ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಇಲ್ಲಿನ ಬಿವಿಬಿ ಕಾಲೇಜಿನ ಬಯೋಟೆಕ್ನಾಲಜಿ ಸಭಾಗೃಹದ ಆವರಣವು ಶನಿವಾರ ಔಷಧೀಯ ಸಸ್ಯತಾಣವಾಗಿ ಮಾರ್ಪಟ್ಟಿತ್ತು. ಎಲ್ಲಿ ನೋಡಿದರಲ್ಲಿ ಬಗೆಬಗೆಯ ಔಷಧ ಸಸ್ಯಗಳೇ ಕಾಣಸಿಗುತ್ತಿದ್ದವು. ಸಂಪೂರ್ಣ ಮಾಹಿತಿಯುಳ್ಳ ನೂರಾರು ಔಷಧ ಸಸ್ಯಗಳನ್ನು ವಿದ್ಯಾರ್ಥಿಗಳು, ರೈತರು ಕಂಡು ಬೆರಗಾದರು.
ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಆಯುಷ್ ಇಲಾಖೆ, ಕೆ.ಎಲ್.ಇ. ಫಾರ್ಮಸಿ ಕಾಲೇಜು ವತಿಯಿಂದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆಯುತ್ತಿರುವ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ, ಕೃಷಿ ಮತ್ತು ಆರೋಗ್ಯ ವಿಷಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಿನ್ನೆಲೆಯಲ್ಲಿ ನೂರಾರು ಬಗೆಯ ಔಷಧ ಸಸ್ಯಗಳ ಪ್ರದರ್ಶನ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.ಸಮಗ್ರ ಮಾಹಿತಿ:
ಇಲ್ಲಿ 90ಕ್ಕೂ ಅಧಿಕ ಜಾತಿಯ ಔಷಧ ಸಸ್ಯಗಳನ್ನು ಇರಿಸಲಾಗಿತ್ತು. ಇದರೊಂದಿಗೆ ಪ್ರತಿಯೊಂದು ಔಷಧ ಸಸ್ಯದ ಹೆಸರು, ಸಸ್ಯಶಾಸ್ತ್ರದ ಹೆಸರು, ಕುಲ, ಪ್ರಾದೇಶಿಕ ಭಾಷೆಯ ಹೆಸರು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಸ್ಯಕ್ಕೆ ಇರುವ ಹೆಸರು, ಆಯುರ್ವೇದದಲ್ಲಿಯ ಇತರ ಹೆಸರು, ಔಷಧಿ ಸಸ್ಯದ ಸಾಮಾನ್ಯ ಪರಿಚಯ, ಗುಣಕರ್ಮಗಳು, ರಸ, ವೀರ್ಯ, ಗುಣ, ಕರ್ಮ, ವಿವಿಧ ರೋಗಗಳಲ್ಲಿ ಇದರ ಉಪಯೋಗ, ಔಷಧ ಸತ್ವವುಳ್ಳ ಭಾಗ ಹೀಗೆ ಸಸ್ಯದ ಸಂಪೂರ್ಣ ಮಾಹಿತಿ ಹೊಂದಿದ ಫಲಕ ಹಾಕಲಾಗಿತ್ತು.ಔಷಧಿ ಸಸ್ಯಗಳು?:
ಪ್ರದರ್ಶನದಲ್ಲಿ ಪ್ರಮುಖ ಔಷಧೀಯ ಸಸ್ಯಗಳಾದ ಪಾರಿಜಾತ, ಅಪರಾಜಿತ, ವೃಕ್ಷಾಮ್ಲ, ಕೆಬುಕ, ಕುಮಾರಿ, ಕಂಪಿಲ್ಲಕ, ಮಧೂಕಾ, ಅಗ್ನಿಮಂದ, ವಾಸ, ಏಲ, ಜ್ಯೋತಿಷ್ಮತಿ, ಬುಶಿರ, ದಾರು ಹರಿದ್ರ, ಏರಂಡ, ಜಾತಿಫಲ, ಚಿರಬಿಲ್ವ, ಅಗರು, ಸಪ್ತಚಕ್ರ, ಭಲ್ಲಾತಕ, ಲಜ್ಜಲು, ಸಹಚರ, ಪೊಡಕಿ, ಬೃಹತಿ, ಶಾಲಪರ್ಣಿ, ಬಿಲ್ವ, ಬ್ರಾಹ್ಮಿ, ಸಾರಿವಾ, ವಾಚಾ, ಲವಂಗ, ಉದುಂಬರ ಸೇರಿದಂತೆ 90ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ಇರಿಸಲಾಗಿತ್ತು. ಜತೆಗೆ ಮಾದರಿ ಸಸ್ಯಪಾಲನಾ ಕೇಂದ್ರಕ್ಕೆ ಬಳಸುವ ಸಸಿಗಳಾದ ಸೀತಾಫಲ, ಗರಿಕೆ, ಲೊಳೆಸರ, ಕಾಡುಬಸಳೆ, ಅಮೃತಬಳ್ಳಿ, ಸಂದುವಳ್ಳಿ, ನೆಕ್ಕಿಗಿಡ, ಲಕ್ಷ್ಮಣ ಫಲ, ಶ್ರೀಗಂಧ, ನಾಗದಾಳ, ಕಣಗಿಲೆ, ಇಂಗಳಗಿಡ, ರಕ್ತ ಚಂದನ ಸೇರಿದಂತೆ 50ಕ್ಕೂ ಅಧಿಕ ಬಗೆಯ ಸಸಿಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.ಪ್ರದರ್ಶನಕ್ಕೆ ಆಗಮಿಸಿದ್ದ ರೈತರು ಹಾಗೂ ವಿದ್ಯಾರ್ಥಿಗಳು ಬಗೆಬಗೆಯ ಔಷಧಿ ಸಸ್ಯಗಳನ್ನು ಕಂಡು ಆಶ್ಚರ್ಯ ಹಾಗೂ ಉತ್ಸಾಹದಿಂದ ಮಾಹಿತಿ ಪಡೆದರು. ಕೆಲವರಂತೂ ಗಿಡದಲ್ಲಿ ಇರಿಸಲಾಗಿದ್ದ ಸಸಿಯ ಸಂಪೂರ್ಣ ಮಾಹಿತಿಯುಳ್ಳ ಫಲಕಗಳನ್ನು ತೆಗೆದುಕೊಂಡು ಮಾಹಿತಿ ಪಡೆದುಕೊಂಡರು. ಇನ್ನು ಕೆಲವರು ಸಸಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಮಾಹಿತಿ ಕೊರತೆ:ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಾವು ಸಸಿಗಳನ್ನು ಕಾಣುತ್ತೇವೆ. ಅವೆಲ್ಲವೂ ಔಷಧೀಯ ಸಸ್ಯಗಳೆ ಎಂದು ನನಗೆ ಈಗ ಗೊತ್ತಾಯಿತು. ಇವುಗಳ ಹೆಸರು ಏನು ಎಂಬುದು ನಮಗೆ ತಿಳಿದಿರಲಿಲ್ಲ. ಈ ಪ್ರದರ್ಶನಕ್ಕೆ ಬಂದ ಮೇಲೆ ಯಾವ ಸಸಿಗಳಿಗೆ ಯಾವ ಹೆಸರಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ಗದಗನಿಂದ ಆಗಮಿಸಿದ್ದ ಗೀತಾ, ಶ್ರೀಲಕ್ಷ್ಮಿ ಕನ್ನಡಪ್ರಭಕ್ಕೆ ತಿಳಿಸಿದರು.ಈ ಔಷಧಿ ಸಸ್ಯಗಳ ಮೇಳ ಹಾಗೂ ರಾಜ್ಯಮಟ್ಟದ ಕಾರ್ಯಾಗಾರ ಈ ಭಾಗದ ರೈತರಿಗೆ, ಸಾರ್ವಜನಿಕರಿಗೆ ಔಷಧಿ ಸಸ್ಯಗಳ ಕುರಿತು ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ. ಇಂತಹ ಕಾರ್ಯಾಗಾರಗಳು ಪದೇ ಪದೇ ನಡೆಯುವಂತಾಗಲಿ ಎಂದು ಆನಂದ ಕಲ್ಲೂರ ಹೇಳಿದರು.
ಔಷಧಿ ಸಸ್ಯಗಳ ಕುರಿತು ಯುವಕರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇಂತಹ ಕಾರ್ಯಾಗಾರಗಳು, ಎಲ್ಲ ಜಿಲ್ಲೆಗಳಲ್ಲೂ ಇಂತಹ ಪ್ರದರ್ಶನ ನಡೆದಲ್ಲಿ ಹೆಚ್ಚಿನ ಪ್ರಚಾರರೊಂದಿಗೆ ಜನರಿಗೆ ಅರಿವು ಮೂಡಿಸಲು ಸಾಧ್ಯ ಎಂದು ಪರಿಸರವಾದಿ ಡಾ. ಸಿ.ಎಸ್. ಅರಸನಾಳ ಹೇಳಿದರು.