ಕನ್ನಡಪ್ರಭ ವಾರ್ತೆ ನಾಲತವಾಡ
ಚಿಮ್ಮಲ್ಲಗಿ ಮತ್ತು ನಾಗರಬೆಟ್ಟ ಏತನೀರಾವರಿ ಯೋಜನೆಯ ಕಾಮಗಾರಿ ಶೀಘ್ರದಲ್ಲೆ ಪೂರ್ಣಗೊಳಿಸಬೇಕು ಎಂದು ಶನಿವಾರ ಹೋರಾಟ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೆಬಿಜೆಎನೆಲ್ ಮುಖ್ಯ ಅಧೀಕ್ಷಕ ಅಭಿಯಂತರರು ಆರ್.ಎಲ್.ಹಳ್ಳೂರ ಕಾಮಗಾರಿ ಕೈಗೊಳ್ಳವ ಶ್ರೀಅಮರೇಶ್ವರ ದೇವಸ್ಥಾನದ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲೆ ಕಾಲುವೆ ಕಾಮಗಾರಿ ಪ್ರಾರಂಭಿಸುತ್ತೇವೆ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಅಮರೇಶ್ವರ ದೇವಸ್ಥಾನದಲ್ಲಿ ರೈತರು ಹಾಗೂ ಮುಖಂಡರ ಜೊತೆ ಮಾತನಾಡಿದ ಅವರು, ಮುದ್ದೇಬಿಹಾಳ-ನಾಲತವಾಡ ಮುಖ್ಯ ರಸ್ತೆಯಲ್ಲಿ ಅಮರೇಶ್ವರ ದೇವಸ್ತಾನದ ಹತ್ತಿರ ಸೇತುವೆ ನಿರ್ಮಾಣ ಮಾಡಿ ಕಾಲುವೆ ಮಾಡುವ ಕಾಮಗಾರಿ ಮಾತ್ರ ಉಳಿದುಕೊಂಡಿದೆ. ಈ ಹಿಂದೆ ಅದಕ್ಕೆ ಸಿಂಗಲ್ ಟೆಂಡರ್ ಮಾಡಲಾಗಿತ್ತು. ಅದನ್ನು ಇಲಾಖೆಯವರು ರದ್ದು ಪಡಿಸಿದ್ದಾರೆ. ಚುನಾವಣೆ ನೀತಿ ಸಂಹಿತ ಇರುವ ಕಾರಣ ಟೆಂಡರ್ ಪ್ರೋಸೆಸ್ ವಿಳಂಬವಾಗಿತ್ತು. ಈಗ ನೀತಿ ಸಂಹಿತ ಮುಗಿದಿದೆ ಕೂಡಲೆ ರೀಟೆಂಡರ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಟೆಂಡರ್ ಅನಮೋದನೆ ಸಿಕ್ಕ ನಂತರ 3 ತಿಂಗಳ ಒಳಗಾಗಿ ಕಾಲುವೆ ಕಾಮಗಾರಿ ಮುಕ್ತಾಯ ಗೊಳಿಸುತ್ತೇವೆ. ಅವಾರ್ಡ್ ಕಾಪಿ ದೊರೆಯದ ರೈತರಿಗೆ ಶೀಘ್ರದಲ್ಲೆ ಅವಾರ್ಡ್ ಕಾಪಿ ನೀಡುವ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ರೈತರು ತಾಳ್ಮೆಯಿಂದ ಇರಬೇಕು ಎಂದರು.
ನಾಗರಬೆಟ್ಟ ಏತ ನೀರಾವರಿ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಹೆಡ್ ಕೆನಾಲ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿದ್ದೇವೆ, ಈಸ್ಟ್ ಕಾಲುವೆಯಲ್ಲಿ 1.5 ಕಿಮಿ ಕಾಲುವೆ ಮಾತ್ರ ಬಾಕಿ ಉಳಿದಿತ್ತು, ಅಲ್ಲಿಯ ರೈತರ ಭೂಸ್ವಾಧೀನ ಪ್ರಕ್ರಿಯೇ ಮುಗಿಸಿದ ನಂತರ ಕಾಲುವೆ ಪ್ರಾರಂಭಿಸಿ ಎಂದು ತಕರಾರು ಮಾಡಿದ್ದರು. ರೈತರಿಗೆ ಮನವೊಲಿಸಿದ್ದೇವೆ. 5 ತಿಂಗಳ ಒಳಗಾಗಿ ನಾಗರಬೆಟ್ಟ ಏತ ನೀರಾವರಿ ಕಾಲುವೆ ಕಾಮಗಾರಿ ಸಂಪೂರ್ಣ ಮುಕ್ತಾಯವಗುತ್ತದೆ ಎಂದರು.ಶೀಘ್ರ ಕಾಮಗಾರಿ ಮುಕ್ತಾಯಕ್ಕೆ ಆಗ್ರಹ:ಚಿಮ್ಮಲಗಿ ಏತ ನೀರಾವರಿ ಕಾಲುವೆ ಕಾಮಗಾರಿ ಮುಗಿದು ದಶಕಗಳೆ ಕಳೆದಿವೆ. ಅಮರೇಶ್ವರ ದೇವಸ್ಥಾನದ ಹತ್ತಿರ ಮಾತ್ರ ರೋಡ್ ದಾಟಿಸುವುದು ಮಾತ್ರ ಉಳಿದಿದೆ. ರೈತರು ಎಷ್ಟು ಅಂತ ತಾಳ್ಮೆ ವಹಿಸಬೇಕು. ಬ್ರಿಡ್ಜ್ ಮಾಡಿ ಕಾಲುವೆ ಮಾಡಿದರೆ ಎಲ್ಲ ರೈತರಿಗೆ ನೀರು ತಲುಪುತ್ತದೆ. ಕೂಡಲೆ ತಾವು ಸಮಸ್ಯೆಯನ್ನು ಬಗೆಹರಿಸಿ ರೈತರ ಜಮೀನಿಗೆ ನೀರು ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ನವದೆಹಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರರಾವ ದೇಶಮುಖ ಅಧಿಕಾರಿಗಳಿಗೆ ಆಗ್ರಹಿಸಿದರು.
ತಾತ್ಕಾಲಿಕವಾಗಿ ರೋಡ ಹಡ್ಡಿ ಅದಕ್ಕೆ ಪೈಪ ಮುಖಾಂತರ ಕಾಲುವೆಗೆ ಸಂಪರ್ಕಗೊಳಿಸಿದರೆ ಮುಂದಿನ ರೈತರಿಗೆ ಅನಕೂಲವಾಗುತ್ತದೆ. ಟೆಂಡರ್ ಪ್ರಕ್ರಿಯೇ ಮುಗಿದ ನಂತರ ಕಾಮಗಾರಿ ಪೂರ್ಣಗೊಳಿಸಿ ಅಲ್ಲಿಯವೆರೆಗೆ ರೈತರಿಗೆ ತಾತ್ಕಾಲಿಕ ಪರಿಹಾರ ಒದಗಿಸಬೇಕು ಎಂದು ಅಪ್ಪುಧಣಿ ದೇಶಮುಖ ಅಧಿಕಾರಿಗಳಿಗೆ ಮನವಿ ಮಾಡಿದರು.ವಿಫಲವಾದ ಸಂಧಾನ:
ಚಿಮ್ಮಲಗಿ ಹಾಗೂ ನಾಗರಬೆಟ್ಟ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ನೀರು ಹರಿಸಬೇಕು ಎಂದು ಹೋರಾಟಗಾರ ಶಿವಾನಂದ ವಾಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೋರಾಟಗಾರನಿಗೆ ದೂರವಾಣಿ ಮುಖಾಂತರ ಕರೆ ಮಾಡಿ ನಾವು ಶೀಘ್ರದಲ್ಲೆ ಉಳಿದ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಹೋರಾಟವನ್ನು ಕೈಬಿಡಿ ಎಂದು ತಿಳಿಸಿದರು. ಆದರೆ ಹೋರಾಟಗಾರ ನಾವು ನಾಳೆ ಹೋರಾಟ ಪ್ರಾರಂಭ ಮಾಡುತ್ತೇವೆ. ಹೋರಾಟ ಸ್ಥಳಕ್ಕೆ ಬಂದು ಎಲ್ಲ ರೈತರ ಸಮಕ್ಷಮ ಭರವಸೆ ನೀಡಿ ಎಂದು ದೂರವಾಣಿಯಲ್ಲಿ ತಿಳಿಸಿದ್ದಾನೆ.ಈ ವೇಳೆ ಪೃತ್ವಿರಾಜ್ ನಾಡಗೌಡ, ಶಂಕರರಾವ್ ದೇಶಮುಖ, ಅಮರ ದೇಶಮುಖ, ರಾಯನಗೌಡ ತಾತರಡ್ಡಿ, ಅಧಿಕಾರಿಗಳಾದ ಎಇಇ ಶಿವಾಜಿ ಬಿರಾದಾರ, ಜೆಇ ಬಾಬು ಬಡಿಗೇರ, ಜಾನು ನಾಯಕ, ಎಇ ಶ್ರೀಶೈಲ ದೊಡಮನಿ, ಬಿ.ಎಂ.ಸಾತಿಹಾಳ, ಹಣಮಂತ ಕುರಿ, ಸಿದ್ದಣ್ಣ ಆಲಕೊಪ್ಪರ, ಬಸವರಾಜ ಗಂಗನಗೌಡ್ರ, ಮಲ್ಲು ಗಂಗನಗೌಡ್ರ, ಸಿದ್ದಣ್ಣ ಕಟ್ಟಿಮನಿ, ವೀರೇಶ ಗಂಗನಗೌಡ್ರ, ಮೌನೇಶ ಮಾದರ, ಯಲ್ಲಪ್ಪ ಚಿಲವಾದಿ, ದುರಗಪ್ಪ ಲೊಟಗೇರಿ, ವಿಜಯ ಹಿರೇಮಠ ಇನ್ನಿತರರು ಇದ್ದರು.