ಕೂಡ್ಲಿಗಿ: ಸಮೀಪದ ಚೋರನೂರು ರಸ್ತೆಯಲ್ಲಿ ಬರುವ ಕೂಡ್ಲಿಗಿಯಿಂದ 5 ಕಿ.ಮೀ. ದೂರವಿರುವ ಗುಂಡಿನಹೊಳೆ ಬೀಜೋತ್ಪನ್ನ ಕೇಂದ್ರವೀಗ ನೂತನ ಕೖಷಿ ವಿಜ್ಞಾನಕೇಂದ್ರವಾಗಿ ಮಾರ್ಪಾಡಾಗಲಿದೆ.
ಬೀಜೋತ್ಪಾದನಾ ಕೇಂದ್ರ 100 ಎಕರೆ ವಿಸ್ತಾರವಿದೆ. ಇದರಲ್ಲಿ 50 ಎಕರೆಯಲ್ಲಿ ನೂತನ ಕೖಷಿ ವಿಜ್ಞಾನ ಕೇಂದ್ರ ಪ್ರಾರಂಭವಾಗಲಿದೆ. ಈ ಮೂಲಕ ಹಾಳುಕೊಂಪೆಯಂತಾಗಿದ್ದ ಬೀಜೋತ್ಪಾದನಾ ಕೇಂದ್ರಕ್ಕೆ ಈಗ ಶುಕ್ರದೆಸೆ ಬಂದಂತಾಗಿದೆ.1950ರ ಏಪ್ರಿಲ್ 1ರಂದು ಕೂಡ್ಲಿಗಿ ಸಮೀಪದ ಗುಂಡಿನಹೊಳೆಯಲ್ಲಿ ಆರಂಭವಾದ ಬೀಜೋತ್ಪಾದನಾ ಕೇಂದ್ರದಲ್ಲಿ ಕೖಷಿ ಚಟುವಟಿಕೆಗಳು ನಡೆದಿದ್ದವು. ಮಲೆನಾಡು ನಾಚಿಸುವಂತೆ ಈ ಕೖಷಿಕೇಂದ್ರ ರೈತರನ್ನು, ಪರಿಸರ ಪ್ರಿಯರನ್ನು ಕೈಬೀಸಿ ಕರೆಯುವಂತಿತ್ತು. ಈ ಕೇಂದ್ರದ ಪಕ್ಕದಲ್ಲಿಯ ಅರಣ್ಯಪ್ರದೇಶ, ಹಳ್ಳ-ಕೊಳ್ಳಗಳು ಈ ಕೇಂದ್ರದ ಸೌಂದರ್ಯ ಮತ್ತಷ್ಟು ಹೆಚ್ಚಿಸಿದ್ದವು.
100 ಎಕರೆ ವ್ಯಾಪ್ತಿಯಲ್ಲಿ ಈ ಬೀಜೋತ್ಪನ್ನ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ, ಆಧುನಿಕ ಬೀಜೋಪಚಾರ ಸೇರಿದಂತೆ ಹತ್ತು ಹಲವು ಇಲ್ಲಿಯ ರೈತರಿಗೆ ಪೂರಕವಾದ ಕೖಷಿ ಚಟುವಟಿಕೆಗಳು ನಡೆಯುತ್ತಿದ್ದವು. ಕಾಲನ ಹೊಡೆತಕ್ಕೆ ಸಿಕ್ಕು, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಕೇಂದ್ರ ನಾಮಕಾವಸ್ಥೆಯಂತಿತ್ತು. ಈಗ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸರ್ಕಾರದ ಮನವೊಲಿಸಿ ಅತ್ಯಂತ ಹಿಂದುಳಿದ ತಾಲೂಕಿಗೆ ಕೖಷಿ ವಿಜ್ಞಾನ ಕೇಂದ್ರವನ್ನು ಇಲ್ಲಿ ಪ್ರಾರಂಭಿಸಲು ಆದೇಶ ತಂದಿದ್ದಾರೆ.ಮುಂದಿನ ದಿನಗಳಲ್ಲಿ ಕೃಷಿ, ಸಸ್ಯ, ತೋಟಗಾರಿಕೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ 6 ವಿಜ್ಞಾನಿಗಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಇಲ್ಲಿಯ ರೈತರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ, ಮಣ್ಣಿನ ಪರೀಕ್ಷೆ, ಮೀನುಗಾರಿಕೆ, ಸಸ್ಯ, ತೋಟಗಾರಿಕೆ, ಬೆಳೆಗಳಿಗೆ ಕೀಟ ಬಾಧೆ ತಡೆ ಸೇರಿದಂತೆ ಹಲವು ರೀತಿಯ ಪ್ರಯೋಗಗಳು ನಡೆಯಲಿವೆ. ಜಿಲ್ಲೆಯ ಎಲ್ಲ ಕೖಷಿಕರ ಏಳ್ಗೆಗಾಗಿ ಈ ಕೖಷಿ ವಿಜ್ಞಾನ ಕೇಂದ್ರ ಕೆಲಸ ಮಾಡಲಿದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ.
ಬಡ ರೈತರಿಗೆ ಕೃಷಿ ತಂತ್ರಜ್ಞಾನ, ಸಂಶೋಧನಾ ವಿಧಾನ ತಿಳಿಯುವಂತಾಗಬೇಕು. ಪ್ರಗತಿಪರ ಕೃಷಿಗೆ ಮುಂದಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರದ ಗಮನಕ್ಕೆ ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿಗೆ ಕೃಷಿ ವಿಜ್ಞಾನ ಕೇಂದ್ರ ಮುಂಜೂರು ಮಾಡಿಸಿಕೊಂಡು ಬಂದಿದ್ದೇನೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.