ಶಿವಾನಂದ ಗೊಂಬಿ
ಹುಬ್ಬಳ್ಳಿ:ಕೇಂದ್ರ ಸರ್ಕಾರ ಬಜೆಟ್ ಮಂಡಿಸಿ ಬರೋಬ್ಬರಿ 12 ದಿನಗಳಾಗಿವೆ. ಆದರೆ ಈ ವರೆಗೂ ನೈಋತ್ಯ ರೈಲ್ವೆ ವಲಯಕ್ಕೆ ಎಷ್ಟು ಅನುದಾನ ಬಂದಿದೆ, ಯಾವುದಕ್ಕೆ ಎಷ್ಟು ವೆಚ್ಚ ನಿಗದಿ ಮಾಡಲಾಗಿದೆ ಎಂಬುದು ಅಧಿಕಾರಿಗಳಿಗೇ ಗೊತ್ತಾಗುತ್ತಿಲ್ಲ. ಇಷ್ಟು ದಿನವಾದರೂ ಏಕೆ ಪಿಂಕ್ ಏಕೆ ಬರುತ್ತಿಲ್ಲ ಎಂಬುದು ನಿಗೂಢವಾಗಿದೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲು ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆಗೆಲ್ಲ ಅದೇ ದಿನ ರೈಲ್ವೆ ಮಂತ್ರಿಗಳು ಬಜೆಟ್ ಮಂಡಿಸುತ್ತಿದ್ದ ವೇಳೆಯೇ ಜನರಿಗೂ ಹಾಗೂ ಅಧಿಕಾರಿಗಳಿಗೂ ತಿಳಿಯುತ್ತಿತ್ತು. ಆದರೆ ಎನ್‌ಡಿಎ ಸರ್ಕಾರ ಬಂದ ಮೇಲೆ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ನಿಲ್ಲಿಸಿ ಕೇಂದ್ರದ ಬಜೆಟ್‌ನಲ್ಲೇ ಸೇರಿಸಲಾಯಿತು. ಆಗಿನಿಂದ ಬಜೆಟ್ ಮಂಡನೆಯಾದ ಮರುದಿನ ತಪ್ಪಿದರೆ ಅದರ ಮರುದಿನ ಎಲ್ಲ ರೈಲ್ವೆ ವಲಯಗಳಿಗೆ ಪಿಂಕ್ ಬುಕ್ ಹೋಗುತ್ತಿತ್ತು. ಇದರ ಮಾಹಿತಿಯನ್ನು ಮರುದಿನ ಅಥವಾ ಅದರ ಮರುದಿನ ಅಧಿಕಾರಿಗಳು, ನಮ್ಮ ವಲಯಕ್ಕೆ ಇಂಥ ಕಾಮಗಾರಿಗಳಿಗೆ ಇಂತಿಷ್ಟು ಅನುದಾನ ಮೀಸಲಿಡಲಾಗಿದೆ. ಹೊಸ ಯೋಜನೆಗಳು ಇಷ್ಟು ಬಂದಿವೆ ಎಂದು ಮಾಹಿತಿ ನೀಡುತ್ತಿದ್ದರು. ಆದರೆ ಈ ವರ್ಷ ಜು. 23ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದರು. ಅಲ್ಲಿಂದ ಈ ವರೆಗೂ (ಆ.4ರವರೆಗೂ) ಪಿಂಕ್ ಬುಕ್ ಬಂದಿಲ್ಲ. ಹೀಗಾಗಿ ಜನ ಸಾಮಾನ್ಯರಿಗೆ ಹೋಗಲಿ, ಅಧಿಕಾರಿ ವರ್ಗಕ್ಕೂ ತಮ್ಮ ವಲಯಗಳಿಗೆ ಎಷ್ಟು ಅನುದಾನ ಬಂದಿದೆ ಎಂಬುದು ಗೊತ್ತಾಗುತ್ತಿಲ್ಲ.ಆದರೆ, ಬಜೆಟ್ ಮರುದಿನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ದೆಹಲಿಯಿಂದ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿದ್ದರು. ಅದರಲ್ಲಿ ಕರ್ನಾಟಕಕ್ಕೆ ₹ 7559 ಕೋಟಿ ಅನುದಾನ ನೀಡಲಾಗಿದೆ. ಯುಪಿಎ ಸರ್ಕಾರ ಇದ್ದಾಗ ನೀಡಿದ್ದ ಅನುದಾನಕ್ಕಿಂತಲೂ ಇದು 9 ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದರು. ಯಾವ್ಯಾವ ವಲಯಕ್ಕೆ ಎಷ್ಟು ಬಂದಿದೆ ಎಂಬ ಪ್ರಶ್ನೆಗೆ ಸಚಿವರು ಆಯಾ ವಲಯಗಳ ಮಹಾಪ್ರಬಂಧಕರು ವಿವರಿಸುತ್ತಾರೆ ಎಂದ್ಹೇಳಿ ಪತ್ರಿಕಾಗೋಷ್ಠಿ ಮುಕ್ತಾಯಗೊಳಿಸಿದ್ದರು.
ಆದರೆ ಆಗಿನಿಂದ ಮಹಾಪ್ರಬಂಧಕರಿಗೆ ತಮ್ಮ ವಲಯಕ್ಕೆ ಯಾವ್ಯಾವ ಕೆಲಸಗಳಿಗೆ ಎಷ್ಟೆಷ್ಟು ಅನುದಾನ ಬಂದಿದೆ ಎಂಬುದು ಗೊತ್ತೇ ಇಲ್ಲ. ನೈಋತ್ಯ ರೈಲ್ವೆ ವಲಯ ಕರ್ನಾಟಕದ 84 ಪ್ರದೇಶ, (ಕರ್ನಾಟಕದ ಕೆಲವೊಂದಿಷ್ಟು ಭಾಗ ಸೆಂಟ್ರಲ್ ವಲಯಕ್ಕೆ ಸೇರುತ್ತದೆ) ಆಂಧ್ರ, ಗೋವಾ, ಮಹಾರಾಷ್ಟ್ರ ಮೂರು ರಾಜ್ಯಗಳ ಶೇ, 16ರಷ್ಟು ಪ್ರದೇಶದ ವ್ಯಾಪ್ತಿ ಹೊಂದಿದೆ. ಹೀಗಾಗಿ ನಾಲ್ಕು ರಾಜ್ಯಗಳ ವ್ಯಾಪ್ತಿ ಈ ವಲಯಕ್ಕೆ ಬರುತ್ತದೆ.ಹತ್ತಾರು ಯೋಜನೆಗಳು ನನೆಗುದಿಗೆ ಬಿದ್ದಿದ್ದರೆ, ಹೊಸ ಯೋಜನೆಗಳಿಗೆ ಅನುದಾನ ಬರಬೇಕಿದೆ. ವಿದ್ಯುದ್ದೀಕರಣ, ಡಬ್ಲಿಂಗ್, ನೂತನ ಮಾರ್ಗದ ಸಮೀಕ್ಷೆ ಹೀಗೆ ನೂರೆಂಟು ಕೆಲಸಗಳು ವಲಯದ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಆದರೆ ಯಾವ್ಯಾವ ಕೆಲಸಕ್ಕೆ ಎಷ್ಟು ಅನುದಾನ ಎಂಬುದೇ ಗೊತ್ತಾಗುತ್ತಿಲ್ಲ ಏನು ಮಾಡೋದು ಎಂಬುದು ಅಧಿಕಾರಿ ವರ್ಗದ ಮಾತು.
ಒಟ್ಟಿನಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಿ 12 ದಿನ ಪೂರ್ಣವಾದರೂ ನೈಋತ್ಯ ರೈಲ್ವೆ ವಲಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದು ಗೊತ್ತಾಗುತ್ತಿಲ್ಲ ಎಂಬುದು ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದ್ದುಂತೂ ಸತ್ಯ.!ನೈಋತ್ಯ ರೈಲ್ವೆ ವಲಯಕ್ಕೆ ಈ ಸಲದ ಬಜೆಟ್‌ನಲ್ಲಿ ಎಷ್ಟು ಅನುದಾನ ಸಿಕ್ಕಿದೆ ಎಂಬುದು ಈ ವರೆಗೂ ಗೊತ್ತಿಲ್ಲ. ಪಿಂಕ್ ಬುಕ್ ಇನ್ನೂ ಬಂದಿಲ್ಲ. ಮೀಸಲಿರಿಸಲಾಗಿರುವ ಅನುದಾನದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಹೇಳಿದರು.