ಕಳೆ ನಿಯಂತ್ರಣ ಮಾಡಲು ಸೈಕಲ್ ಖರೀದಿಗೆ ಮುಂದಾದ ರೈತರು । ಕಳೆ ನಿಯಂತ್ರಿಸಲು ಚಡಪಡಿಸುತ್ತಿರುವ ರೈತ ವರ್ಗ
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕನ್ನಡಪ್ರಭ ವಾರ್ತೆ ಕುಕನೂರುಉತ್ತಮ ಮುಂಗಾರು ಮಳೆಯಿಂದ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಸುಮಾರು 4000 ಹೆಕ್ಟೇರ್ ಹೆಸರು ಬೆಳೆ ಬಿತ್ತನೆಯಾಗಿದೆ. ಹೆಸರು ಬೆಳೆಯಲ್ಲಿನ ಕಳೆ ನಿಯಂತ್ರಣಕ್ಕೆ ಪ್ರಸ್ತುತ ದಿನಗಳಲ್ಲಿ ಎತ್ತುಗಳ ಗಳೆವು ದುಬಾರಿ ಆಗಿದ್ದು, ದುಡ್ಡು ಕೊಟ್ಟರೂ ಸಹ ಎತ್ತುಗಳು ಸಿಗದ ಸ್ಥಿತಿ ಉಂಟಾಗಿದೆ. ಕಳೆ ನಿಯಂತ್ರಣಕ್ಕೆ ರೈತರು ಚಡಪಡಿಸುವಂತಾಗಿದೆ.
ಗಳೆವು ಸಿಗದ ಕಾರಣ ರೈತರು ಹೊಲದಲ್ಲಿನ ಕಸ ಕೀಳಲು ಸಂಪರ್ಕ ಕೇಂದ್ರದಿಂದ ರಿಯಾಯತಿ ದರದಲ್ಲಿ ವಿತರಿಸುವ ಸೈಕಲ್ ಖರೀದಿಗೆ ಮುಂದಾಗಿದ್ದಾರೆ. ಮುಂಗಾರು ಮಳೆ ತಾಲೂಕಿನಲ್ಲಿ ಉತ್ತಮವಾಗಿದೆ. ಬಹುತೇಕ ರೈತರು ಹೆಸರು ಬೆಳೆ ಬಿತ್ತನೆ ಮಾಡಿದ್ದು. ಬೆಳೆ ನಳನಳಿಸುತ್ತಿದೆ. ಬಿತ್ತನೆಯಾಗಿ ತಿಂಗಳು ಕಳೆದ ಬೆಳೆಗಳಿಗೆ ರೈತರು ಎಡೆ ಹೊಡೆಯುತ್ತಿದ್ದಾರೆ. ಬಿತ್ತನೆ ಸಾಲಿನಲ್ಲಿರುವ ಕಳೆ ಹೋಗುತ್ತದೆ. ಮಣ್ಣು ಮೃದುವಾಗುವುದರ ಜತೆಗೆ ಮಳೆ ಬಂದಾಗ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ. ಗಿಡಗಳ ಬೇರಿಗೆ ಮಣ್ಣು ಬೀಳುವುದರಿಂದ ಉತ್ತಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಆದರೆ ರೈತರಿಗೆ ಎಡೆ ಹೊಡೆಯುವುದೇ ಸವಾಲಾಗಿದೆ.ಎತ್ತುಗಳ ಗಳೆಗೆ ಬೇಡಿಕೆ:
ಕಳೆ ನಿಯಂತ್ರಣಕ್ಕೆ ಎತ್ತುಗಳ ಗಳೆಗಳಿಗೆ ಡಿಮ್ಯಾಂಡ್ ಬಂದಿದ್ದು, ದಿನವೊಂದಕ್ಕೆ ಗಳೆವಿಗೆ ₹2000ವರೆಗೆ ಏರಿಕೆಯಾಗಿದೆ. ₹600 ಕೂಲಿ ಆಳು ಸೇರಿ ಗಳೆವು ಬಾಡಿಗೆ ₹2600 ಆಗಿದೆ. ಅದಕ್ಕಿಂತಲೂ ಮಿಗಿಲಾಗಿ ಇನ್ನೂ ಹೆಚ್ಚಿನ ಹಣ ನೀಡುತ್ತೇವೆ ಎಂದರೂ ಗಳೆವು ಸಿಗಲಾರದೇ ಅನ್ನದಾತರು ಚಡಪಡಿಸುತ್ತಿದ್ದಾರೆ. 3-4 ವರ್ಷಗಳ ಹಿಂದೆ ರೈತರೆಲ್ಲ ಜಮೀನುಗಳ ಉಳುಮೆಗೆ ಸ್ವಂತ ಎತ್ತುಗಳನ್ನು ಬಳಸುತ್ತಿದ್ದರು. ಇಂದು ಬೆರಳೆಣಿಕೆ ಅನ್ನದಾತರು ಮಾತ್ರ ಎತ್ತು ಹೊಂದಿದ್ದಾರೆ. ಅದ್ದರಿಂದ ಉಳುಮೆಗೆ ಬೇಕಾದ ಸಮಯಕ್ಕೆ ಗಳೆವು ಸಿಗುತ್ತಿಲ್ಲ.ಸೈಕಲ್ ಖರೀದಿಗೆ ಮುಂದಾದ ರೈತ:
ದುಡ್ಡು ಕೊಡುತ್ತೇವೆ ಎಂದರೂ ಸರಿಯಾದ ಸಮಯಕ್ಕೆ ಗಳೆವು ಸಿಗುತ್ತಿಲ್ಲ. ಆದ್ದರಿಂದ ಕಡಿಮೆ ಜಮೀನು ಹೊಂದಿರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸಿಗುವ ಕಳೆ ನಿಯಂತ್ರಣ ಸೈಕಲ್ ಖರೀದಿ ಮಾಡಿ, ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಕಳೆದ ಎರಡು ಮೂರು ದಿನದಿಂದ ಸರತಿ ಸಾಲಿನಲ್ಲಿ ನಿಂತು ಕಳೆ ನಿಯಂತ್ರಣ ಸೈಕಲ್ ಖರೀದಿಗೆ ಮುಂದಾಗಿದ್ದಾರೆ. ಕುಕನೂರು ರೈತ ಸಂಪರ್ಕ ಕೇಂದ್ರದಲ್ಲಿ ಬರೋಬ್ಬರಿ 150ಕ್ಕೂ ಹೆಚ್ಚು ಸೈಕಲ್ ಮಾರಾಟ ಆಗಿವೆ. ರಿಯಾಯತಿ ದರದಲ್ಲಿ ಒಂದು ಸಾವಿರಕ್ಕೆ ಸೈಕಲ್ ಅನ್ನು ರೈತ ಸಂಪರ್ಕ ಕೇಂದ್ರದವರು ವಿತರಿಸುತ್ತಿದ್ದಾರೆ.ಎತ್ತುಗಳು ಇಲ್ಲ:
ರೈತರು ಎತ್ತುಗಳನ್ನು ಖರೀದಿ ಮಾಡುತ್ತೇವೆ ಎಂದರೆ ಎತ್ತುಗಳು ಸಹ ಸಿಗುತ್ತಿಲ್ಲ. ಇತ್ತಿಚೀನ ದಿನಗಳಲ್ಲಿ ಜರ್ಸಿ, ಎಚ್.ಎಫ್. ಹೀಗೆ ನಾನಾ ವಿದೇಶಿ ತಳಿಯ ಆಕಳುಗಳನ್ನು ಹೈನುಗಾರಿಕೆಗೆ ಉಪಯೋಗಿಸುತ್ತಿದ್ದು, ಜವಾರಿ ಆಕಳು ಸಂತತಿ ಕಡಿಮೆ ಇರುವುದರಿಂದ ಎತ್ತುಗಳು ಸಂಖ್ಯೆ ಸಹ ಕಡಿಮೆ ಆಗಿದೆ. ಅದರಲ್ಲೂ ಎತ್ತುಗಳಿಗೆ ಭಾರೀ ಡಿಮ್ಯಾಂಡ್ ಬಂದಿದ್ದು, ಈಗ ₹ಒಂದು ಲಕ್ಷದೊಳಗೆ ಎರಡೆತ್ತು ಸಿಗುವುದಿಲ್ಲ.