ಶಿವಮೊಗ್ಗ; ಮೊದಲನೇ ಪ್ರಾಶಸ್ತ್ಯದ ಮತದಲ್ಲೇ ಸರಳ, ಸಜ್ಜನಿಕೆಯ ಡಾ.ಧನಂಜಯ ಸರ್ಜಿ ಮತ್ತು ಅನುಭವಿ ರಾಜಕಾರಣಿ ಎಸ್.ಎಲ್.ಭೋಜೇಗೌಡ್ರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ನಗರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪದವೀಧರ ಮತದಾರರೊಂದಿಗೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪದವೀಧರ ಮತ್ತು ಶಿಕ್ಷಕ ಬಂಧುಗಳ ಭೇಟಿ ಮಾಡಿ ಮತದಾನ ಕೇಂದ್ರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಾವು- ನೀವೆಲ್ಲರೂ ಸೇರಿ ಮಾಡಬೇಕು. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಎಸ್.ಎಲ್.ಭೋಜೇಗೌಡರ ಪ್ರಚಂಡ ಮತಗಳಿಂದ ಗೆಲ್ಲಿಸಲು ಮನವಿ ಮಾಡಿದರು.
ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿದ ದ್ವೀಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನಕ್ಕೆ ತೆರಳುತ್ತಿರುವುದು ದೇಶದ ಇತಿಹಾಸದಲ್ಲಿ ಐತಿಹಾಸಿಕ ಸಂಗತಿ. ಇಂತಹ ಮಹಾನ್ ವ್ಯಕ್ತಿಯ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಯಾವುದೇ ಲೋಪಗಳಾಗದಂತೆ ದೊಡ್ಡ ಅಂತರದಲ್ಲಿ ಗೆಲುವು ತಂದು ಕೊಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಕ್ಷೇತ್ರದೆಲ್ಲೆಡೆ ಈಗಾಗಲೇ ಪ್ರವಾಸ ಕೈಗೊಂಡಿದ್ದು ಅಭೂತ ಪೂರ್ವ ಬೆಂಬಲ ಸಿಕ್ಕಿದೆ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತದಡಿಯಲ್ಲಿ ಸಂಘಟನಾ ಶಕ್ತಿಯಾದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಮೊದಲನೇ ಸುತ್ತಿನಲ್ಲೇ ನಾನು ಮತ್ತು ಎಸ್.ಎಲ್.ಭೋಜೇಗೌಡ ಗೆಲುವು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ, ಮಾಜಿ ಎಂಎಲ್ ಸಿ ಆರ್.ಕೆ.ಸಿದ್ರಾಮಣ್ಣ, ಮುಖಂಡರಾದ ದಿನ ದಯಾಳ್, ಜ್ಞಾನೇಶ್ವರ್, ಮೋಹನ್ ರೆಡ್ಡಿ, ನಾಗರಾಜ್ ಮತ್ತಿತರರಿದ್ದರು.