ಬೈಂದೂರು : ನಿರಂತರ ಮಳೆಯಿಂದಾಗಿ ಬೈಂದೂರು ಕ್ಷೇತ್ರದ ಕೆಲವು ಭಾಗದಲ್ಲಿ ನೆರೆ ಆವರಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೆಂಗಳೂರಿನಲ್ಲಿ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ನೇರವಾಗಿ ಕ್ಷೇತ್ರಕ್ಕೆ ಆಗಮಿಸಿ, ಶುಕ್ರವಾರ ಬೆಳಗ್ಗೆಯಿಂದ ನೆರೆಪೀಡಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರು ಸೇರಿದಂತೆ ನೆರೆಹಾನಿಗೆ ಒಳಗಾದವರೊಂದಿಗೆ ಮಾತುಕತೆ ನಡೆಸಿದರು.
ನಾವುಂದ ಭಾಗದ ಸಾಲ್ಬುಡ, ನಾಡಾ ಗ್ರಾಮದ ಚಿಕ್ಕಳ್ಳಿ, ಸಂಸಾಡಿ, ಹೆಮ್ಮುಂಜಿ, ಕೊಂಣ್ಕೀ ಪ್ರದೇಶಗಳಲ್ಲಿ ಮಳೆಯಿಂದಾಗಿ ನೆರೆ, ಪ್ರವಾಹ, ಗುಡ್ಡೆ ಕುಸಿತ ಉಂಟಾಗಿದ್ದು, ಗಂಟಿಹೊಳೆ ಭೇಟಿ ನೀಡಿ ಜನರ ರಕ್ಷಣೆ, ಸ್ಥಳಾಂತರ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಅಗತ್ಯ ಸೂಚನೆ ನೀಡಿದರು.
ನೆರೆ ಪೀಡಿದ ಪ್ರದೇಶದ ಜನತೆಗೆ ತುರ್ತಾಗಿ ಆಗಬೇಕಿರುವ ಅಗತ್ಯ ಮೂಲಸೌಕರ್ಯದ ಜತೆಗೆ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆಯೂ ಆದಷ್ಟು ಬೇಗ ಕ್ರಮ ವಹಿಸಬೇಕು. ಯಾರಿಗೂ ಕೂಡ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಸ್ಥಳೀಯರದಿಂದಲೂ ಶಾಸಕರು ಮಾಹಿತಿ ಪಡೆದುಕೊಂಡರು.
ಗುಲ್ವಾಡಿ ಗ್ರಾಮದ ಸೌಕೂರು ಬಳಿ ಮನೆಗೆ ಮಳೆ ನೀರು ನುಗ್ಗಿದ್ದು, ಶಾಸಕರು ಸ್ವಯಂಸೇವಕರ ವಿಪತ್ತು ನಿರ್ವಹಣ ತಂಡದ ಸದಸ್ಯರೊಂದಿಗೆ ಭೇಟಿ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಪ್ರವಾಹ ಪೀಡಿತ ಕಟ್ಬೆಲ್ತೂರು ಗ್ರಾಮದ ಪಡುಕುದ್ರುಗೂ ಭೇಟಿ ನೀಡಿ ಪರಿಶೀಲಿಸಿದರು.
ಅಮ್ಲಾಡಿ ಎಂಬಲ್ಲಿ ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಸ್ಥಳಕ್ಕೆ ಶಾಸಕರೊಂದಿಗೆ ತಹಸೀಲ್ದಾರ್ ಶೋಭಾ ಲಕ್ಷ್ಮೀ, ಗ್ರಾ.ಪಂ. ಅಧ್ಯಕ್ಷೆ ವೈಶಾಲಿ, ಸದಸ್ಯರಾದ ಅಶೋಕ್ ಬಳೆಗಾರ್, ಆರ್‌ಐ ರಾಘವೇಂದ್ರ, ಪಿಡಿಒ ರಿಯಾಜ್ ಅಹಮ್ಮದ್, ವಿಎ ಸೋಮಣ್ಣ ಭೇಟಿ ನೀಡಿದರು.
* ಎಚ್ಚರಿಕೆ ವಹಿಸಲು ಮನವಿ
ವಿಶೇಷವಾಗಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಸಮುದ್ರ, ನದಿ ಹಾಗೂ ಡ್ಯಾಮ್‌ಗಳಿಗೆ ಈಜುವುದು, ಇಳಿಯುವುದು ಇತ್ಯಾದಿ ಮಾಡಬಾರದು. ನದಿ, ಹೊಳೆ, ತೋಡು, ಹಳ್ಳ ದಾಟುವಾಗ ಎಚ್ಚರ ವಹಿಸಬೇಕು. ನೀರಿನ ಕೆರೆ, ಬಾವಿ ಸಹಿತ ಮೂಲಗಳಿಗೆ ಮಕ್ಕಳನ್ನು ಬಿಡಬಾರದು ಎಂದು ಶಾಸಕರು ಮನವಿ ಮಾಡಿದ್ದಾರೆ.