ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣ ಭೇದಿಸಿರುವ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ಗ್ರಾಮದ ಡ್ರೈವರ್ ವೃತ್ತಿಯ ಕೆ.ರೋಷನ್, ಕನ್ಯಾನ ಗ್ರಾಮದ ಕೃಷಿಕ ಸತೀಶ್ ರೈ, ವಿಟ್ಲ ಪಡ್ನೂರು ಗ್ರಾಮದ ಪೈಂಟರ್ ಕೆ.ಗಣೇಶ್, ವೀರಕಂಬ ಗ್ರಾಮದ ಕಾರ್ಮಿಕ ಕುಸುಮಕರ, ವಿರಾಜಪೇಟೆ ಪಟ್ಟಣದ ಶಿವಕೇರಿ ಅರ್ಚಕ ಸೂರ್ಯಪ್ರಸಾದ್ ಭಟ್ಟ, ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್‍ನ ಸಿಲ್ವರ್ ಮರವ್ಯಾಪಾರಿ ಎಚ್.ಪಿ. ವಿನೋದ್ ಕುಮಾರ್, ಹೆಬ್ಬಾಲೆ ಗ್ರಾಮದ ಕಾರ್ಮಿಕ ಬಿ.ಮೋಹನ್ ಕುಮಾರ್ ಬಂಧಿತ ಆರೋಪಿಗಳು.
ಜು.29ರಂದು ರಾತ್ರಿ 8.45ರ ಸಮಯದಲ್ಲಿ ಪಟ್ಟಣದ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ಮಾಲಿಕ ನೇಮರಾಜ್ ಮತ್ತು ಪತ್ನಿ ಆಶಾ ಸ್ಕೂಟರ್‌ನಲ್ಲಿ 6.18ಲಕ್ಷ ರು.ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಕಿಬ್ಬೆಟ್ಟ ರಸ್ತೆಯಲ್ಲಿ ಕಾರು ಮತ್ತು ಬೈಕ್‍ನಲ್ಲಿ ಬಂದ ಅರೋಪಿಗಳು ಸ್ಕೂಟರ್ ಅನ್ನು ಡ್ಡಗಟ್ಟಿ ನೇಮರಾಜ್ ಮುಖಕ್ಕೆ ಖಾರದ ಪುಡಿ ಎರಚಿ, ಪತ್ನಿಯ ತಲೆಗೆ ಫ್ಲಾಸ್ಕ್‌ನಿಂದ ಹಲ್ಲೆ ಮಾಡಿ ನೆಲಕ್ಕೆ ಬೀಳಿಸಿ, ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.ಇದೀಗ ಬಂಧಿ ಆರೋಪಿಗಳಿಂದ ರು. 3,02,000 ನಗದು, ಕೃತ್ಯಕ್ಕೆ ಬಳಿಸಿದ ಎರಡು ಕಾರುಗಳು, 9 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ರೋಷನ್, ಸತೀಶ್ ರೈ, ಗಣೇಶ, ಕುಸುಮಕರ ವಿರುದ್ಧ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಪ್ರಯತ್ನ, ಕಿಡ್ನಾಪ್ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ.ಘಟನೆ ನಡೆದ ದಿನದಂದು ಸ್ಥಳಕ್ಕೆ ಎಸ್‍ಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿ, ಎಎಸ್‍ಪಿ ಸುಂದರ್‌ರಾಜ್, ಡಿವೈಎಸ್‍ಪಿ ಗಂಗಾಧರಪ್ಪ ನೇತೃತ್ವದ ವಿಶೇಷ ತಂಡಕ್ಕೆ ತನಿಖಾ ಜವಾಬ್ದಾರಿ ವಹಿಸಿದ್ದರು.
ಪ್ರಕರಣ ನಡೆದು 9 ದಿನಗಳಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಸಾರ್ವಜನಿಕರ ಪ್ರಶಂಶೆಗೆ ಪಾತ್ರರಾಗಿದ್ದಾರೆ. ಸೋಮವಾರಪೇಟೆ ಠಾಣೆಯ ಇನ್ಸ್‍ಪೆಕ್ಟರ್ ಮುದ್ದು ಮಾದೇವ, ಪಿಎಸ್‍ಐ ಗೋಪಾಲ ತನಿಖೆ ಮುಂದುವರಿಸಿದ್ದಾರೆ.