ಸಂಪುಟ ನಿರ್ಣಯಗಳು, ವಿಧೇಯಕ ಕನ್ನಡ ಮಯ

KannadaprabhaNewsNetwork |  
Published : Nov 01, 2025, 01:45 AM ISTUpdated : Nov 01, 2025, 05:23 AM IST
CM Siddaramaiah

ಸಾರಾಂಶ

ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ.   ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ  ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನ ಸ್ಮರಿಸುವ ದಿನ  

 --ಸಿದ್ದರಾಮಯ್ಯ 

ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಸ್ಮರಿಸುವ ದಿನ ಕೂಡ ಹೌದು.

ಕನ್ನಡ ರಾಜ್ಯೋತ್ಸವ ಎನ್ನುವುದು ನಾಡು-ನುಡಿಯ ಬಗ್ಗೆ ನಮಗಿರುವ ಬದ್ಧತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವೂ ಹೌದು. ಸಾಮಾನ್ಯವಾಗಿ ನಮ್ಮ ಕನ್ನಡ ಪ್ರೇಮ ಕನ್ನಡ ರಾಜ್ಯೋತ್ಸವದ ದಿನ ಮತ್ತು ನವೆಂಬರ್ ತಿಂಗಳಲ್ಲಿ ಸಂಭ್ರಮ-ಸಡಗರದ ಹೊನಲಾಗಿ ರಾಜ್ಯದ ಬೀದಿಬೀದಿಗಳಲ್ಲಿ ಹರಿಯುತ್ತದೆ. ಇದು ನಾವೆಲ್ಲರೂ ಹೆಮ್ಮೆಪಡಬೇಕಾದ ಸಂಗತಿಯೇ ಆಗಿದೆ. ಈ ಅಭಿಮಾನ ನವೆಂಬರ್ ತಿಂಗಳಲ್ಲಿ ವಿಜೃಂಭಿಸಿ ನಂತರದ ದಿನಗಳಲ್ಲಿ ಕಳೆದುಹೋಗಬಾರದು. ಕನ್ನಡವನ್ನು ಕಟ್ಟುವ, ಬೆಳೆಸುವ, ಉಳಿಸುವ ನಮ್ಮ ಬದುಕಿನ ಭಾಗವಾಗಿ ನಿರಂತರವಾಗಿ ನಡೆಯುತ್ತಲೇ ಇರಬೇಕು.

ಭವ್ಯ ನಾಡು ನಮ್ಮ ಕರುನಾಡುಕರ್ನಾಟಕವು ಇಂದು ಜಾಗತಿಕ ಸ್ತರದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ರಾಜ್ಯ. ಐಟಿ-ಬಿಟಿ, ಸಂಶೋಧನಾ ವಲಯ, ಸೇವಾವಲಯ, ವೈಮಾನಿಕ ಕ್ಷೇತ್ರ, ಆಟೋಮೊಬೈಲ್‌, ನವೋದ್ಯಮಗಳ ಮೂಲಕ ವಿಶ್ವವಿಖ್ಯಾತಿ ಗಳಿಸಿರುವ ರಾಜ್ಯ. ವೈವಿಧ್ಯಮಯ ಜನಸಮುದಾಯಗಳು, ವಿಫುಲವಾದ ಭೌಗೋಳಿಕ ಸಂಪತ್ತು, ಶ್ರೀಮಂತವಾದ ಇತಿಹಾಸ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳು, ಜಗತ್ತೇ ನಿಬ್ಬೆರಗಾಗುವಂತಹ ಜಾನಪದ, ಕಲೆ, ವಾಸ್ತುಶಿಲ್ಪಗಳ ಮೂಲಕ ಜಗತ್ತಿನ ಶ್ರೇಷ್ಠ ನಾಗರಿಕತೆಗಳ ಸಾಲಿನಲ್ಲಿ ನಿಂತಿರುವ ಭವ್ಯವಾದ ನಾಡು ಈ ನಮ್ಮ ಕರುನಾಡು.

ಅಗಾಧ ಪ್ರತಿಭಾಶೀಲತೆ, ವಿನಯವಂತಿಕೆಯನ್ನು ಹೊಂದಿರುವ ಕನ್ನಡಿಗರು ಈ ಕಾರಣಕ್ಕೆ ಜಾಗತಿಕವಾಗಿ ಮಾನ್ಯರು; ಇದರ ಜೊತೆಗೆ ನಮ್ಮ ನಾಡು ನಮಗೆ ಬಳುವಳಿಯಾಗಿ ನೀಡಿರುವ ಹೃದಯ ವೈಶಾಲ್ಯತೆ, ಸಾಮರಸ್ಯ, ಔದಾರ್ಯತೆಗಳಿಂದಾಗಿ ಇಂದು ಕನ್ನಡಿಗರು ಜಗತ್ತಿನೆಲ್ಲೆಡೆ ಮನ್ನಣೆ ಗಳಿಸಿದ್ದಾರೆ.

ಸಮಾನತೆಯ ಹರಿಕಾರ, ವೈಚಾರಿಕ ಕಿಡಿ ಬಸವಣ್ಣನವರಿಂದ ಹಿಡಿದು ಆಡಳಿತದಲ್ಲಿ ವ್ಯಾಪಕ ಸಾಮಾಜಿಕ ಸುಧಾರಣೆಗಳಿಗೆ ಕಾರಣರಾದ ಮೈಸೂರಿನ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರವರೆಗೆ ಈ ನಾಡು ಆಧುನಿಕ ಪ್ರಜಾಪ್ರಭುತ್ವದ ಆಶಯಗಳೆಲ್ಲವನ್ನೂ ಶತಮಾನಗಳ ಹಿಂದಿನಿಂದಲೂ ಉಸಿರಾಡುತ್ತಾ, ಪ್ರತಿನಿಧಿಸುತ್ತಾ ಬಂದಿದೆ. ಸ್ವಾತಂತ್ರ್ಯಾನಂತರ ಈ ರಾಜ್ಯದಲ್ಲಿ ಮೂಡಿ ಬಂದ ಮಹಾನ್‌ ಚೇತನಗಳು, ಆಡಳಿತಗಾರರು ಈ ನಾಡಿನ ಜನ ಜೀವನದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿರುವುದನ್ನು ನಾವು ಕಂಡಿದ್ದೇವೆ. ಇದರ ಫಲವೇ ಇಂದು ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಆಶಯಗಳನ್ನು ಮುಂದುವರಿಸುವ ಪ್ರಯತ್ನವನ್ನೇ ನಾವು ಈಗ ಮಾಡುತ್ತಿದ್ದೇವೆ. ಹಾಗಾಗಿ, ‘ಕರ್ನಾಟಕಕ್ಕೆ ಕರ್ನಾಟಕವೇ ಮಾದರಿ’ ಎಂದು ನಾವು ಯಾವಾಗಲೂ ಹೇಳುತ್ತೇವೆ.

ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತಲೇ ನಾನಿಲ್ಲಿ ಕೆಲವು ವಿಚಾರಗಳನ್ನು ನಾಡಬಾಂಧವರ ಮುಂದೆ ಇಡಬೇಕಾಗಿದೆ. ನೆಲ-ಜಲ-ಭಾಷೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ನೋವು ಜನರಲ್ಲಿ ಮೊದಲಿನಿಂದಲೂ ಇದೆ. ಈ ಅನ್ಯಾಯದ ವಿರುದ್ಧ ನಾವು ಪಕ್ಷ ಜಾತಿ, ಪಂಥ, ಪಕ್ಷಗಳನ್ನು ಪಕ್ಕಕ್ಕಿಟ್ಟು ಕನ್ನಡ-ಕರ್ನಾಟಕ-ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ ಹೋರಾಟ ನಡೆಸಬೇಕಾಗಿದೆ. ಇದರಲ್ಲಿ ಯಾವುದೇ ರಾಜಕೀಯವನ್ನು ನಾವು ಮಾಡುವುದಿಲ್ಲ, ಬೇರೆಯವರೂ ಮಾಡಬಾರದು.

ತಾಯಿ ನಾಡಿಗೆ ದ್ರೋಹ ಬಗೆವ ಕೆಲಸಕನ್ನಡಿಗರಿಗೆ ತಮ್ಮ ನಾಡು-ನುಡಿಯ ಈ ಎಲ್ಲ ಹೆಮ್ಮೆಯ ವಿಚಾರಗಳು ತಿಳಿದಿರುವುದೇ ಆಗಿದೆ. ಅದರೆ, ಇದೇ ವೇಳೆ ಈ ನಾಡಿನ ಪ್ರಗತಿಯನ್ನು ಹಿಂದೆ ತಳ್ಳಲು ವ್ಯವಸ್ಥಿತವಾಗಿ ನಡೆಯುತ್ತಿರುವ ಸಂಚುಗಳ ಬಗ್ಗೆಯೂ ಅರಿಯಬೇಕಾದದ್ದು ಅತ್ಯಗತ್ಯವಾಗಿದೆ. ಭಾರತಾಂಬೆಯ ಹೆಮ್ಮೆಯ ಮಗಳಾದ ಕರ್ನಾಟಕವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅಗಾಧವಾದ ನಂಬಿಕೆಯನ್ನು ಇರಿಸಿಕೊಂಡಿರುವ ನಾಡು. ವಿಪರ್ಯಾಸವೆಂದರೆ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಾದ ಕೇಂದ್ರ ಸರ್ಕಾರವೇ ಮಲತಾಯಿ ಧೋರಣೆಯನ್ನು, ಪಕ್ಷಪಾತದ ನೀತಿಯನ್ನು ತನ್ನದಾಗಿಸಿಕೊಂಡರೆ ಏನು ಮಾಡಬೇಕು? ‘ಹರಕೊಲ್ಲಲ್‌ ಪರ ಕಾಯ್ವನೇ?’ ಎನ್ನುವ ರೀತಿಯಲ್ಲಿ ಒಕ್ಕೂಟ ವ್ಯವಸ್ಥೆಯ ಸಂರಕ್ಷನಾಗಬೇಕಿದ್ದ ಕೇಂದ್ರ ಸರ್ಕಾರವೇ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಮುಂದಾದರೆ ಅದನ್ನು ತಡೆಯುವ ಬಗೆ ಹೇಗೆ? ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ಪಾಲನ್ನು ಪಡೆಯುವುದು ಹೇಗೆ? ಈ ಎಲ್ಲ ಪ್ರಶ್ನೆಗಳು ಇಂದು ನಮ್ಮ ಮುಂದಿವೆ.

ಯಾವುದೇ ಸಮಸ್ಯೆಯನ್ನು ಪರಿಹರಿಸಲು ಇರಿಸುವ ಮೊದಲ ಹೆಜ್ಜೆ ಎಂದರೆ ಸಮಸ್ಯೆಯನ್ನು ಅದರ ಎಲ್ಲ ಸ್ವರೂಪ, ಆಯಾಮಗಳಲ್ಲಿ ಅರಿಯುವುದು ಹಾಗೂ ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುವ ಮನೋಭಾವ ತೋರುವುದು. ವಿಪರ್ಯಾಸವೆಂದರೆ, ಕನ್ನಡಿಗರಿಗೆ ಆಗುತ್ತಿರುವ ಐತಿಹಾಸಿಕ ಅನ್ಯಾಯದ ಬಗ್ಗೆ ಎಲ್ಲ ಸತ್ಯ ತಿಳಿದಿದ್ದರೂ ಎಲ್ಲರೂ ಒಕ್ಕೊರಲಿನಿಂದ ಪ್ರತಿರೋಧದ ದನಿಯನ್ನು ಎತ್ತುತ್ತಿಲ್ಲ. ತಮ್ಮ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳಿಗಾಗಿ ತಾಯಿ ಸಮಾನವಾದ ನಾಡಿಗೆ ದ್ರೋಹ ಬಗೆಯುವ ಕೆಲಸಕ್ಕೆ ಈ ನಾಯಕರು ಕೈ ಹಾಕಿರುವುದು ಅಕ್ಷಮ್ಯವಾಗಿದೆ.

ನ್ಯಾಯಯುತ ಪಾಲಿಗೆ ಹೋರಾಟ

ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದ್ದರೂ ತನಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಪಡೆಯಲು ಕರ್ನಾಟಕ ಇಂದು ದೊಡ್ಡ ಹೋರಾಟವನ್ನೇ ಮಾಡಬೇಕಿದೆ. ಕರ್ನಾಟಕದಿಂದ ಕ್ರೋಢೀಕರಿಸಲ್ಪಟ್ಟ ತೆರಿಗೆ ಕನ್ನಡಿಗರ ಕಷ್ಟನಷ್ಟಗಳಿಗೆ ಒದಗದೆ ಹೋದರೆ, ಕನ್ನಡಿಗರ ಕಣ್ಣೀರು ಒರೆಸಲು ಬಳಕೆಯಾಗದೆ ಹೋದರೆ ಅಂತಹ ತೆರಿಗೆಯನ್ನು ಸಂಗ್ರಹಿಸಿ ಏನು ಪ್ರಯೋಜನ? ದೇಶದ ಅಭಿವೃದ್ಧಿಗೆ ವರ್ಷಂಪ್ರತಿ ಲಕ್ಷೋಪಲಕ್ಷ ಕೋಟಿ ರು. ಹಣವನ್ನು ತೆರಿಗೆಯಾಗಿ ನೀಡಿದ ನಂತರವೂ ಅಪರೂಪಕ್ಕೊಮ್ಮೆ ಬರುವಂತಹ ಅತಿವೃಷ್ಟಿ, ಅನಾವೃಷ್ಟಿಗಳ ಸಂದರ್ಭದಲ್ಲಿ ಕೆಲ ಸಾವಿರ ಕೋಟಿ ರು. ಹಣವನ್ನು ಕೇಂದ್ರವು ನಮ್ಮವರ ಕಣ್ಣೀರು ಒರೆಸಲು ನೀಡದೆ ಹೋದರೆ ಒಕ್ಕೂಟ ವ್ಯವಸ್ಥೆಗೆ ಅರ್ಥವಿದೆಯೇ? ಈ ಪ್ರಶ್ನೆಗಳು ಇಂದು ನಮ್ಮ ಮುಂದಿವೆ. ಕರ್ನಾಟಕವು ಒಕ್ಕೂಟ ವ್ಯವಸ್ಥೆಯೆಡೆಗೆ ತನಗಿರುವ ಎಲ್ಲ ಗೌರವವನ್ನು ಉಳಿಸಿಕೊಂಡೇ, ತನ್ನ ನ್ಯಾಯಯುತ ಪಾಲನ್ನು ಪಡೆಯಲು ಹೇಗೆ ಮುಂದುವರೆಯಬೇಕು ಎನ್ನುವ ಚರ್ಚೆಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ನಡೆಯಬೇಕಿದೆ.

ಬಹುಮುಖ್ಯವಾಗಿ ತೆರಿಗೆ ಹಂಚಿಕೆಯ ಲೆಕ್ಕಾಚಾರಕ್ಕೆ 1971ರ ಜನಗಣತಿಯ ಬದಲಿಗೆ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬ ನಿರ್ದೇಶನವನ್ನು 15ನೇ ಹಣಕಾಸು ಆಯೋಗಕ್ಕೆ ನೀಡಲಾಗಿತ್ತು. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳು ಪರಿಣಾಮಕಾರಿಯಾಗಿ ಕುಟುಂಬ ನಿಯಂತ್ರಣವನ್ನು ಮಾಡಿಕೊಂಡು ಬಂದಿವೆ. ಇದರಿಂದಾಗಿ ದಕ್ಷಿಣದ ರಾಜ್ಯಗಳ ಒಟ್ಟು ಜನಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಅದೇ ರೀತಿ ರಾಷ್ಟ್ರೀಯ ತಲಾ ಆದಾಯಕ್ಕಿಂತ ದಕ್ಷಿಣದ ರಾಜ್ಯಗಳ ತಲಾವಾರು ಆದಾಯ ಹೆಚ್ಚಾಗಿದೆ. ಈ ತಪ್ಪು ಮಾನದಂಡಗಳನ್ನು ಕೇಂದ್ರ ಹಣಕಾಸು ಆಯೋಗ ಅನುಸರಿಸುತ್ತಿರುವ ಕಾರಣದಿಂದಾಗಿ ದಕ್ಷಿಣದ ರಾಜ್ಯಗಳು ನಿರಂತರವಾಗಿ ಅನ್ಯಾಯಕ್ಕೀಡಾಗಿವೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿವರದಲ್ಲಿಯೇ ಇದಕ್ಕೆ ಸಾಕ್ಷ್ಯ ಇದೆ. ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.72 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.64ಕ್ಕೆ ಇಳಿಸಿತ್ತು. ಇದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ₹45,000 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ.

1 ರು. ಪೈಕಿ 15 ಪೈಸೆ ಮಾತ್ರ ವಾಪಸ್‌

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ ಸುಮಾರು ₹4.75 ಲಕ್ಷ ಕೋಟಿಯನ್ನು ತೆರಿಗೆ ಮೂಲಕ ಸಂಗ್ರಹಿಸುತ್ತಿದೆ. ಇದರಲ್ಲಿ ನೇರ ತೆರಿಗೆ ₹2.40 ಲಕ್ಷ ಕೋಟಿ, ಜಿಎಸ್‌ಟಿ ₹1.30 ಲಕ್ಷ ಕೋಟಿ, ಮತ್ತು ಸೆಸ್ ₹30,000 ಕೋಟಿ ಸೇರಿದೆ. ಕೇಂದ್ರ ಸರ್ಕಾರವು ಕರ್ನಾಟಕದಿಂದ ಸಂಗ್ರಹಿಸಿದ ₹4.75 ಲಕ್ಷ ಕೋಟಿಯಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ಅಂದಾಜು ₹50,000 ಕೋಟಿ ಮಾತ್ರ. ಮಹಾರಾಷ್ಟ್ರದ ನಂತರ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ರಾಜ್ಯ ನಮ್ಮದು. ಒಂದು ಅಂದಾಜಿನ ಪ್ರಕಾರ ಕರ್ನಾಟಕದಿಂದ ಸಂಗ್ರಹವಾಗುವ ಒಂದು ರುಪಾಯಿ ತೆರಿಗೆಯಲ್ಲಿ ಕೇವಲ 15 ಪೈಸೆ ಮಾತ್ರ ವಾಪಸು ಬರುತ್ತಿದೆ. ಉತ್ತರ ಪ್ರದೇಶಕ್ಕೆ ಒಂದು ರುಪಾಯಿಗೆ ₹2.73ರಷ್ಟು ಹಣ ವಾಪಸು ಹೋಗುತ್ತಿದೆ. ಹಣಕಾಸು ಆಯೋಗದ ತಪ್ಪು ಮಾನದಂಡಗಳಿಂದಾಗಿ ಕನ್ನಡಿಗರು ಕಷ್ಟ ಮತ್ತು ನಷ್ಟ ಅನುಭವಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಾನು ಪ್ರಸ್ತಾಪಿಸಲೇಬೇಕಾದ ಕೆಲವು ಮುಖ್ಯ ಸಂಗತಿಗಳಿವೆ. ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯೊಳಗೆ ವಿದ್ಯಮಾನಗಳು ಬೆಳೆಯುತ್ತಿವೆ. ಸುಪ್ರೀಂ ಕೋರ್ಟ್ ಕೂಡ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ನಮ್ಮ ಇಡೀ ಸಮಾಜದ ರಚನೆಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ಇಂಗ್ಲೀಷ್ ಇಲ್ಲವೆ ಹಿಂದಿ ಭಾಷೆಗಳ ಕಲಿಕೆ, ಅಧ್ಯಯನ ಸಂಶೋಧನೆಗಳನ್ನು ನಾವು ವಿರೋಧಿಸಬೇಕಾಗಿಲ್ಲ, ಅದು ಸರಿಯಾದ ನಡೆಯೂ ಅಲ್ಲ. ಈ ಭಾಷೆಗಳ ಪ್ರಭಾವ ಕನ್ನಡ ಭಾಷೆಗೆ ಮಾರಕವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ. ಇಂಗ್ಲೀಷ್ ಭಾಷೆ ಇಲ್ಲದೆ ಬದುಕೇ ಇಲ್ಲವೆಂಬ ವಾತಾವರಣವನ್ನು ಎದುರಿಸುವುದು ಹೇಗೆ ಎನ್ನುವುದನ್ನು ನಾವೆಲ್ಲ ಕೂಡಿ ಯೋಚನೆ ಮಾಡಬೇಕಾಗಿದೆ. ಇಂಗ್ಲೀಷ್ ಭಾಷೆಯ ವ್ಯಾಮೋಹ ಕೇವಲ ಶಾಲೆ-ಕಾಲೇಜುಗಳಿಗಷ್ಟೇ ಸೀಮಿತವಾಗಿಲ್ಲ, ಅದು ನಮ್ಮ ನಿತ್ಯ ವ್ಯವಹಾರವನ್ನು ಪ್ರವೇಶಿಸಿದೆ. ಈ ಸ್ವಯಂಕೃತ ಅಪರಾಧಗಳಿಂದ ಮುಕ್ತಿ ಹೇಗೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ಮಹಿಷಿ ವರದಿ ಜಾರಿಗೆ ಸರ್ಕಾರ ಬದ್ಧ

ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ತ್ರಿಭಾಷಾ ನೀತಿಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಮೊದಲನೆಯ ಇಲ್ಲವೆ ಎರಡನೆ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಬೇಕು ಎನ್ನುವ ಬೇಡಿಕೆ ಇದೆ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಸ್ವೀಕರಿಸಿದೆ. ಇದರ ಜೊತೆಗೆ ಕನ್ನಡಿಗರ ನಿರುದ್ಯೋಗದ ಸಮಸ್ಯೆಯ ನಿವಾರಣೆಗಾಗಿ ಸರೋಜಿನಿ ಮಹಿಷಿ ವರದಿಯ ಜಾರಿಗೆ ಕೂಡ ಸರ್ಕಾರ ಬದ್ಧವಾಗಿದೆ.

ಇದೇ ವೇಳೆ ರಾಜ್ಯ ಸರ್ಕಾರ ತನ್ನ ಆಡಳಿತದಲ್ಲಿ ಕನ್ನಡವನ್ನು ಬಳಸುವುದಕ್ಕೆ ಬದ್ಧವಾಗಿದೆ. ಜನರ ಬಳಿ ಸರ್ಕಾರವನ್ನು ಕೊಂಡೊಯ್ಯಬೇಕಾದರೆ ಜನರು ಆಡುವ ಭಾಷೆಯಲ್ಲಿಯೇ ಆಡಳಿತ ನಡೆಯಬೇಕಾಗುತ್ತದೆ. ಭಾರತವೆನ್ನುವುದು ಬಹುಭಾಷೆಗಳ ತೊಟ್ಟಿಲು ಇಂತಹ ನಾಡಿನಲ್ಲಿ ಭಾಷಾ ನೀತಿಯು ಸಮಾನ ಗೌರವ ಮತ್ತು ಸಮಾನ ಅವಕಾಶಗಳನ್ನು ಎಲ್ಲರಿಗೂ ಕಲ್ಪಿಸಬೇಕಾಗುತ್ತದೆ. ಇದು ರಾಜ್ಯಭಾಷೆಯಿಂದ ಮಾತ್ರ ಸಾಧ್ಯ.

ಆಡಳಿತದಲ್ಲಿ ಕನ್ನಡದ ಬಳಕೆ ಬಗ್ಗೆ ನಮ್ಮ ಸರ್ಕಾರ ನಿಲುವು ಅಚಲವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನ ಸಭೆಯ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲೇ ಇದ್ದುಬಿಟ್ಟರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ. ಈ ಬಗ್ಗೆ ನಮ್ಮ ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆಡಳಿತದಲ್ಲಿ ಕನ್ನಡವನ್ನು ಬಳಸುವ ಮೂಲಕ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದು ಮನವಿ ಮಾಡುತ್ತೇನೆ.

ನಾಡ ಬಾಂಧವರಿಗೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

PREV
Read more Articles on

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!