ವಿವಿ, ಪಿಜಿ ಸೆಂಟರ್‌ ಬಲವರ್ಧನೆಗೆ ಬಜೆಟ್‌ ಆಸರೆಯಾದೀತೆ?

KannadaprabhaNewsNetwork |  
Published : Feb 15, 2024, 01:30 AM IST
ಬಜೆಟ್‌ | Kannada Prabha

ಸಾರಾಂಶ

ಕೊಪ್ಪಳ ವಿವಿ ಕೇವಲ ನಾಮ್ ಕೆ ವಾಸ್ತೆ ಎನ್ನುವಂತೆ ಇದ್ದು, ಅದಕ್ಕೆ ಬೇಕಾಗಿರುವ ಅಧಿಕಾರ, ಆಡಳಿತ ಸಿಬ್ಬಂದಿ, ಮೂಲ ಸೌಕರ್ಯ ಸೇರಿದಂತೆ ಉಳಿದ್ಯಾವುದನ್ನು ರಾಜ್ಯ ಸರ್ಕಾರ ಮಂಜೂರು ಮಾಡಿಲ್ಲ, ಕೊಪ್ಪಳ ವಿವಿ ಜಾಗೆ ಹುಡುಕಾಟ ಪ್ರಯತ್ನ ನಡೆಯಿತಾದರೂ ಅದು ಇದುವರೆಗೂ ಕಾರ್ಯಗತವಾಗಿಲ್ಲ

ಸೋಮರಡ್ಡಿ ಅಳವಂಡಿ ಕೊಪ್ಪಳ

ಜಿಲ್ಲೆಯಲ್ಲಿ ಶೈಕ್ಷಣಿಕ ಸಮಸ್ಯೆಗಳು ಸಾಲು ಸಾಲು ಇದ್ದು, ಹಾಸ್ಟೆಲ್ ದಿಂದ ಹಿಡಿದು ಇತ್ತೀಚೆಗೆ ಸ್ಥಾಪನೆಯಾಗಿರುವ ಕೊಪ್ಪಳ ವಿವಿಗೆ ಜಾಗ, ಕಟ್ಟಡದ ಸಮಸ್ಯೆ, ಸ್ನಾತಕೋತ್ತರ ಕೇಂದ್ರಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯ ಸಮಸ್ಯೆ ಶೈಕ್ಷಣಿಕ ವಲಯವನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯ ಅವಕಾಶ, ಪ್ರೋತ್ಸಾಹ ಇಲ್ಲದಿರುವುದರಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆ ಇನ್ನೂ ರಾಜ್ಯ ಸರ್ಕಾರಕ್ಕೆ ತಲುಪುತ್ತಿಲ್ಲ.

ಬಹು ವರ್ಷಗಳ ಒತ್ತಾಯದ ಮೇರೆಗೆ ಕೊಪ್ಪಳ ವಿವಿ ಸ್ಥಾಪನೆ ಮಾಡಲಾಗಿದೆ. ಇದು ಸಹ ಪೂರ್ಣ ಪ್ರಮಾಣದಲ್ಲಿ ಇದುವರೆಗೂ ಸ್ಥಾಪನೆಯಾಗಿಲ್ಲ, ಬದಲಾಗಿ ಅದೊಂದು ವಿವಿಯಾಗಿ ದಾಖಲೆಯಲ್ಲಿ ಮಾತ್ರ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದೆ. ಕೊಪ್ಪಳ ವಿವಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪನೆ ಮಾಡಲು ಅಗತ್ಯ ಜಾಗ ಇನ್ನೂ ಗುರುತಿಸಲಾಗಿಲ್ಲ. ಈಗ ತಳಕಲ್ ಎಂಜನಿಯರಿಂಗ್ ಕಾಲೇಜಿನಲ್ಲಿ ನಡೆಸಲಾಗುತ್ತದೆ. ಆದರೆ, ಅಲ್ಲಿಯೂ ಸಹ ಮೂಲಭೂತ ಸೌಲಭ್ಯಗಳು ಇಲ್ಲ, ವಿವಿಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಜಿಲ್ಲಾ ಕೇಂದ್ರದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ, ಸ್ಥಳಾಂತರ ಮಾಡುವ ಪ್ರಯತ್ನ ನಡೆಯುತ್ತಿಲ್ಲ.

ಇದಕ್ಕಿಂತ ಮಿಗಿಲಾಗಿ ಕೊಪ್ಪಳ ವಿವಿ ಕೇವಲ ನಾಮ್ ಕೆ ವಾಸ್ತೆ ಎನ್ನುವಂತೆ ಇದ್ದು, ಅದಕ್ಕೆ ಬೇಕಾಗಿರುವ ಅಧಿಕಾರ, ಆಡಳಿತ ಸಿಬ್ಬಂದಿ, ಮೂಲ ಸೌಕರ್ಯ ಸೇರಿದಂತೆ ಉಳಿದ್ಯಾವುದನ್ನು ರಾಜ್ಯ ಸರ್ಕಾರ ಮಂಜೂರು ಮಾಡಿಲ್ಲ, ಕೊಪ್ಪಳ ವಿವಿ ಜಾಗೆ ಹುಡುಕಾಟ ಪ್ರಯತ್ನ ನಡೆಯಿತಾದರೂ ಅದು ಇದುವರೆಗೂ ಕಾರ್ಯಗತವಾಗಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಅಲ್ಲಿ ಪ್ರವೇಶ ಪಡೆಯಲು ಯತ್ನಿಸುವ ಸಾವಿರಾರು ವಿದ್ಯಾರ್ಥಿಗಳು ಸೀಟು ಸಿಗದೆ ವಂಚಿತರಾಗುತ್ತಿದ್ದಾರೆ. ಈಗಾಗಲೇ ನಾಲ್ಕಾರು ಸಾವಿರ ವಿದ್ಯಾರ್ಥಿಗಳು ಇದ್ದು, ಇರುವ ಕಟ್ಟಡ ಸಾಕಾಗುತ್ತಿಲ್ಲ. ಈ ನಡುವೆ ಪರ್ಯಾಯವಾಗಿ ಬಹದ್ದೂರುಬಂಡಿ ರಸ್ತೆಯಲ್ಲಿ ಗುಡ್ಡದ ಮೇಲೆ ಸ್ನಾತಕೊತ್ತರ ಕೇಂದ್ರ ನಿರ್ಮಾಣ ಮಾಡಲಾಗಿದ್ದು, ಅದು ಸಹ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಆದರೂ ಕಟ್ಟಡವನ್ನು ಪದವಿ ಕಾಲೇಜಿಗೂ ಬಳಕೆ ಮಾಡಿಕೊಳ್ಳಲಾಗುತ್ತದೆ. ಪದವಿ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣವಾದರೆ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ತಳಕಲ್ ಎಂಜನಿಯರಿಂಗ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಪ್ರಾರಂಭಿಸುವ ಕುರಿತು ಪ್ರಸ್ತಾವನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ.

ತೋಟಗಾರಿಕಾ ಕಾಲೇಜು: ಮುನಿರಾಬಾದ್ ನಲ್ಲಿ ತೋಟಗಾರಿಕಾ ಕಾಲೇಜು ಇದೆಯಾದರೂ ಅದು ಪೂರ್ಣ ಪ್ರಮಾಣದಲ್ಲಿ ಆಗಬೇಕಾಗಿದೆ. ತೋಟಗಾರಿಕಾ ವಿವಿಯ ಅನೇಕ ಕೋರ್ಸ್ ಪ್ರಾರಂಭವಾಗದೆ ಇರುವುದರಿಂದ ವಿದ್ಯಾರ್ಥಿಗಳು ಬೇರೆಡೆ ಹೋಗುವಂತಾಗಿದೆ. ಸ್ನಾತಕೊತ್ತರ ಕೇಂದ್ರ ಕೊಪ್ಪಳ, ಗಂಗಾವತಿ, ಯಲಬುರ್ಗಾದಲ್ಲಿ ಮಾತ್ರ ಇದ್ದು, ಉಳಿದ ತಾಲೂಕು ಕೇಂದ್ರಗಳಲ್ಲಿಯೂ ಆಗಬೇಕಾಗಿದೆ. ಹೀಗೆ ಉನ್ನತ ಶಿಕ್ಷಣದ ಅಭಾವ ದೊಡ್ಡ ಪ್ರಮಾಣದಲ್ಲಿಯೇ ಇದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನಷ್ಟು ಕಾಲೇಜುಗಳು ಆಗಬೇಕಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿಯೂ ಮೂಲಭೂತ ಸೌಕರ್ಯಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ಇವೆ. ಶಿಕ್ಷಕರ ಕೊರತೆ ಮತ್ತು ಶಾಲಾ ಕಟ್ಟಡಗಳ ಕೊರತೆ ಇದ್ದು, ಇದನ್ನು ನಿಭಾಯಿಸುವ ದಿಸೆಯಲ್ಲಿ ಸರ್ಕಾರ ಅಗತ್ಯ ಅನುದಾನ ನೀಡಬೇಕಾಗಿದೆ.

ವೈದ್ಯಕೀಯ ಶಿಕ್ಷಣ: ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದು. ಈಗಾಗಲೇ ಇಲ್ಲಿ ಸ್ನಾತಕೊತ್ತರ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ, ಇನ್ನೊಂದಿಷ್ಟು ಕೋರ್ಸ್ ಪ್ರಾರಂಭಿಸಬೇಕು. ಇದಕ್ಕೆ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯಾದಾಗ ಪ್ರಾರಂಭಿಸಲು ತಾಂತ್ರಿಕವಾಗಿ ಸಾಧ್ಯವಿದೆ. ಹೀಗಾಗಿ, ನಿರ್ಮಾಣವಾಗಿರುವ 750 ಹಾಸಿಗೆ ಆಸ್ಪತ್ರೆಯನ್ನು 1000 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ದಗೇರಿಸಬೇಕಾಗಿದೆ. ಹೀಗಾಗಿ, ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ನೀಡಬೇಕಾಗಿದೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ