೌಕಾ ಚಟುವಟಿಕೆ ನಿರ್ವಹಣೆ ದಕ್ಷತೆ ತರಲು ಸರ್ಕಾರ ಬದ್ಧವಾಗಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್ ನಿರ್ಮಾಣ. ಮಂಗಳೂರಲ್ಲಿ ಜಲ ಸಾರಿಗೆ ಸಂಗ್ರಹಾಲಯ ಹಾಗೂ ಅನುಭವ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು.
ಕಡಲ್ಕೊರೆತ ತಡೆಗೆ ಯೋಜನೆ:ಪ್ರತಿ ವರ್ಷ ಮುಂಗಾರು ಮಳೆ ವೇಳೆ ಕರಾವಳಿ ತೀರದಲ್ಲಿ ಕಡಲ್ಕೊರೆತ ಘಟನೆ ಸಂಭವಿಸುತ್ತದೆ. ಇದರ ತಡೆಗೆ ಕ್ರಮಗಳನ್ನು ತಿಳಿಸಲಾಗಿದೆ.
ಕಡಲ್ಕೊರೆತ ಪರಿಣಾಮವನ್ನು ಸಮಗ್ರವಾಗಿ ಎದುರಿಸಲು ಶೋರ್‌ಲೈನ್ ಮ್ಯಾನೇಜ್‌ಮೆಂಟ್ ಪ್ಲಾನ್‌ನ್ನು ಚೆನ್ನೈನ ಐಐಟಿ ತಯಾರಿಸಿದೆ. ಈ ಯೋಜನೆಯನ್ನು ಜಾರಿಗೊಳಿಸಲು ದ.ಕ., ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ಪ್ರತ್ಯೇಕ ವಿಸೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಇದರ ವರದಿಯನ್ನು ಆಧರಿಸಿ ಕಡಲ್ಕೊರೆತ ತಡೆಗೆ ಕಾಮಗಾರಿಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ರಾಷ್ಟ್ರೀಯ ವಿಪತ್ತು ಶಮನ ನಿಧಿಯಡಿ 200 ಕೋಟಿ ರು. ಖರ್ಚು ಮಾಡಲಾಗುವುದು.ರಾಜ್ಯ ವಿಪತ್ತು ಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಶಮನ ನಿಧಿಯಡಿ ಕರಾವಳಿಯ ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ 200 ಕೋಟಿ ರು.ಗಳ ಭೂಕುಸಿತ ತಡೆ ಕಾಮಗಾರಿ. ಕರಾವಳಿಯಲ್ಲಿ ಸಮುದ್ರ ಕೊರೆತ ತಗ್ಗಿಸಲು 200 ಕೋಟಿ ರು.ಗಳ ಯೋಜನೆ.
ಉದ್ಯೋಗ ಯೋಜನೆ: ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆ ಉತ್ತೇಜನಕ್ಕೆ 1 ಸಾವಿರ ಕೋಟಿ ರು. ವೆಚ್ಚದಲ್ಲಿ ಸ್ಥಳೀಯ ಆಕ್ಸಿಲರೇಟರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್‌ಇಎಪಿ ಆರಂಭಿಸಲು ಈ ಸಾಲಿನಲ್ಲಿ 200 ಕೋಟಿ ರು. ನೀಡಲಿದ್ದು, ರಾಜ್ಯಾದ್ಯಂತ 5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ ಸೇರಿ ನಾವೀನ್ಯತಾ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು..---------------ಬಜೆಟ್‌ನಲ್ಲಿ ದ.ಕ.ಗೆ ಲಭಿಸಿದ್ದು
-ಪಿಲಿಕುಳದಲ್ಲಿ ಭಾರತ್ ಸ್ಕೌಟ್ ಗೈಡ್ಸ್ ಅಂತಾರಾಷ್ಟೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿಗೆ 2 ಕೋಟಿ ರು. ನಿಗದಿ.-ದಾವಣಗೆರೆ ಸಹಿತ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ನವೀಕರಣಕ್ಕೆ ಒಟ್ಟು 650 ಕೋಟಿ ರು. ಮೀಸಲು.
-ಉಳ್ಳಾಲದಲ್ಲಿ ಅಸ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಪಿಯು ಕಾಲೇಜು ಮಂಜೂರು-ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು ಸೇರಿದಂತೆ ಕೆಜಿ ಐಐಟಿ ಕೇಂದ್ರಗಳಲ್ಲಿ 10 ಕೋಟಿ ರು. ವೆಚ್ಚದಲ್ಲಿ ‘ಇಂಡಸ್ಟ್ರಿ-4.0’ ಅನುಗುಣವಾಗಿ ಹೊಸ ತಂತ್ರಜ್ಞಾನ ಆಧಾರಿತ ಪಠ್ಯಕ್ರಮ ಮತ್ತು ಹೊಸ ಪ್ರಯೋಗಾಲಯ ಸ್ಥಾಪನೆ.
-ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗೆ ಒಟ್ಟಾರೆ 83 ಕೋಟಿ ರು. ಅನುದಾನ.-ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರಾಮನಗರ ಮತ್ತು ಉಳ್ಳಾಲಕ್ಕೆ 705 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಅನವುಷ್ಠಾನ. ಅಮೃತ್-2.0 ಯೋಜನೆಯಡಿ 233 ಕುಡಿಯುವ ನೀರು ಯೋಜನೆ ಕಾರ್ಯಗತ ಉದ್ದೇಶ.
-ಕಿಯೋನಿಕ್ಸ್‌ನಿಂದ ಹುಬ್ಬಳ್ಳಿ, ಬೆಳಗಾವಿ ಹಾಗೂ ಮಂಗಳೂರಲ್ಲಿ ಪ್ಲಗ್ ಅಂಡ್ ಪ್ಲೇ ಸೌಲಭ್ಯದ 3 ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ(ಜಿಟಿಸಿ) ಸ್ಥಾಪನೆ.-ದ.ಕ., ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ತಲಾ 3 ಕೋಟಿ ರು. ನಿಗದಿ.
-ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ, ಮಲ್ಲಕಂಭಗಳ ಉತ್ತೇಜನ್ಕೆಕ್ಕೆ 2 ಕೋಟಿ ರು.-ವಾಹನ ಸಂಚಾರ ಮೇಲ್ವಿಚಾರಣೆ ನಡೆಸಲು ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆಹಚ್ಚಿ ನಿಯಂತ್ರಿಸಲು ದ.ಕ. ಸೇರಿದಂತೆ ವಿವಿಧ ಜಿಲ್ಲೆಗಳ 60 ಸ್ಥಳಗಳಲ್ಲಿ 50 ಕೋಟಿ ರು.ಗಳಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆ.
-ದ.ಕ. ದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ 2 ಸೇತುವೆ ನಿರ್ಮಾಣಕ್ಕೆ ಅನುಮೋದನೆ. ----------ದ.ಕ. ಜಿಲ್ಲೆಗೆ ಪರೋಕ್ಷ ಕೊಡುಗೆ
-ಬೆಂಗಳೂರಿನ ಒತ್ತಡ ಕಡಿಮೆ ಮಾಡಲು 2(ಮಂಗಳೂರು) ಮತ್ತು 3ನೇ ಹಂತದ ನಗರಗಳನ್ನು ಸಮಗ್ರ ಅಭಿವೃದ್ಧಿಗೆ ಕ್ರಮ.-2024-25ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ ಡಿಸಿಸಿ(ಮಂಗಳೂರಿನಲ್ಲಿ ಇದೆ) ಮತ್ತು ಪಿಕಾರ್ಡ್ ಬ್ಯಾಂಕ್‌ಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲದ ಮೇಲಿನ 240 ಕೋಟಿ ರು. ಬಡ್ಡಿ ಮನ್ನಾ.
-ಎಸ್‌ಸಿ ಎಸ್‌ಟಿ, ಹಿಂದುಳಿದ ವರ್ಗ ವಿದ್ಯಾರ್ಥಿಗಳ ಉನ್ನತಿಗೆ ಪ್ರತಿ ಜಿಲ್ಲೆಗೆ 1 ವಸತಿ ಶಾಲೆ ಪಿಯುಗೆ ಉನ್ನತೀಕರಣ.-ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಮಂಗಳೂರಲ್ಲೂ ಇದೆ) ವ್ಯಾಪ್ತಿಯ 33 ಕೇಂದ್ರಗಳು ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ.
-ಅರಣ್ಯದಂಚಿನ ಹಾಡಿವಾಸಿಗಳಾದ ಮಲೆಕುಡಿಯ, ಕೊರಗ ಜನಾಂಗ(ದ.ಕ.ದಲ್ಲಿದೆ) ಮೂಲಸೌಕರ್ಯಕ್ಕೆ 200 ಕೋಟಿ ರು.-ಮಲೆಕುಡಿಯ, ಕೊರಗ ಸೇರಿದಂತೆ 13 ಬುಡಕಟ್ಟು ಜನಾಂಗಕ್ಕೆ ರಾಜ್ಯ ಸಿವಿನ್ ಸೇವೆಯಲ್ಲಿ ಪ್ರಾತಿನಿಧ್ಯ ನೀಡಲು ವಿಶೇಷ ನೇರ ನೇಮಕಾತಿ.
-ಶೈಕ್ಷಣಿಕ ಸೌಲಭ್ಯ ವಂಚಿತ ಅಲೆಮಾರಿ, ಅರೆ ಅಲೆಮಾರಿ ಜನಾಂಗದ(ದ.ಕ.ದಲ್ಲಿದ್ದಾರೆ) ವಿದ್ಯಾರ್ಥಿಗಳ ಅನುಕೂಲಕ್ಕೆ 4 ಕಂದಾಯ ವಿಭಾಗಗಳಲ್ಲಿ ತಲಾ 1 ರಂತೆ ಡಿ.ದೇವರಾಜ ಅರಸು ವಸತಿ ಶಾಲೆ, ಕ್ರಿಸ್ಟ್ ನಿರ್ಮಾಣ.-ಪಾಲಿಕೆ ವ್ಯಾಪ್ತಿಯಲ್ಲಿ 1 ಕೋಟಿ ರು. ವೆಚ್ಚದಲ್ಲಿ ಬಹೂಪಯೋಗಿ ಭವನ ನಿರ್ಮಾಣ.
-31 ಜಿಲ್ಲೆಗಳಲ್ಲಿ 6 ರಿಂದ 12ನೇ ತರಗತಿಯ ವಸತಿ ಶಾಲೆ ನಿರ್ಮಿಸಿ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಮೂಲಕ ನಿರ್ವಹಿಸಲು 750 ಕೋಟಿ ರು. ನಿಗದಿ.-ರಾಜ್ಯದ ವಿಮಾ ಆಸ್ಪತ್ರೆ(ಮಂಗಳೂರು) ಗಳಿಗೆ ಮೂಲ ಸೌಕರ್ಯಕ್ಕೆ 51 ಕೋಟಿ ರು.
-ಹೊಸ ಮರಳುಗಾರಿಕೆ ನಿಯಮ ಜಾರಿ, ರಾಜ್ಯಾದ್ಯಂತ ಏಕರೂಪ ಮರಳು ದರ ನಿಗದಿಗೆ ಕ್ರಮ.-ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓದು’ ಕಾದಂಬರಿಯನ್ನು 1 ಕೋಟಿ ರು.ಗಳಲ್ಲಿ ನಾಟಕ ರೂಪದಲ್ಲಿ ನಿರ್ಮಿಸಿ ರಾಜ್ಯಾದ್ಯಂತ ಪ್ರದರ್ಶನಕ್ಕೆ ಕ್ರಮ.