ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಮಹಾತ್ಮ ಗಾಂಧಿ ಚೌಕ್ ಹತ್ತಿರ ಮಲ್ಟಿ ಕಾರ್, ಬೈಕ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ₹ 20 ಕೋಟಿ ಮಂಜೂರು ಮಾಡಲು ನಗರದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ನಗರವು ದಿನದಿಂದ ದಿನಕ್ಕೆ ಬೃಹತ್ತಾಕಾರದಲ್ಲಿ ಬೆಳೆಯುತ್ತಿದೆ. ಅದರಂತೆ ವಾಹನಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಪ್ರಮುಖ ಮಾರುಕಟ್ಟೆಯಾದ ಮಹಾತ್ಮ ಗಾಂಧಿ ಚೌಕ್‌ದಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ, ಸಾರ್ವಜನಿಕರು ತಮ್ಮ ಕಾರ್, ಬೈಕ್ ಗಳನ್ನು ನಿಲ್ಲಿಸಲು ಪರದಾಡುತ್ತಿದ್ದಾರೆ. ಅಲ್ಲದೆ, ಅನಿವಾರ್ಯವಾಗಿ ತಮ್ಮ ವಾಹನಗಳನ್ನು ರಸ್ತೆಯ ಬದಿ ನಿಲ್ಲಿಸಿ ಹೋಗುವುದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದಕ್ಕಾಗಿ ಈಗಾಗಲೇ ಗಾಂಧಿ ಚೌಕ್ ನಲ್ಲಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.1, ರಸ್ತೆ ಬದಿಯಲ್ಲಿ ಇರುವುದರಿಂದ, ತೀವ್ರ ತೊಂದರೆ ಆಗುತ್ತಿದೆಂದು ಸಮೀಪದ ಸರ್ಕಾರಿ ಪ್ರೌಢ ಶಾಲೆಗೆ ಸ್ಥಳಾಂತರಿಸಲು ಯೋಚಿಸಲಾಗಿದೆ. ಸ್ಥಳಾಂತರಗೊಂಡ ಶಾಲೆಯ ಜಾಗವು ವಾಹನಗಳ ನಿಲುಗಡೆಗೆ ಮತ್ತು ಹೂ, ಹಣ್ಣು ಮಾರಾಟಕ್ಕೆ ಸೂಕ್ತವಾಗಿದ್ದು, ಆ ಜಾಗದಲ್ಲಿ ಕೆಳಗಡೆ ಹೂ ಮತ್ತು ಹಣ್ಣು ಮಾರಾಟಕ್ಕೆ ಹಾಗೂ ಅದರ ಮೇಲೆ ವಾಹನಗಳ ನಿಲುಗಡೆಗೆ ಅನುಕೂಲಕ್ಕಾಗಿ ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲು ಮಹಾನಗರ ಪಾಲಿಕೆಯಿಂದ ವಿಸ್ತೃತ ವರದಿ ಸಿದ್ದಪಡಿಸಲಾಗಿದೆ. ಕಾರಣ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಆಗುತ್ತಿರುವ ಸಮಸ್ಯೆ ನಿವಾರಣೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮಲ್ಟಿ ಕಾರ್, ಬೈಕ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲು ಕೋರಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರಿಗೂ ಪತ್ರ ಬರೆಯಲಾಗಿದೆ ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯ ಪ್ರಕಟಣೆ ತಿಳಿಸಿದೆ.