ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಅದರಲ್ಲಿಯೂ ವಿಶೇಷವಾಗಿ ಹು-ಧಾ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದಂತಹ ಯಾವುದೇ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗಳು ಮುಂಗಡಪತ್ರದಲ್ಲಿ ಕಾಣಿಸದೇ ಇರುವ ಅಂಶವು ಈ ಭಾಗದ ಉದ್ದಿಮೆದಾರರು ಹಾಗೂ ವರ್ತಕರಲ್ಲಿ ನಿರಾಶೆಯನ್ನುಂಟು ಮಾಡಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಸಮಧಾನ ವ್ಯಕ್ತಪಡಿಸಿದೆ.
ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಇರುವ ತೊಂದರೆಗಳನ್ನು ನಿವಾರಿಸಲು ಹಿಂದೆ ಮನವಿ ಸಲ್ಲಿಸಿತ್ತು. ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾವನೆಗಳನ್ನು ಸೂಚಿಸದೇ ಇರುವುದು ಈ ಭಾಗದ ಉದ್ದಿಮೆಗಳ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಾರೆ ಈ ಬಜೆಟ್ ಉತ್ತರ ಕರ್ನಾಟಕ ಭಾಗವನ್ನು ವಾಣಿಜ್ಯೋದ್ಯಮ, ಆರ್ಥಿಕ, ನೀರಾವರಿ ಕ್ಷೇತ್ರದಲ್ಲಿ ಮತ್ತು ರಸ್ತೆ ಸಾರಿಗೆ ಸಂಪರ್ಕ ಸುಧಾರಣೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಈ ಭಾಗದ ಜನತೆಯಲ್ಲಿ ಬಹಳಷ್ಟು ಕ್ರೋಧವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ವಸಂತ ಲದವಾ, ರಮೇಶ ಪಾಟೀಲ, ತೆರಿಗೆ ಸಮಿತಿ ಕೋ ಚೇರಮನ್ ಚನ್ನವೀರ ಮುಂಗರವಾಡಿ ಸೇರಿ ಹಲವರಿದ್ದರು.
ಧಾರವಾಡ:
ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಅಧಿಕ ಸಿಬ್ಬಂದಿಗೆ ಸೇವಾ ಭದ್ರತೆ ಹಾಗೂ ಉದ್ಯೋಗ ಭದ್ರತೆ ಒದಗಿಸುವ ಬದಲು, ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಸರಿನಲ್ಲಿ ಅವರಿಂದಲೇ ವಂತಿಕೆ ಸಂಗ್ರಹ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಸೂಕ್ತಕ್ರಮಗಳು ಈ ಬಜೆಟ್‌ನಲ್ಲಿಯೂ ಇಲ್ಲ. ವ್ಯಾಪಕವಾಗಿ ಬೆಳೆಯುತ್ತಿರುವ ಗಿಗ್ ಆರ್ಥಿಕತೆಗೆ, ಗಿಗ್ ಕಾರ್ಮಿಕರ ಹಿತ ಕಾಪಾಡಲು ಕಾನೂನು ರೂಪಿಸುವುದಾಗಿ ಹೇಳಿದ್ದ ಸರ್ಕಾರ ಅದರ ಕುರಿತು ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡದಿರುವುದು ಖಂಡನೀಯ ಎಂದಿದೆ.