ಶಿವಾನಂದ ಗೊಂಬಿ
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿನ ಸಮಸ್ಯೆಗಳಿಗೆ ಪರಿಹಾರದ ಧ್ವನಿಯಾಗುವುದೇ ಈ ಸಲದ ಬಜೆಟ್? ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿಗೆ, ಈ ಭಾಗದ ಅಭಿವೃದ್ಧಿಗೆ ಪೂರಕವಾಗುವಂತೆ ಕೈಗಾರಿಕೆಗಳಿಗೆ ಉತ್ತೇಜನ ಕೊಡುವ ಕೆಲಸ ಈ ಬಜೆಟ್‌ನಲ್ಲಿ ಆಗಲಿದೆಯೇ?ಇವು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ. 7ರಂದು ಮಂಡಿಸಲಿರುವ ತಮ್ಮ 16ನೆಯ ಬಜೆಟ್ ಹಾಗೂ ಈ ಸರ್ಕಾರದ 2ನೆಯ ಬಜೆಟ್ ಮೇಲೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜನತೆಯ ನಿರೀಕ್ಷೆಗಳು.
ಎರಡನೆಯ ಸ್ತರದ ನಗರಗಳಿಗೆ ಕೈಗಾರಿಕೆಗಳು ಬರಬೇಕು. ಬಿಯಾಂಡ್ ಬೆಂಗಳೂರು ಎಂಬುದೆಲ್ಲವೂ ಬರೀ ಸರ್ಕಾರದ ಬಿಟ್ಟಿ ಪ್ರಚಾರದ ಸರಕುಗಳಾಗಿವೆ ಎನ್ನುವ ಅಪಸ್ವರಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಬೆಂಗಳೂರು ಬಿಟ್ಟು ಬೇರೆ ಕಡೆಗಳಲ್ಲಿ ಯಾವ ಕೈಗಾರಿಕೆಗಳೂ ಬರುತ್ತಲೇ ಇಲ್ಲ. 2019ರಲ್ಲಿ ಬಂಡವಾಳ ಹೂಡಿಕೆ ಸಮಾವೇಶವನ್ನೂ ನಡೆಸಲಾಗಿತ್ತು. ಆಗ ಬರೋಬ್ಬರಿ ₹83 ಸಾವಿರ ಕೋಟಿ ಬಂಡವಾಳ ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ವಾಗ್ದಾನವಾಗಿತ್ತು. ಅವು ಯಾವವೂ ಬರಲೇ ಇಲ್ಲ. ಸರ್ಕಾರ ಹೂಡಿಕೆದಾರರಿಗೆ ಸಮಾವೇಶದ ವೇಳೆ ಹೇಳಿದ್ದ ನಿವೇಶನ ದರವನ್ನು ಏಕಾಏಕಿ ಏರಿಕೆ ಮಾಡಿ ಬಿಟ್ಟಿದೆ. ಉದ್ಯಮಿಗಳ ಪೈಕಿ ಅರ್ಧದಷ್ಟು ಜನ ದರ ಏರಿಕೆಯಿಂದ ಬರಲು ಹಿಂಜರಿದರೆ, ಇನ್ನರ್ಧ ಹೂಡಿಕೆದಾರರು ಪರವಾನಗಿ, ಸೇರಿದಂತೆ ಮತ್ತಿತರರ ಕೆಲಸಗಳಿಗೆ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಬೇಸತ್ತು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಉದ್ಯಮಿಗಳದ್ದು.ಎಫ್‌ಎಂಸಿಜಿ ಕ್ಲಸ್ಟರ್ ಆರಂಭಕ್ಕೆ ಉದ್ಯಮಿದಾರರು ಮುಂದಾಗಿದ್ದರು. ಆದರೆ, ಸರ್ಕಾರದ ನೀತಿಯಿಂದ ಹಿಂದೆ ಸರಿದಿವೆ ಎಂಬುದು ಮಾತ್ರ ಸ್ಪಷ್ಟ.
ಇನ್ನು ಇತ್ತೀಚಿಗಷ್ಟೇ ಬೆಂಗಳೂರಲ್ಲಿ ನಡೆದ ಸಮಾವೇಶದಲ್ಲಿ ₹10.27 ಲಕ್ಷ ಕೋಟಿ ವಾಗ್ದಾನದಲ್ಲಿ ಶೇ. 45ರಷ್ಟು ಬಂಡವಾಳ ಉತ್ತರ ಕರ್ನಾಟಕದಲ್ಲಿ ಹೂಡಿಕೆಯ ವಾಗ್ದಾನವಾಗಿದೆ. ಇದನ್ನಾದರೂ ತರಲು ಈ ಸರ್ಕಾರ ಪ್ರಯತ್ನ ಪಡುವುದೇ ಎಂಬುದು ಇದೀಗ ಎದ್ದಿರುವ ಪ್ರಶ್ನೆ.ಕಾರಿಡಾರ್
ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಇದೇ ಮಾರ್ಗದಲ್ಲಿ ಹಾಯ್ದು ಹೋಗುತ್ತದೆ. ಧಾರವಾಡ ಹಾಗೂ ತುಮಕೂರು ಭಾಗದಲ್ಲಿ ವಿಶೇಷ ಹೂಡಿಕೆ ಪ್ರದೇಶಗಳೆಂದು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂಬ ಬೇಡಿಕೆ ಜನರದ್ದು. ಈ ಕೆಲಸಕ್ಕೆ ಒತ್ತು ನೀಡಬೇಕು.ಇನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಧಾರವಾಡದಲ್ಲಿ ಎಸ್‌ಐಆರ್ (ವಿಶೇಷ ಹೂಡಿಕೆ ವಲಯ) ಎಂದು ಘೋಷಿಸಿತ್ತು. ಆದರೆ, ಮುಂದೆ ಬೊಮ್ಮಾಯಿ ಸರ್ಕಾರ ಹೋಯ್ತು. ಸಿದ್ದರಾಮಯ್ಯ ಸರ್ಕಾರ ಬಂತು. ಆ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಆದಕಾರಣ ಎಸ್‌ಐಆರ್ ಅನ್ನು ಮರುಘೋಷಣೆ ಮಾಡಿ ಅದನ್ನು ಜಾರಿಗೊಳಿಸಬೇಕು. ಇದರಿಂದ ಉದ್ಯಮಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.
ಕೃಷಿ ಉತ್ಪನ್ನಉತ್ತರ ಕರ್ನಾಟಕದ ಗದಗ, ಹಾವೇರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿಗೆ ಪೂರಕವಾಗುವಂತಹ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಬೇಕು.
ಆರ್ಯಭಟ್ ಪಾರ್ಕ್, ಐಟಿ ಪಾರ್ಕ್ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕು. ಹೆಚ್ಚಿನ ಉದ್ಯಮಿಗಳು ಇಲ್ಲಿಗೆ ಬರುವಂತೆ ಮನವೊಲಿಸುವ ಕೆಲಸಗಳಾಗಬೇಕು. ಇದಕ್ಕೆಲ್ಲ ಪೂರಕವೆಂಬಂತೆ ಉದ್ಯಮಿಗಳಿಗೆ ಏಕಗವಾಕ್ಷಿಯಂತೆ ಕೈಗಾರಿಕಾ ಇಲಾಖೆಯನ್ನು ಉದ್ಯಮಿ ಸ್ನೇಹಿಯನ್ನಾಗಿಸುವ ಎಸ್‌ಐಆರ್ ಆ್ಯಕ್ಟ್ ಮರುಘೋಷಣೆಯಾಗಿ ಕೂಡಲೇ ಜಾರಿ ಮಾಡಬೇಕು. ಎಂಎಸ್‌ಎಂಇಗಳಿಗೆ ಕೆಲವೊಂದಿಷ್ಟು ರಿಯಾಯಿತಿ ನೀಡಬೇಕು ಎಂಬುದು ಉದ್ಯಮಿಗಳ ಬೇಡಿಕೆ.ಒಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೆಲಸ ಈ ಬಜೆಟ್‌ನಲ್ಲಿ ಆಗಲಿ ಎಂಬುದು ಯುವ ಸಮೂಹದ ಒತ್ತಾಸೆ.
ಮರುಘೋಷಣೆಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗುವಂತೆ ಕೈಗಾರಿಕಾ ವಸಾಹತುಗಳಿಗೆ ಉತ್ತೇಜನ ನೀಡಬೇಕು. ಎಸ್‌ಐಆರ್ ಹಿಂದೆ ಬರೀ ಘೋಷಣೆಯಷ್ಟೇ ಆಗಿತ್ತು. ಆ ಬಳಿಕ ಯಾವ ಕೆಲಸವೂ ಆಗಲಿಲ್ಲ. ಇದೀಗ ಮರುಘೋಷಣೆ ಮಾಡಿ, ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.
- ಶ್ರೀಕಾಂತ ಯರಗಟ್ಟಿ, ಉದ್ಯಮಿ