ಧಾರವಾಡ:
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಜಾರಿಗೊಳಿಸುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅನ್ನಭಾಗ್ಯ ಯೋಜನೆ ಅಡಿ ಎಲ್ಲ ಪಡಿತರ ಚೀಟಿದಾರರಿಗೆ ಧಾನ್ಯ ನೀಡಲು ಮೀನಮೇಷ ಎಣಿಸುವ ಪ್ರಕರಣಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಿಂದ ಬೆಳಕಿಗೆ ಬಂದಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಜನರೊಂದಿಗೆ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ಜತೆಗೆ ನ್ಯಾಯಬೆಲೆ ಅಂಗಡಿ ಎಂಬ ಹೆಸರು ಇಲ್ಲದೇ ಜನರು ತೊಂದರೆಗೆ ಒಳಗಾದ ಪ್ರಸಂಗಗಳು ನಡೆದಿದ್ದು, ಆಹಾರ ಇಲಾಖೆ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.
ಕೀಳಾಗಿ ನೋಡಬೇಡಿ:ಉಚಿತವಾಗಿ ಬಸ್‌ಗಳಲ್ಲಿ ಅಡ್ಡಾಡುತ್ತಿದ್ದೇವೆ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹಿಳೆಯರನ್ನು ಕೀಳಾಗಿ ನೋಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯರು ಕಂಡು ಕೂಡಲೇ ಬಸ್ ನಿಲ್ಲಿಸದೇ ಹೋಗಿರುವ ಉದಾಹರಣೆಗಳೂ ಇವೆ. ಸರ್ಕಾರದ ಯೋಜನೆ ಲಾಭ ಪಡೆಯಲು ಮಹಿಳೆಯರು ಬಸ್‌ನಲ್ಲಿ ಸಂಚಾರ ಮಾಡಬಾರದೇ? ಎಂದು ಪ್ರಶ್ನಿಸಿದ ಸಮಿತಿ ಸದಸ್ಯೆಯೊಬ್ಬರು, ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳನ್ನು ಕಡಿತ ಮಾಡಿದ್ದು ಶಾಲಾ-ಕಾಲೇಜು ಮಕ್ಕಳಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.
ಶಕ್ತಿ ಯೋಜನೆ ಜಾರಿಯಾದ ಜೂನ್ 11, 2023ರಿಂದ ಜುಲೈ 29, 2024ರ ವರೆಗೆ 13 ಕೋಟಿಗೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ₹ 275 ಕೋಟಿಗೂ ಅಧಿಕ ಆದಾಯ ಬಂದಿದೆ. ಪ್ರತಿದಿನ ಸಂಸ್ಥೆಯ 993 ವಾಹನಗಳಲ್ಲಿ ಅಂದಾಜು 3.14 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಮತ್ತು 2.64 ಲಕ್ಷಕ್ಕೂ ಅಧಿಕ ಪುರುಷ ಪ್ರಯಾಣಿಕರು ಸೇರಿ ಒಟ್ಟು ಸುಮಾರು 5.77 ಲಕ್ಷ ಪ್ರಯಾಣಿಕರು ಬಸ್‍ಗಳಲ್ಲಿ ಸಂಚರಿಸಿದ್ದಾರೆ. ಒಟ್ಟು ₹ 1.37 ಕೋಟಿ ಆದಾಯ ಪ್ರತಿದಿನ ಬರುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆಯಡಿ 3,66,734 ಜನರು ನೋಂದಣಿ ಆಗಿದ್ದು, ಆಗಸ್ಟ್ 2023ರಿಂದ ಮೇ 2024ರ ವರೆಗೆ 31,54,147 ಜನರಿಗೆ ₹ 630.82 ಕೋಟಿ ಜಮೆ ಮಾಡಲಾಗಿದೆ. ಅರ್ಹರು ಅರ್ಜಿ ಸಲ್ಲಿಸಲು ಸೇವಾ ಸಿಂಧು ಆನ್ ಲೈನ್‌ದಲ್ಲಿ ತೊಂದರೆ ಆಗುತ್ತಿದ್ದು, ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬೇಗನೆ ಸರಿ ಪಡಿಸುತ್ತೇವೆಂದು ಆಹಾರ ಇಲಾಖೆ ಉಪ ನಿರ್ದೇಶಕರು ಸಮಿತಿಗೆ ಮಾಹಿತಿ ನೀಡಿದರು. ಇನ್ನು, ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,422 ಪುರುಷ ಹಾಗೂ 1808 ಮಹಿಳೆಯರು ಸೇರಿ 3,230 ಜನ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಗಿದೆ. ಬಾಕಿ ಇರುವ 1,351 ಜನ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದ್ದು, ಅವರಿಗೂ ಶೀಘ್ರದಲ್ಲಿ ಸಹಾಯಧನ ವಿತರಿಸಲು ಕ್ರಮ ವಹಿಸಬೇಕೆಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿದರು. ಉಪಕಾರ್ಯದರ್ಶಿ ದೀಪಕ ಮಡಿವಾಳರ ಸ್ವಾಗತಿಸಿದರು.