ಮಂಗಳೂರು: ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕ್ಯಾ. ಬೃಜೇಶ್ ಚೌಟ ಬುಧವಾರ ಕದ್ರಿಯಲ್ಲಿರುವ ಹುತಾತ್ಮವೀರ ಯೋಧರ ಸ್ಮಾರಕಕ್ಕೆ ಬಂದು ನಮನ ಸಲ್ಲಿಸಿದ್ದಾರೆ.
ವೀರ ಯೋಧರ ಸ್ಮಾರಕದಲ್ಲಿ ಮೊಂಬತ್ತಿ ಉರಿಸಿ ಮಂಡಿಯೂರಿ ನಮಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯ ದೇಶದ ಎಲ್ಲ ನಾಯಕರನ್ನು ಉಲ್ಲೇಖಿಸಿ ಅಭಿನಂದನೆ ಹೇಳಿದ ಬೃಜೇಶ್ ಚೌಟ, ಈ ಮಣ್ಣಿಗೆ, ದೈವ ದೇವರ ತುಳುನಾಡಿಗೆ ವಿಶೇಷ ಶಕ್ತಿಯಿದೆ. ದಕ್ಷಿಣ ಕನ್ನಡ ಎಂಬ ಅದ್ಭುತ ನೆಲದಲ್ಲಿ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಋಣಿಯಾಗಿದ್ದೇನೆ. ಅಸಂಖ್ಯಾತ ದೇವ ದುರ್ಲಭ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದರು. ಸೈನಿಕನಾಗಿ ದೇಶ ಸೇವೆಗೈದು ದೇಶದ ಹಲವು ಕಡೆಗಳಲ್ಲಿ ಸಂಚರಿಸಿ ನೈಜ ಭಾರತವನ್ನು ಕಂಡಿದ್ದೇನೆ. ನಮ್ಮ ಮಣ್ಣಿನ ಮಕ್ಕಳ ಸಾಮರ್ಥ್ಯವನ್ನು ತಿಳಿದಿದ್ದೇನೆ. ಈ ದೇಶಕ್ಕಾಗಿ ಅಸಂಖ್ಯಾತ ಯೋಧರು ಬಲಿದಾನ ಮಾಡಿದ್ದಾರೆ. ಅವರ ಸ್ಮಾರಕಕ್ಕೆ ಬಂದು ಈಗ ನಮನ ಸಲ್ಲಿಸಿದ್ದೇನೆ. ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿಯೇ ಆದ್ಯತೆ ಎಂದು ಹೇಳಿದರು.ಕದ್ರಿ ಯುದ್ಧ ಸ್ಮಾರಕದ ಬಳಿ ನೂರಾರು ಕಾರ್ಯಕರ್ತರು ಸೇರಿ ಜೈಕಾರ ಘೋಷಣೆ ಕೂಗಿದರು.
ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮ: ಸಂಸದ ನಳಿನ್ ಕುಮಾರ್‌ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಪಕ್ಷದ ಯಾರೇ ಕಾರ್ಯಕರ್ತರಿಗೂ ಲೋಕಸಭೆಯ ಟಿಕೆಟ್ ನೀಡಿದರೂ ಖುಷಿ ಇದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾ.ಬೃಜೇಶ್ ಚೌಟ ಅವರ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಅವರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದು, ಅವರ ಗೆಲುವಿಗಾಗಿ ಶ್ರಮಿಸುತ್ತೇನೆ. ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಅವರಿಗೆ ಬೆಂಬಲ ನೀಡಬೇಕು ಎಂದರು.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಸುಧೀರ್ಘ 15 ವರ್ಷಗಳ ಕಾಲ ಸೇವೆ ಸಲ್ಲಿಸುವ ಭಾಗ್ಯ ದೊರೆತಿದೆ. ಹಿರಿಯ ರಾಜಕಾರಣಿಗಳಾದ ಜನಾರ್ದನ ಪೂಜಾರಿ 14 ವರ್ಷ, ಧನಂಜಯ ಕುಮಾರ್ ಅವರುಗಳು 12 ವರ್ಷಗಳ ಕಾಲ ಸಂಸದರಾಗಿದ್ದರು. ನನ್ನ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಪಕ್ಷಕ್ಕೆ ಹೊಸ ಯುವಕರು ಬರಬೇಕು. ಹಿರಿಯರು ಯುವನಾಯಕರನ್ನು ಗುರುತಿಸಿ ಅವಕಾಶ ನೀಡುತ್ತಿದ್ದಾರೆ. ಕ್ಯಾ.ಬೃಜೇಶ್ ಚೌಟ ಅವರನ್ನು ಪಕ್ಷ ಗುರುತಿಸಿ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶ ನೀಡಿದೆ. ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸಲಿದ್ದೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ನಾನೂ ಕೂಡ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.