ಕಾರು-ಬೈಕ್ ಡಿಕ್ಕಿ: ಓರ್ವ ಸಾವು

KannadaprabhaNewsNetwork | Published : Oct 29, 2023 1:02 AM

ಸಾರಾಂಶ

ಕಾರು ಬೈಕ್‌ಗೆ ಡಿಕ್ಕಿಯಾಗಿ ಚಾಲಕ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ನಡೆದಿದೆ.
ಮದ್ದೂರು: ಕಾರು ಬೈಕ್‌ಗೆ ಡಿಕ್ಕಿಯಾಗಿ ಚಾಲಕ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ನಡೆದಿದೆ. ಮೈಸೂರಿನ ಗೋಕುಲಂ ಬಡಾವಣೆಯ ಲೇ. ಕೆಂಪೇಗೌಡರ ಪುತ್ರ ಕೆ. ರಾಜೇಶ್ (36) ಮೃತಪಟ್ಟ ದುರ್ದೈವಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜೇಶ್‌ನನ್ನು ಮದ್ದೂರು-ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ರೋಗಿಗೆ ಹಾಸಿಗೆ ಸಿಗದ ಕಾರಣ ಆತನನ್ನು ಆಂಬುಲೆನ್ಸ್‌ನಲ್ಲಿ ಮೈಸೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮಧ್ಯರಾತ್ರಿಯಲ್ಲಿ ಕೊನೆಯುಸಿರೆಳೆದಿದ್ದಾನೆ. ಬೈಕ್ ಹಿಂಬದಿ ಸವಾರ ಶ್ರೀರಂಗಪಟ್ಟಣ ತಾಲೂಕು ಮೇಳಾಪುರ ಗ್ರಾಮದ ಮನೋಹರ್ (37) ಗಾಯಗೊಂಡಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಗೆಜ್ಜಲಗೆರೆಯ ಮನ್ಮುಲ್ ನಲ್ಲಿ ಹಾಲಿನ ಕ್ಯಾಂಟರ್ ಚಾಲಕನಾಗಿದ್ದ ಮೃತ ಕೆ.ರಾಜೇಶ್ ಶುಕ್ರವಾರ ಸಂಜೆ 5.30ರ ಸುಮಾರಿಗೆ ತನ್ನ ಹೀರೋ ಹೋಂಡಾ ಬೈಕ್‌ನಲ್ಲಿ ಮನೋಹರ್‌ನೊಂದಿಗೆ ಮದ್ದೂರಿಗೆ ಬಂದು ವಾಪಸ್ಸಾಗುತ್ತಿದ್ದಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಮೇಲ್ಸೆತುವೆ ಕೆಳಗಿರುವ ಪ್ರವಾಸಿ ಮಂದಿರ ವೃತ್ತದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಕಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this article