ಕನ್ನಡಪ್ರಭ ವಾರ್ತೆ ಮಂಗಳೂರು
ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಇನ್ನು ಮಂಗಳೂರಲ್ಲಿ ಬೇಕಾಬಿಟ್ಟಿ ಸಂಚಾರ ಸುಲಭವಲ್ಲ, ಸ್ವಲ್ಪ ಯಾಮಾರಿಸಿದರೂ ನಿಯಮ ಉಲ್ಲಂಘನೆಯ ಫೋಟೋ ಸಹಿತ ನೋಟಿಸ್ ಮೊಬೈಲ್‌ಗೆ ಬರಲಿದೆ.ಮಂಗಳೂರು ಮಹಾನಗರದ ಸಂಪೂರ್ಣ ಸಂಚಾರ ನಿಯಂತ್ರಣ ವ್ಯವಸ್ಥೆ ಇನ್ನು ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್ ಕಣ್ಗಾವಲಿಗೆ ಒಳಪಡಲಿದೆ. ತಕ್ಷಣ ಎಸ್‌ಎಂಎಸ್:
ಟ್ರಾಫಿಕ್ ಸಿಗ್ನಲ್ ಸೇರಿದಂತೆ ಯಾವುದೇ ಕಡೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ತಕ್ಷಣವೇ ಅತ್ಯಾಧುನಿಕ ಕ್ಯಾಮರಾ ಸ್ವಯಂ ಆಗಿ ಫೋಟೋ ತೆಗೆದು ವಾಟ್ಸ್‌ಆ್ಯಪ್ ನಂಬರ್‌ಗೆ ನೋಟಿಸ್ ರವಾನೆಯಾಗಲಿದೆ. ಅಲ್ಲದೆ ಮೊಬೈಲ್‌ಗೆ ಎಸ್‌ಎಂಎಸ್ ಕೂಡ ಬರಲಿದೆ.ಸಿಗ್ನಲ್ ಜಂಪ್ ಮಾಡಿದರೆ, ಹೆಲ್ಮೆಟ್ ಧರಿಸದಿದ್ದರೆ, ಚಾಲನೆ ವೇಳೆ ಮೊಬೈಲ್ ಬಳಸಿದರೆ, ತ್ರಿಬಲ್ ರೈಡ್, ಸೀಟು ಬೆಲ್ಟ್ ಧರಿಸದಿದ್ದರೆ ಹೀಗೆ ನಾನಾ ಟ್ರಾಫಿಕ್ ನಿಯಮ ಉಲ್ಲಂಘನೆ ಅತ್ಯಾಧುನಿಕ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದು ಕಮಾಂಡ್ ಕಂಟ್ರೋಲ್ ರೂಂನಿಂದ ಪೊಲೀಸರಿಗೆ ರವಾನೆಯಾಗಿ, ತಕ್ಷಣವೇ ಸಂಚಾರಿ ಪೊಲೀಸರಿಂದ ನಿಯಮ ಉಲ್ಲಂಘಿಸಿದವರ ಮೊಬೈಲ್‌ಗೆ ನೋಟಿಸ್ ಹಾಗೂ ಎಸ್‌ಎಂಎಸ್ ರವಾನಿಸಲ್ಪಡಲಿದೆ. ಮಿತಿ ಮೀರಿದ ವೇಗದಲ್ಲಿ ಸಂಚರಿಸಿದರೆ, ರಾಡಾರ್‌ನಿಂದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಫೋಟೋ ಸಹಿತ ದೂರು ದಾಖಲಾಗಲಿದೆ. ಜುಲೈಗೆ ಅಳವಡಿಕೆ ಪೂರ್ಣ:
ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಎರಡನೇ ಹಂತದಲ್ಲಿ ಈ ಅತ್ಯಾಧುನಿಕ ಟ್ರಾಫಿಕ್ ವ್ಯವಸ್ಥೆ ರೂಪುಗೊಳ್ಳಲಿದೆ. ಸ್ಮಾರ್ಟ್‌ಸಿಟಿಯ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನ ಮೊದಲ ಹಂತವನ್ನು 14 ಕೋಟಿ ರು. ವೆಚ್ಚದಲ್ಲಿ ರೂಪುಗೊಂಡಿದೆ. 5 ವರ್ಷದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗೆ 9 ಕೋಟಿ ರು. ಮೀಸಲಿರಿಸಲಾಗಿದೆ. ಎರಡನೇ ಹಂತವನ್ನು 19 ಕೋ.ರು.ಗಳ ಯೋಜನೆ ಮತ್ತು 5 ವರ್ಷಗಳ ಕಾರ್ಯಾಚರಣೆಗೆ 9 ಕೋ. ರು. ಮೀಸಲಿರಿಸಲಾಗಿದೆ.ಮಂಗಳೂರು ನಗರದ 15 ಕಡೆಗಳ ವಿವಿಧ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಪ್ರಸ್ತುತ ನಗರದ ಬಲ್ಲಾಳ್‌ಬಾಗ್, ಕೊಡಿಯಾಲಬೈಲ್, ಬೆಸೆಂಟ್ ಜಂಕ್ಷನ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ಉಪಕರಣಕ್ಕಾಗಿ ಕಂಬಗಳನ್ನು ಅಳವಡಿಸಲಾಗುತ್ತಿದೆ.
ಪ್ರಸ್ತುತ ಕಮಾಂಡ್ ಕಂಟ್ರೋಲ್ ಸೆಂಟರ್‌ನ ಎರಡನೇ ಹಂತದ ಕೆಲಸಗಳು ನಡೆಯುತ್ತಿದ್ದು, ಇದರದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬ್ಯಾಕ್ ಅಂಡ್ ಪ್ರೋಗ್ರಾಮಿಂಗ್ ಮೂಲಕ ಕಾರಿಡಾರ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇಂಟಲಿಜೆಂಟ್ ಟ್ರಾಫಿಕ್ ಮೆನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಮೂಲಕ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು.ಈ ವ್ಯವಸ್ಥೆ ಜಾರಿಗೊಂಡರೆ, ನಗರದಲ್ಲಿ ಝೀರೋ ಟ್ರಾಫಿಕ್ ಬೇಕು ಎಂದಿದ್ದರೆ, ಟ್ರಾಫಿಕ್ ದಟ್ಟಣೆ ಇದ್ದಲ್ಲಿ ಸಿಗ್ನಲ್‌ನಲ್ಲಿ ಬದಲಾವಣೆ ಮೊದಲಾದವುಗಳನ್ನು ಐಟಿಎಂಎಸ್ ಮೂಲಕ ನಿರ್ವಹಿಸಲಾಗುತ್ತದೆ. ನಗರ ಸಂಚಾರ ಪೊಲೀಸರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ವಿಭಾಗದ ಡಿಸಿಪಿ ದಿನೇಶ್ ಕುಮಾರ್.ಕಾರಿಡಾರ್ ರಸ್ತೆ ರಚನೆ
ಸಂಚಾರ ವ್ಯವಸ್ಥೆ ನಿರ್ವಹಣೆ ಸುಲಭ, ಸರಳಗೊಳಿಸಲು ಕಾರಿಡಾರ್ ಪರಿಕಲ್ಪನೆಯನ್ನು ಇಲ್ಲಿ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರ ಚೌಕಿಯಿಂದ ಆರಂಭಗೊಂಡು ಕೊಟ್ಟಾರ, ಲೇಡಿಹಿಲ್ ನಾರಾಯಣಗುರು ವೃತ್ತ, ಲಾಲ್‌ಬಾಗ್, ಬಳ್ಳಾಲ್‌ಬಾಗ್, ಬೆಸೆಂಟ್ ವೃತ್ತ, ಪಿವಿಎಸ್‌ನಿಂದ ಬಲಕ್ಕೆ ನವಭಾರತ್ ವೃತ್ತವಾಗಿ ಹಂಪನಕಟ್ಟೆ, ಎಡಭಾಗದಲ್ಲಿ ಬಂಟ್ಸ್‌ಹಾಸ್ಟೆಲ್, ಅಂಬೇಡ್ಕರ್ ವೃತ್ತವಾಗಿ ಹಂಪನಕಟ್ಟೆವರೆಗೆ. ಮುಂದಕ್ಕೆ ಕ್ಲಾಕ್‌ಟವರ್, ಎ.ಬಿ.ಶೆಟ್ಟಿ ವೃತ್ತದ ಮೂಲಕ ಬಲಕ್ಕೆ ಹ್ಯಾಮಿಲ್ಟನ್ ವೃತ್ತವಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಮತ್ತು ಎಬಿ ಶೆಟ್ಟಿ ವೃತ್ತದಿಂದ ನೇರವಾರ ಪಾಂಡೇಶ್ವರ, ಮಂಗಳಾದೇವಿ, ಮಹಾಕಾಳಿಪಡ್ಪು ಮೂಲಕ ಜಪ್ಪಿನಮೊಗರಿನಲ್ಲಿ ರಾ.ಹೆ.66ರ ವರೆಗಿನ ರಸ್ತೆಯನ್ನು ಒಂದು ಕಾರಿಕಾರ್ ಅಡಿಯಲ್ಲಿ ತಂದು ಈ ರಸ್ತೆಯ ಸಂಪೂರ್ಣ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತದೆ.15 ಕಡೆ ಸ್ಮಾರ್ಟ್ ಪಾರ್ಕಿಂಗ್
ಜ್ಯೋತಿ ಟಾಕೀಸ್- ಹಂಪನಕಟ್ಟೆ, ಬಾವುಟಗುಡ್ಡೆ, ರಸ್ತೆ, ಕದ್ರಿ ಪಾರ್ಕ್ ಸೇರಿದಂತೆ ನಗರದ 15 ಕಡೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.ಇದರಲ್ಲಿ ಮುಖ್ಯವಾಗಿ ವಾಹನ ಪಾರ್ಕಿಂಗ್ ಬೇಕಾದವರು ಸಂಬಂಧಪಟ್ಟ ಮೊಬೈಲ್ ಆ್ಯಪ್ ತೆರೆದರೆ ಎಲ್ಲೆಲ್ಲಿ ಪಾರ್ಕಿಂಗ್ ಇದೆ ಎಂದು ತಿಳಿಸುತ್ತದೆ. ಅಂತಹ ಸ್ಥಳದಲ್ಲಿ ಪಾರ್ಕ್ ಮಾಡಿದ ತತ್‌ಕ್ಷಣ ಎಸ್ಸೆಮ್ಮೆಸ್ ಬರುತ್ತದೆ. ವಾಪಾಸ್ ತೆರಳುವಾಗ ಫಾಸ್‌ಟ್ಯಾಗ್ ಅಥವಾ ಇತರ ಲಿಂಕ್ ಆಗಿರುವ ಮೂಲದಿಂದ ದುಡ್ಡ ಕಡಿತವಾಗುತ್ತದೆ. ಇಲ್ಲಿ ಬ್ಯಾಟರಿ ಚಾರ್ಜಿಂಗ್ ಪಾಯಿಂಟ್ ಕೂಡ ನಿರ್ಮಾಣವಾಗಲಿದೆ.
ಸ್ಮಾರ್ಟ್‌ಸಿಟಿ ಎರಡನೇ ಹಂತದಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ. ಹೈಡೆಫಿನೆಷನ್ ಕ್ಯಾಮರಾ ಅಳವಡಿಕೆ ಕಾರ್ಯ ಆರಂಭವಾಗಿದೆ. ಇದು ಜುಲೈ ಅಂತ್ಯಕ್ಕೆ ಕೊನೆಗೊಳ್ಳುವ ನಿರೀಕ್ಷೆ ಇದೆ. ಬಳಿಕ ಮಂಗಳೂರು ನಗರದ ಸಂಚಾರ ವ್ಯವಸ್ಥೆಯೂ ಸ್ಮಾರ್ಟ್ ಆಗಲಿದೆ.-ಅರುಣ್ ಪ್ರಭಾ, ಜನರಲ್ ಮೆನೇಜರ್, ಸ್ಮಾರ್ಟ್ ಸಿಟಿ ಮಂಗಳೂರು