ಗದಗ: ಜಿಲ್ಲಾದ್ಯಂತ ಈಗಾಗಲೇ ಮುಂಗಾರು ಮಳೆ ಆರಂಭವಾಗಿದೆ. ಹವಾಮಾನ ಇಲಾಖೆ ಸೂಚನೆಯಂತೆ ಪ್ರಸಕ್ತ ವರ್ಷ ಅಧಿಕ ಮಳೆಯಾಗುವ ಸಂಭವವಿದ್ದು, ಅತಿವೃಷ್ಟಿ ಎದುರಾದಲ್ಲಿ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.ಅವರು ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿವೃಷ್ಟಿಯಿಂದ ಜಿಲ್ಲೆಯ ಜನಜಾನುವಾರು ಜೀವ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತಹಸೀಲ್ದಾರ್ ಅತಿವೃಷ್ಟಿ ಬಾಧಿತ ಪ್ರದೇಶಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ತಾಲೂಕು ಹಂತದಲ್ಲಿ ಅತಿವೃಷ್ಟಿ ಸಮರ್ಪಕ ನಿರ್ವಹಣೆ ಕುರಿತಂತೆ ಹಾಗೂ ಅತಿವೃಷ್ಟಿ ನಿರ್ವಹಣೆ ಯೋಜನೆ ಬಗ್ಗೆ ಕಾಲಕಾಲಕ್ಕೆ ಸಭೆ ನಡೆಸಬೇಕು ಎಂದರು.
ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳು ರಾಜಕಾಲುವೆ ಹಾಗೂ ಚರಂಡಿಗಳಲ್ಲಿನ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿಕೊಡಬೇಕು. ನಗರದಲ್ಲಿನ ಖಾಸಗಿ ಖಾಲಿ ಜಾಗಗಳ ಸ್ವಚ್ಛತೆಗೊಳಿಸಲು ಸಂಬಂಧಿಸಿದ ಮಾಲೀಕರಿಗೆ ಸೂಚನೆ ನೀಡಬೇಕು. ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸುವ ಮೂಲಕ ಕಸ ವಿಲೇವಾರಿಗೆ ಮುಂದಾಗುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.ಮಳೆ ಪ್ರಮಾಣ ಅಧಿಕವಾದಲ್ಲಿ ಸಾಂಕ್ರಾಮಿಕ ರೋಗಗಳು ಎದುರಾಗಬಹುದು.ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ದಿನನಿತ್ಯ ಕುಡಿಯಲು ಬಳಸುವ ನೀರನ್ನು ಕುದಿಸಿ, ಆರಿಸಿ ಕುಡಿಯಲು ಉಪಯೋಗಿಸುವಂತೆ ತಿಳಿಹೇಳಬೇಕು. ಸಾರ್ವಜನಿಕರ ದೂರುಗಳಿಗೆ ಆಸ್ಪದ ನೀಡದಂತೆ ಅಧಿಕಾರಿ ವರ್ಗ ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಜಿಲ್ಲೆಯ ನದಿ ಕೆರೆ ಪಾತ್ರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಸಂಭವವಿರುತ್ತದೆ.ಅಂತಹ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳು ಸೂಚಿಸಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆದು ಸಮರ್ಪಕವಾಗಿ ನಿರ್ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಜಾಗೃತಿ ವಹಿಸಲು ನಿರ್ದೇಶಿಸಿದರು.ಜಿಪಂ ಸಿಇಓ ಭರತ್ ಎಸ್ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಅತಿವೃಷ್ಟಿ ಎದುರಾದಲ್ಲಿ ತಕ್ಷಣ ಜೀವಹಾನಿ ತಡೆಗೆ ಮುಂದಾಗಬೇಕು. ಜನಸಾಮಾನ್ಯರ ಜೀವ, ಆಸ್ತಿಹಾನಿ ತಡೆಗೆ ಸ್ಥಳೀಯ ಹಂತದಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು. ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಅತಿವೃಷ್ಟಿ ನಿರ್ವಹಣೆಗೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳಬೇಕು. ನುರಿತ ಈಜುಗಾರರನ್ನು ಗುರುತಿಸಿಟ್ಟುಕೊಂಡು ಸಂದರ್ಭಕ್ಕನುಸಾರ ಸಾರ್ವಜನಿಕರ ಸಂರಕ್ಷಣೆಗೆ ಆದ್ಯತೆ ನೀಡಲು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಮಾತನಾಡಿ, ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಮಟ್ಟದಲ್ಲಿ ಅತಿವೃಷ್ಟಿ ನಿರ್ವಹಣೆಗಾಗಿ ಜನಸಾಮಾನ್ಯರಿಗೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಂದಿಗ್ದ ಪರಿಸ್ಥಿತಿಯಲ್ಲಿ ಕಂಟ್ರೋಲ್ ರೂಮ್ ಗೆ ಕರೆ ಮಾಡುವ ಮೂಲಕ ಸಹಾಯ ಪಡೆಯುವಂತೆ ತಿಳಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಜಿಪಂ ಉಪಕಾರ್ಯದರ್ಶಿ ಸಿ.ಬಿ. ದೇವರಮನಿ, ಮುಖ್ಯ ಯೋಜನಾಧಿಕಾರಿ ನಿರ್ಮಲಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ ಬಿದರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಸಯ್ಯದ್, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಆಯಾ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.