ಬಜೆಟ್: ಕೊಟ್ಟಿರೋಕ್ಕಿಂತ ಕೊಡದೆ ಇರೋದೆ ಹೆಚ್ಚು

KannadaprabhaNewsNetwork | Published : Feb 15, 2024 1:17 AM

ಸಾರಾಂಶ

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಮಲತಾಯಿಯ ಮಕ್ಕಳಂತೆ ಕಾಣುವ ಪರಿಪಾಠ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.

2023-24ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದು ಮೂರು ಯೋಜನೆ । ಒಂದರಲ್ಲಿ ಪ್ರಗತಿ, ಇನ್ನೆರಡಲ್ಲಿ ಶೂನ್ಯ ಸಾಧನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಮಲತಾಯಿಯ ಮಕ್ಕಳಂತೆ ಕಾಣುವ ಪರಿಪಾಠ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಬಜೆಟ್‌ನಲ್ಲಿ ಜಿಲ್ಲೆಗೆ ಕೆಲವು ಯೋಜನೆಗಳನ್ನು ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಆಡಳಿತ ಪಕ್ಷದ ಶಾಸಕರು ಮನವಿ ಸಲ್ಲಿಸುವುದು ಸಂಪ್ರದಾಯವಾಗಿದ್ದರೆ, ಬಜೆಟ್ ನೋಡಿ ವಿರೋಧ ವ್ಯಕ್ತಪಡಿಸುವುದು ಪ್ರತಿಪಕ್ಷಗಳ ವಾಡಿಕೆ. ಅಂದರೆ, ಯಾವುದೇ ಸರ್ಕಾರದಿಂದಲೂ ನಿರೀಕ್ಷಿತ ಮಟ್ಟದಲ್ಲಿ ಕಾಫಿ ನಾಡಿಗೆ ಕೊಡುಗೆಗಳು ಬಂದಿಲ್ಲ. 2023-24ರಲ್ಲಿ ಎರಡು ಬಾರಿ ರಾಜ್ಯದಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಫೆಬ್ರವರಿಯಲ್ಲಿ ಎಸ್.ಆರ್. ಬೊಮ್ಮಾಯಿ ಅವರು ಬಜೆಟ್ ಮಂಡಿಸಿದ್ದರೆ, ಜುಲೈ ಮಾಹೆಯಲ್ಲಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದರು. ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೂರು ಕೊಡುಗೆಗಳನ್ನು ನೀಡಿದ್ದರು. ಜಿಲ್ಲಾ ಕೇಂದ್ರದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ, ಕಾಫಿಗೆ ಬ್ರ್ಯಾಂಡ್ ರೂಪ ನೀಡುವುದು, ಎನ್.ಆರ್.ಪುರದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ. ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ಹಿಳುವಳ್ಳಿ ಗ್ರಾಮದ ಸರ್ವೆ ನಂಬರ್ 76 ರಲ್ಲಿ 2 ಎಕರೆ ಜಾಗವನ್ನು ಜಿಲ್ಲಾಡಳಿತ ಕಾಯ್ದಿರಿಸಿದೆ. 3 ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ. ಕಾಯ್ದಿರಿಸಿರುವ ಜಾಗದಲ್ಲಿ ಇರುವ ಮರಗಳನ್ನು ತೆರವು ಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಮರ ತೆರವಾದ ನಂತರ ಕಾಮಗಾರಿ ಆರಂಭವಾಗಲಿದೆ. ಇನ್ನುಳಿದ ಎರಡು ಯೋಜನೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ. ಚಿಕ್ಕಮಗಳೂರಿನ ಗೌಡನಹಳ್ಳಿ ರಸ್ತೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕನಸು ಸುಮಾರು ಒಂದು ದಶಕದ ಹಿಂದಿನದು. ಕಳೆದ ವರ್ಷ ಬಜೆಟ್‌ನಲ್ಲಿ ಈ ಯೋಜನೆ ಮತ್ತೆ ಘೋಷಣೆಯಾಯಿತು. ಇಲ್ಲಿಗೆ 1,200 ಮೀಟರ್ ರನ್ ವೇ ನಿರ್ಮಾಣವಾಗಬೇಕಿದ್ದು, ಇದಕ್ಕೆ 140 ಎಕರೆ ಜಾಗದ ಅಗತ್ಯವಿದೆ. ಇಲ್ಲಿಗೆ ಜಿಲ್ಲಾಡಳಿತ 120 ಎಕರೆ, 22 ಗುಂಟೆ ಜಾಗವನ್ನು ಈ ಹಿಂದೆಯೇ ಕಾಯ್ದಿರಿಸಿದ್ದು, ಬಾಕಿ 19 ಎಕರೆಯನ್ನು ಸುತ್ತಮುತ್ತಲ ರೈತರಿಂದ ಸ್ವಾಧೀನ ಮಾಡಿಕೊಳ್ಳಬೇಕಿದೆ. ಉಪ ವಿಭಾಗಾಧಿಕಾರಿ ರೈತರೊಂದಿಗೆ ಸಭೆ ನಡೆಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಪ್ರಸ್ತಾವನೆ ಕೋರಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿ ಕಿರು ವಿಮಾನ ನಿಲ್ದಾಣಕ್ಕೆ ಮೀಸಲಿರಿಸಿರುವ ಜಾಗ ಪರಿಶೀಲನೆ ನಡೆಸಿದ್ದರು. ಭೂ ಸ್ವಾಧೀನಕ್ಕಾಗಿ ಸರ್ಕಾರ ಈಗಾಗಲೇ 7 ಕೋಟಿ ರು. ಗಳನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿದೆ. ಸದ್ಯ ಆಡಳಿತಾತ್ಮಕ ಅನುಮೋದನೆ ದೊರಕಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಸ್ತಾವನೆ ಸಲ್ಲಿಕೆಯಾದರೆ ಅಗತ್ಯ ಇರುವ ಜಾಗವನ್ನು ಸ್ವಾಧೀನ ಮಾಡಿಕೊಡಲಾಗುವುದು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಎಸ್‌ಐಐಡಿಸಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಿದೆ. ಆದರೆ, ಈವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ.

ಕಾಫಿ ಬ್ರ್ಯಾಂಡಿಂಗ್: ರಾಜ್ಯದ ಕಾಫಿಯನ್ನು ಮೌಲ್ಯವರ್ಧಿಸಿ ಬ್ರ್ಯಾಂಡ್ ಮಾಡುವುದಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಕಳೆದ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿತ್ತು. ಅದು ಪ್ರಸ್ತಾಪದಲ್ಲೇ ಉಳಿದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾಬುಡನ್‌ ಗಿರಿಯ ಅರೇಬಿಕಾ ಕಾಫಿ ವೈವಿಧ್ಯವು ಜಿ.ಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರ ಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಹೇಳಿತ್ತು. ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಇದೆ. ಈ ಕಾಫಿಯನ್ನು ಇನ್ನಷ್ಟು ಮೌಲ್ಯವರ್ಧಿಸಿ ಬ್ರ್ಯಾಂಡಿಂಗ್ ರೂಪ ನೀಡಿದರೆ ಬೇಡಿಕೆ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ.

ನನಸಾಗುವುದೇ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಕನಸು:

2024-25ರ ಬಜೆಟ್‌ನಲ್ಲಿ ಕಾಫಿ ನಾಡಿನ ನಿರೀಕ್ಷೆಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಕಾಫಿ ನಾಡು ಬಜೆಟ್‌ನಲ್ಲಿ ಹಲವು ನಿರೀಕ್ಷೆ ಹೊಂದಿದೆ. ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಪುನರ್ಜನ್ಮ ನೀಡಿರುವ ಈ ಜಿಲ್ಲೆಗೆ 2024-25ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಏನಾದರೂ ಶಾಶ್ವತ ಕೊಡುಗೆ ನೀಡಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಹಿಂದಿನ ಯಾವುದೇ ಸರ್ಕಾರಗಳು ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲೇ ಇಲ್ಲ. ಆಡಳಿತ ಪಕ್ಷದ ಶಾಸಕರು ಪ್ರತಿ ಬಜೆಟ್‌ ನಲ್ಲೂ ನುಣುಚಿಕೊಳ್ಳುತ್ತಲೇ ಬಂದರು. ಜಾನುವಾರುಗಳ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ, ಹಾಲು ಉತ್ಪಾದನೆ ಯಲ್ಲೂ ಹಿಂದೆ ಇದ್ದೆವೇ ಎಂದು ಹೇಳುತ್ತಾ ಬಂದಿದ್ದಾರೆ.

ತರೀಕೆರೆ, ಕಡೂರು, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಲ್ಲಿ ರೈತರು ಹೈನುಗಾರಿಕೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಬರ ಬರುವ ಈ ಪ್ರದೇಶಗಳಲ್ಲಿ ಹೈನುಗಾರಿಕೆ ರೈತರಿಗೆ ಆರ್ಥಿಕ ಚೈತನ್ಯ ತುಂಬಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣವಾದರೆ ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂಬುದು ರೈತರ ಅಭಿಪ್ರಾಯ. ಹಾಗಾಗಿ ಈ ಬಾರಿಯಾದರೂ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಘೋಷಣೆಯಾಗುತ್ತಾ ನೋಡಬೇಕಾಗಿದೆ.

ಕುವೆಂಪು ವಿವಿ ಸ್ಥಾಪನೆ ಆರಂಭದಲ್ಲಿ ಶಿವಮೊಗ್ಗ ಕೇಂದ್ರವನ್ನಾಗಿಸಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳನ್ನು ಈ ವ್ಯಾಪ್ತಿಗೆ ಸೇರಿಸಲಾಯಿತು. ನಂತರದ ವರ್ಷಗಳಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ವಿಶ್ವವಿದ್ಯಾಲಯ ನೀಡಲಾಯಿತು. ಚಿಕ್ಕಮಗಳೂರು ಜಿಲ್ಲೆಗೂ ಪ್ರತ್ಯೇಕ ವಿಶ್ವವಿದ್ಯಾಲಯ ಮಂಜೂರು ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆ ಘೋಷಣೆ ಆಗಿತ್ತಾದರೂ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಬೇಕೆಂಬ ಬೇಡಿಕೆಯೂ ಅನಾದಿ ಕಾಲದಿಂದಲೂ ಇದೆ. ಬಯಲುಸೀಮೆ ಹಾಗೂ ಮಲೆನಾಡಿನಲ್ಲಿ ಹಲವು ನೀರಾವರಿ ಯೋಜನೆಗಳು ಹಣಕಾಸಿನ ಕೊರತೆಯಿಂದ ನೆನೆಗುದಿಗೆ ಬಿದ್ದಿವೆ. ಅವುಗಳು ಪೂರ್ಣಗೊಳಿಸಲು ಅನುದಾನ ನೀಡಬೇಕೆಬ ಬೇಡಿಕೆಯೂ ಇದೆ.

14 ಕೆಸಿಕೆಎಂ 1ಚಿಕ್ಕಮಗಳೂರಿನ ಗೌಡನಹಳ್ಳಿ ರಸ್ತೆಯಲ್ಲಿರುವ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತು ಮಾಡಿರುವ ಪ್ರದೇಶ.

Share this article