ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಸಚಿವ ಡಾ.ಎಂ.ಸಿ ಸುಧಾಕರ್ ಪರಿಶ್ರಮದಿಂದ ಚಿಂತಾಮಣಿ ಕ್ಷೇತ್ರಕ್ಕೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಚಿಂತಾಮಣಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಸಚಿವ ಡಾ.ಎಂ.ಸಿ ಸುಧಾಕರ್ ಪರಿಶ್ರಮದಿಂದ ಚಿಂತಾಮಣಿ ಕ್ಷೇತ್ರಕ್ಕೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರುಗಮಲ್ಲ ಲಕ್ಷ್ಮೀ ನಾರಾಯಣರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯ 16ನೇ ಬಜೆಟ್ 4 ಲಕ್ಷ ಕೋಟಿ ರು. ಗಾತ್ರದ್ದಾಗಿದ್ದು, ಜಿಲ್ಲೆಗೆ ಉತ್ತಮ ಕೊಡುಗೆಗಳು ಸಿಕ್ಕಿವೆ. ಚಿಕ್ಕಬಳ್ಳಾಫುರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ, ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ಚೇಳೂರು ತಾಲೂಕಿನಲ್ಲಿ ಸಮುದಾಯ ಭವನ ಘೋಷಣೆ, ಚೇಳೂರು ಹಾಗೂ ಮಂಚೇನಹಳ್ಳಿಯಲ್ಲಿ ತಾಲೂಕು ಕಚೇರಿಗಳ ನಿರ್ಮಾಣಕ್ಕೆ ಅನುಮೋದನೆ, ಗೌರಿಬಿದನೂರು ತಾಲೂಕಿನಲ್ಲಿ ಎಚ್.ನರಸಿಂಹಯ್ಯನವರ ಪ್ರಾಧಿಕಾರಕ್ಕೆ ಅನುಮೋದನೆ ಕೊಡಲಾಗಿದೆಯೆಂದು ಹರ್ಷ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಹೆಚ್ಚಿನ ಪ್ರಯತ್ನ ಮಾಡಿದ್ದಾರೆ. ಸಚಿವರ ಪ್ರಯತ್ನದಿಂದ ಚಿಂತಾಮಣಿ ನಗರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ೧೫೦ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಮುರುಗಮಲ್ಲ ದರ್ಗಾ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿದ್ದು 32 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ತಾಲೂಕಿನ ಜನತೆ 2023 ರ ಚುನಾವಣೆಯಲ್ಲಿ ಸಚಿವರನ್ನು ಗೆಲ್ಲಿಸಿದ್ದು, ಅವರು ತಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರ ಪ್ರಯತ್ನಪಡುತ್ತಿದ್ದಾರೆಂಬುದಕ್ಕೆ ಜಿಲ್ಲೆಗೆ ಬಜೆಟ್‌ನಲ್ಲಿ ದೊರೆತಿರುವ ಅನುದಾನವೇ ಸಾಕ್ಷಿ. ಇದಕ್ಕಾಗಿ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಕೆಪಿಸಿಸಿ ಸದಸ್ಯ ಕುರುಟಹಳ್ಳಿ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಬುಕ್ಕನಹಳ್ಳಿ ಶಿವಣ್ಣ, ತಾಪಂ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್, ಕೋಚಿಮುಲ್ ಮಾಜಿ ನಿರ್ದೇಶಕ ಊಲವಾಡಿ ಅಶ್ವತ್ಥ ನಾರಾಯಣಬಾಬು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರೆಡ್ದಿ, ನಗರಸಭೆ ಮಾಜಿ ಅಧ್ಯಕ್ಷ ವೆಂಕಟರಮಣಸ್ವಾಮಿ, ನಗರಸಭಾ ಸದಸ್ಯರಾದ ಜೈಭೀಮ್ ಮುರಳಿ, ರಾಜಾಚಾರಿ, ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಾಯಿನಾಥ್, ಕಾಂಗ್ರೆಸ್ ಮುಖಂಡರಾದ ಆರ್. ಎಂ.ಜಿ.ಶ್ರೀನಿವಾಸ್, ವೆಂಕಟಗಿರಿಕೋಟೆ ಸುರೇಶ್, ಉಮೇಶ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತಿತ್ತರರು ಉಪಸ್ಥಿತರಿದ್ದರು.