ಕನ್ನಡಪ್ರಭ ವಾರ್ತೆ ತುಮಕೂರುಅಧಿಕಾರಿಗಳು ನಿವೃತ್ತಿಯಾದ ನಂತರವೂ ಸರ್ಕಾರಿ ದಾಖಲೆಗಳನ್ನು ಮನೆಗಳಲ್ಲಿ ಇಟ್ಟುಕೊಂಡರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಶಾಸಕ ಟಿ.ಬಿ.ಜಯಚಂದ್ರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿರಾ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಶಿರಾ ತಾಲೂಕಿನಲ್ಲಿ ಜೂನ್ 24ರಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ 347 ಅರ್ಜಿಗಳು ಸಲ್ಲಿಕೆಯಾಗಿದ್ದು, 47 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ಅವುಗಳನ್ನು ವಿಲೇವಾರಿ ಮಾಡಲು ಅಗತ್ಯವಿರುವ ಕೆಲವು ದಾಖಲೆಗಳನ್ನು ಈ ಹಿಂದೆ ಶಿರಾ ತಾಲೂಕಿನಲ್ಲಿ ಕಾರ್ಯನಿರ್ವಹಿಸಿರುವ ತಹಸೀಲ್ದಾರ್‌ರು ಕೆಲವು ಸರ್ಕಾರಿ ದಾಖಲೆಗಳನ್ನು ಇಲಾಖೆಗೆ ಸಲ್ಲಿಸದೇ ತಮ್ಮ ಬಳಿಯೇ ಇಟ್ಟುಕೊಂಡಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದರು.ಸರ್ಕಾರಿ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡು ಸಾರ್ವಜನಿಕರ ಕೆಲಸಕ್ಕೆ ಅಡ್ಡಿಯುಂಟು ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಡತಗಳನ್ನು ಇಲಾಖೆಗಳಿಗೆ ಹಿಂತಿರುಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಸೂಚಿಸಿದರು.ಜನಸ್ಪಂದನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಾಗಿ ಸ್ವೀಕೃತವಾಗಿರುವುದರಿಂದ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕು. ನಕಾಶೆ ರಸ್ತೆಗಳನ್ನು ಸರ್ವೇ ಮಾಡಿಸಿ ಒತ್ತುವರಿಯಾಗಿದ್ದರೆ ಅಂಥಹ ರಸ್ತೆಗಳನ್ನು ತೆರವು ಮಾಡಿಸುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಶಿರಾ ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿರಾ ನಗರ ಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಸರ್ಕಾರಿ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ನಕಲಿ ಸಾಗುವಳಿ ಚೀಟಿಗಳನ್ನು ಕೊಟ್ಟಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಅವುಗಳನ್ನು ಪರಿಶೀಲಿಸಲು ವಿಶೇಷ ತಂಡವನ್ನು ಜಿಲ್ಲೆಗೆ ಕರೆಸಲಾಗುವುದು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ರೈತರ ಬೆಳೆ ಸಮೀಕ್ಷೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚು ರೈತರು ತಮ್ಮ ಬೆಳೆಗಳನ್ನು ನೋಂದಾಯಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಜಿಲ್ಲೆಯ ಎಲ್ಲಾ ರೈತರಿಗೂ ಈ ಯೋಜನೆಯನ್ನು ತಲುಪಿಸಬೇಕು ಎಂದು ತಿಳಿಸಿದರು.ಶಿರಾ ತಾಲೂಕಿನಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು 1 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯಕ್ಕೆ ಮನೆ ನಿರ್ಮಾಣ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಆಶ್ರಯ ಯೋಜನೆಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ನಿವೇಶನಗಳನ್ನು ನೀಡಲು ತಯಾರಿ ನಡೆಸುತ್ತಿದ್ದು, ಶಿರಾ ತಾಲೂಕಿನಲ್ಲಿ ಈಗಾಗಲೇ 1500 ನಿವೇಶನಗಳ ಹಕ್ಕು ಪತ್ರಗಳು ಸಿದ್ಧವಾಗಿವೆ. ತಾಲೂಕಿನಲ್ಲಿಯೇ ಅತೀ ಹೆಚ್ಚು ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ದತ್ತಾತ್ರೇಯ ಗಾದ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅನಂತರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.