ನರೇಗಾ ಕಾರ್ಮಿಕರ ಮಕ್ಕಳಿಗೆ ಆಸರೆಯಾದ ಕೂಸಿನ ಮನೆ ಯೋಜನೆ । ತಾಲೂಕಿನಲ್ಲಿ 36 ಕೂಸಿನ ಮನೆಗಳಲ್ಲಿ ಮಕ್ಕಳ ಲಾಲನೆ ಪಾಲನೆಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿನರೇಗಾ ಕೂಲಿ ಕೆಲಸಕ್ಕೆ ಹೋಗುವ ಕೂಲಿಕಾರರ ಮಕ್ಕಳ ಆರೈಕೆಗಾಗಿ ಕೂಸಿನ ಮನೆಗಳು ಆರಂಭವಾಗಿದ್ದು, ಆರೈಕೆದಾರರು ಜೋಗುಳ ಹಾಡುತ್ತ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳುವ ಕೂಲಿಕಾರರ ಮಕ್ಕಳ ಆರೈಕೆಗಾಗಿ ಗ್ರಾಪಂಗೆ ಒಂದರಂತೆ ತಾಲೂಕಿನಲ್ಲಿರುವ 36 ಕೂಸಿನ ಮನೆಗಳು ಆರಂಭವಾಗಿದ್ದು, ಇದರಲ್ಲಿ ತಾಪಂ ವತಿಯಿಂದ ತರಬೇತಿ ಪಡೆದ ಮಹಿಳೆಯರು ಕೂಲಿಕಾರರ ಶಿಶುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.ನರೇಗಾದಡಿ ಮಹಿಳೆಯರು ಕೆಲಸಕ್ಕೆ ತೆರಳಿದರೆ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಹಾಗಾಗಿ ಕೆಲಸಕ್ಕೆ ಹೋಗಲು ಅನೇಕ ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಇನ್ನೂ ಕೆಲವು ತಾಯಂದಿರು ಮಕ್ಕಳನ್ನು ಕರೆದುಕೊಂಡು ಕಾಮಗಾರಿ ಸ್ಥಳಕ್ಕೆ ಹೋಗುತ್ತಿರುವುದನ್ನು ಮನಗಂಡು ಸರ್ಕಾರ ಮಹಿಳೆಯರ ಉದ್ಯೋಗಕ್ಕೆ ಒತ್ತು ನೀಡಲು ಕೂಸಿನ ಮನೆಗಳನ್ನು ತೆರೆದಿದ್ದು, ಇಲ್ಲಿ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಆರೈಕೆ ದೊರೆಯಲಿದೆ.
ಗ್ರಾಮ ಪಂಚಾಯಿತಿಗಳಿಗೆ ಕೂಸಿನ ಮನೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದ್ದು, ಪ್ರತಿ ಪಂಚಾಯಿತಿಗೆ ₹1 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆಯಾ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಶಾಲೆಯಲ್ಲಿ ಲಭ್ಯವಿರುವ ಕೊಠಡಿ, ಗ್ರಾಪಂ ಕಚೇರಿ ಕಟ್ಟಡ ಹೀಗೆ ಬೇರೇ ಬೇರೆ ಕಡೆ ಕೂಸಿ ಮನೆ ಕೇಂದ್ರಗಳು ಆರಂಭವಾಗಿವೆ.ಕೂಸಿನ ಮನೆಯ ಕೇಂದ್ರಗಳ ವಿವರ:
ಕುಷ್ಟಗಿ ತಾಲೂಕಿನಲ್ಲಿ 36 ಗ್ರಾಪಂಗಳಿದ್ದು, 36 ಕೂಸಿನ ಮನೆಯ ಕೇಂದ್ರ ಆರಂಭಿಸಲಾಗಿದೆ. 124 ಶಿಶುಗಳು ಕೇಂದ್ರದಲ್ಲಿ ಆರೈಕೆ ಪಡೆಯುತ್ತಿವೆ. ಪ್ರತಿ ಗ್ರಾಪಂಗೆ 8 ಮಹಿಳೆಯರಿಗೆ ಶಿಶುಗಳನ್ನು ನೋಡಿಕೊಳ್ಳುವ ಕುರಿತು ತಾಪಂ ವತಿಯಿಂದ ತರಬೇತಿ ನೀಡಲಾಗಿದೆ. 10ನೇ ತರಗತಿ ಮುಗಿಸಿದ, ಜಾಬ್ ಕಾರ್ಡ್ ಹೊಂದಿದ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ನೂರು ದಿನಗಳ ಕಾಲ ಕೇಂದ್ರವೊಂದರಲ್ಲಿ ಇಬ್ಬರು ಮಹಿಳೆಯರು ಶಿಶುಗಳ ಆರೈಕೆ ಮಾಡಲಿದ್ದಾರೆ. ನರೇಗಾ ಕೂಲಿಯಾದ ಪ್ರತಿ ದಿನಕ್ಕೆ ₹349ರಂತೆಯೇ ಶಿಶು ಆರೈಕೆದಾರರಿಗೆ ವೇತನ ಸಂದಾಯವಾಗಲಿದೆ.ಕೇಂದ್ರದಲ್ಲಿ ಏನೇನಿರಲಿದೆ?:
ಗ್ರಾಮದಲ್ಲಿ ಲಭ್ಯವಿರುವ ಸುಸಜ್ಜಿತವಾದ ಕಟ್ಟಡದಲ್ಲಿ ಕೇಂದ್ರ ತೆರೆಯಲಾಗಿದ್ದು ಇಲ್ಲಿ ನೀರು, ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಇರಲಿದೆ. ಮಕ್ಕಳಿಗೆ ಆಟದ ಸಾಮಗ್ರಿಗಳು, ಕಲಿಕಾ ಸಾಮಗ್ರಿಗಳು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಬಿಡಿಸಿ ಗೋಡೆಗಳ ಆಕರ್ಷಣೆ ಹೆಚ್ಚಿಸಲಾಗಿದೆ. ಕನ್ನಡ, ಇಂಗ್ಲಿಷ್ ವರ್ಣಮಾಲೆಗಳು, ಅಂಕಿ-ಸಂಖ್ಯೆಗಳನ್ನು ಬರೆಯಿಸಲಾಗಿದೆ. ಪ್ರತಿ ಮಗುವಿಗೂ ಮಧ್ಯಾಹ್ನ ಪೌಷ್ಟಿಕಾಂಶಯುಕ್ತ ಲಘು ಉಪಾಹಾರ ಸಿಗಲಿದೆ.