ಕನ್ನಡಪ್ರಭ ವಾರ್ತೆ ಚವಡಾಪುರ
ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಸೋಮವಾರದಂದು ಶಾಸಕ ಎಂ.ವೈ ಪಾಟೀಲ್, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು.ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಮಳೆ ಬಾರದೆ ಎಲ್ಲರೂ ಸಂಕಷ್ಟ ಅನುಭವಿಸುವಂತಾಗಿದೆ. ಭೀಮಾ ನದಿ ಸಂಪೂರ್ಣ ಬತ್ತಿಹೋಗಿದೆ. ಉಜನಿ ಜಲಾಶಯದಿಂದ ನಮ್ಮ ಹಕ್ಕಿನ ನೀರು ಪಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲು ಇಂದು ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದ ಅವರು, ಶಿವಕುಮಾರ ನಾಟಿಕಾರ ಅವರ ಹೋರಾಟ ಜನಪರವಾಗಿದ್ದು ಇದರಲ್ಲಿ ಯಾವುದೇ ರಾಜಕೀಯ ಮಾಡದೆ ನಾವು ಬೆಂಬಲ ಕೊಡಲು ಬಂದಿದ್ದೇವೆ. ನಾಟಿಕಾರ ಅವರು ಉಪವಾಸ ಕೈಬಿಡಲಿ ಎಲ್ಲರೂ ಕೂಡಿಕೊಂಡು ಜನಾಂದೋಲನ ರೀತಿಯಲ್ಲಿ ಹೋರಾಟ ಮಾಡೋಣ ಎಂದರು.
ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಹಿಂದಿನ ಸರ್ಕಾರಗಳು ಮಾಡಿದ ತಪ್ಪಿಗೆ ನಾವೆಲ್ಲರೂ ಇಂದು ಸಮಸ್ಯೆ ಅನುಭವಿಸುವಂತಾಗಿದೆ. ಮಹಾರಾಷ್ಟ್ರದವರು ಉಜನಿ ಜಲಾಶಯದ ನೀರನ್ನು ವಾಮಾ ಮಾರ್ಗದಿಂದ ಶೀನಾ ಜಲಾಶಯಕ್ಕೆ ಸಂಗ್ರಹಿಸಿಕೊಳ್ಳುವ ಕೆಲಸ ಅನೇಕ ವರ್ಷಗಳಿಂದ ಮಾಡುತ್ತಿದ್ದಾರೆ. ಬಚಾವತ್ ಆಯೋಗದ ಪ್ರಕಾರ ನಮ್ಮ ಹಕ್ಕಿನ ನೀರು ನಮಗೆ ಸಿಗುತ್ತಿಲ್ಲ. ಎಲ್ಲಾ ಕಡೆ ಬರವಿದೆ. ಆದರೂ ಮಾನವೀಯತೆ ಆಧಾರದಲ್ಲಿ ನೀರು ಬಿಡುವ ಕೆಲಸ ಆಗಬೇಕಾಗಿತ್ತು. ಈ ಕುರಿತು ನಾನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಸರ್ವಪಕ್ಷದ ನಿಯೋಗವನ್ನು ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಲು ಕಳಿಸುವ ಕೆಲಸ ಸರ್ಕಾರ ಮಾಡಲಿ. ನಾಟಿಕಾರ ಅವರು ಉಪವಾಸ ಸತ್ಯಾಗ್ರಹ ಕೈಬಿಡುವುದು ಬೇಡ, ಅವರೊಂದಿಗೆ ನಾವೆಲ್ಲರೂ ಇದ್ದು ಹೋರಾಟಕ್ಕೆ ಯಶಸ್ವಿಗೊಳಿಸೋಣ ಎಂದರು.ಬುಧವಾರ ಅಫಜಲ್ಪುರ ಬಂದ್‌ಗೆ ಕರೆ: ಇನ್ನೂ ನಾಟಿಕಾರ ಅವರ ಹೋರಾಟಕ್ಕೆ ಬೆಂಬಲವಾಗಿ ಅಫಜಲ್ಪುರ ಪಟ್ಟಣದ ಬಟ್ಟೆ, ಕಿರಾಣಿ ಅಂಗಡಿ, ಗ್ಯಾರೇಜ್ ಸೇರಿದಂತೆ ಎಲ್ಲಾ ವ್ಯಾಪಾರಿಗಳು, ವರ್ತಕರು ಸ್ವಯಂ ಪ್ರೇರಿತರಾಗಿ ಬುಧವಾರದಂದು ಅಫಜಲ್ಪುರ ಬಂದ್‌ಗೆ ಕರೆ ನೀಡಿದ್ದಾರೆ.
ಶಿವಕುಮಾರ ನಾಟಿಕಾರ ಮಾತನಾಡಿ ನನ್ನ ಹೋರಾಟ ತಾಲೂಕಿನ ಜನ ಜಾನುವಾರುಗಳ ಹಿತದೃಷ್ಟಿಯಿಂದ ಇದೆ ಹೊರತು ಯಾವುದೇ ರಾಜಕೀಯ ಉದ್ದೇಶಕ್ಕಲ್ಲ. ಹೀಗಾಗಿ ಹಾಲಿ, ಮಾಜಿ ಶಾಸಕರು, ವ್ಯಾಪಾರಿಗಳು, ಸಂಘ ಸಂಸ್ಥೆಗಳು, ಮಹಿಳೆಯರು, ತಾಲೂಕಿನ ಎಲ್ಲಾ ಹಳ್ಳಿಗಳ ಜನ ಬಂದು ಬೆಂಬಲ ಸೂಚಿಸುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ. ಬರಿದಾಗಿರುವ ಭೀಮಾ ನದಿಗೆ ನೀರು ಹರಿಸುವ ತನಕ ನಾನು ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.ಮಾಜಿ ಜಿ.ಪಂ ಸದಸ್ಯರಾದ ಸಿದ್ದಾರ್ಥ ಬಸರಿಗಿಡ, ಮತೀನ ಪಟೇಲ್, ಸಮಾಜ ಸೇವಕಿ ಪ್ರಭಾವತಿ ಮೇತ್ರೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶೈಲೇಶ ಗುಣಾರಿ, ಶರಣು ಪದಕಿ, ಶರಣು ಕುಂಬಾರ, ಶಿವು ಘಾಣೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ದೇವೇಂದ್ರ ಜಮಾದಾರ, ರಾಜು ಆರೇಕರ, ಮಹಾಂತೇಶ ಬಡದಾಳ ಸೇರಿದಂತೆ ಅನೇಕರು ಇದ್ದರು.