ಶೌಚಗುಂಡಿಯಲ್ಲಿ ಶಿಶು ಶವ ಪತ್ತೆ ಪ್ರಕರಣ: ಇಬ್ಬರ ಸೆರೆ

KannadaprabhaNewsNetwork | Published : Dec 16, 2024 12:49 AM

ಸಾರಾಂಶ

ಹಾರೋಹಳ್ಳಿ: ಪಟ್ಟಣದ ಬೆಂಗಳೂರು-ಕನಕಪುರ ರಸ್ತೆಯಲ್ಲಿರುವ ಡಾ.ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಯ ಮಹಿಳಾ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದ್ದ 8 ತಿಂಗಳ ನವಜಾತ ಗಂಡು ಶಿಶು ಶವ ಪ್ರಕರಣವನ್ನು ಬೇಧಿಸಿರುವ ಹಾರೋಹಳ್ಳಿ ಪೊಲೀಸರು ನೇಪಾಳ ಮೂಲದ ಯುವಕ-ಯುವತಿಯನ್ನು ಬಂಧಿಸಿದ್ದಾರೆ.

ಹಾರೋಹಳ್ಳಿ: ಪಟ್ಟಣದ ಬೆಂಗಳೂರು-ಕನಕಪುರ ರಸ್ತೆಯಲ್ಲಿರುವ ಡಾ.ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಯ ಮಹಿಳಾ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದ್ದ 8 ತಿಂಗಳ ನವಜಾತ ಗಂಡು ಶಿಶು ಶವ ಪ್ರಕರಣವನ್ನು ಬೇಧಿಸಿರುವ ಹಾರೋಹಳ್ಳಿ ಪೊಲೀಸರು ನೇಪಾಳ ಮೂಲದ ಯುವಕ-ಯುವತಿಯನ್ನು ಬಂಧಿಸಿದ್ದಾರೆ.

ನೇಪಾಳದ ಅಮೃತಕುಮಾರಿ(21), ಸುರೇಂದ್ರ ಮೆಹ್ರಾ(22) ಬಂಧಿತರು. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ವಾಸವಾಗಿದ್ದ ಇವರು, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎರಡೂವರೆ ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಂದ್ರ, ವರ್ಷದ ಹಿಂದೆ ಹಾರೋಹಳ್ಳಿಗೆ ಬಂದಿದ್ದ. ತಾನು ಪ್ರೀತಿಸುತ್ತಿದ್ದ ಅಮೃತಳನ್ನು 9 ತಿಂಗಳ ಹಿಂದೆ ನೇಪಾಳದಿಂದ ಕರೆಸಿಕೊಂಡಿದ್ದ. ಇಬ್ಬರೂ ಒಟ್ಟಿಗೆ ವಾಸವಾಗಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಅಮೃತಳಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು.

ಸ್ಥಳೀಯ ಕ್ಲಿನಿಕ್‌ನಲ್ಲಿ ತೋರಿಸಿದಾಗ, ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದರು. ನ. 24ರಂದು ಅಮೃತಾಗೆ ಹೊಟ್ಟೆನೋವು ತೀವ್ರವಾದಾಗ ಇಬ್ಬರೂ ದಯಾನಂದ ಸಾಗರ ಆಸ್ಪತ್ರೆಗೆ ತೋರಿಸಲು ಬಂದಿದ್ದರು. ಈ ವೇಳೆ ಅಮೃತ ಶೌಚಾಲಯಕ್ಕೆ ಹೋಗಿದ್ದಾಗ ಅಲ್ಲಿಯೇ ಹೆರಿಗೆಯಾಗಿ ಮಗು ಕಮೋಡ್‌ಗೆ ಬಿದ್ದಿದೆ. ಈ ವೇಳೆ ಅಮೃತಳಿಗೆ ಹೆಚ್ಚು ರಕ್ತಸ್ರಾವವಾಗಿತ್ತು. ಕಮೋಡ್‌ಗೆ ಬಿದ್ದ ಮಗು ಬದುಕಿದೆಯೊ ಇಲ್ಲವೊ ಎಂಬುದನ್ನು ಸಹ ಗಮನಿಸದ ಇಬ್ಬರೂ, ಶೌಚಕ್ಕೆ ನೀರು ಹಾಕಿದ್ದರು. ಮಗು ಶೌಚ ಗುಂಡಿಯ ಪೈಪ್‌ನಲ್ಲಿ ಬಂದು ಸಿಲುಕಿತ್ತು. ನಂತರ ಸ್ಥಳದಲ್ಲಿದ್ದ ರಕ್ತವನ್ನು ಸ್ವಚ್ಛಗೊಳಿಸಿರುವ ಇಬ್ಬರೂ, ಈ ಕುರಿತು ಆಸ್ಪತ್ರೆಯವರಿಗೂ ಮಾಹಿತಿ ನೀಡದೆ ಮನೆಗೆ ವಾಪಸ್ಸಾಗಿದ್ದರು.

ಸುಳಿವು ನೀಡಿದ ಕ್ಯಾಮೆರಾ:

ನ.27ರಂದು ಆಸ್ಪತ್ರೆಯ ಶೌಚಾಲಯ ಕಟ್ಟಿಕೊಂಡಿತ್ತು. ಆಸ್ಪತ್ರೆಯವರು ಸ್ವಚ್ಛತೆ ಕೆಲಸಗಾರರನ್ನು ಕರೆಯಿಸಿ ಪರಿಶೀಲಿಸಿದಾಗ ಶಿಶು ಶವ ಪತ್ತೆಯಾಗಿತ್ತು. ಆಸ್ಪತ್ರೆ ವೈದ್ಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ, ಅಮೃತ ಮತ್ತು ಸುರೇಂದ್ರ ಶೌಚಾಲಯಕ್ಕೆ ಹೋಗಿ ವಾಪಸ್ಸಾಗಿರುವುದು ಗೊತ್ತಾಯಿತು.

ಕ್ಯಾಮೆರಾ ದೃಶ್ಯಾವಳಿ ಸುಳಿವಿನ ಮೇರೆಗೆ ಇಬ್ಬರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ನಂತರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ನೇಪಾಳದಿಂದ ಮನೆಯವರಿಗೆ ಹೇಳದೆ ಭಾರತಕ್ಕೆ ಬಂದಿರುವ ಇಬ್ಬರೂ, ಇಲ್ಲಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ವಿವಾಹಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳೂ ಇಲ್ಲ. ಸದ್ಯ ಬಂಧಿತರ ಹಾಗೂ ಮಗುವಿನ ಡಿಎನ್‌ಎ ಪರೀಕ್ಷೆ ವರದಿ ಬರಬೇಕಿದೆ.

15ಕೆಆರ್ ಎಂಎನ್ 2.ಜೆಪಿಜಿ

ಬಂಧಿತ ಅಮೃತ ಕುಮಾರಿ, ಸುರೇಂದ್ರ ಮೆಹ್ರಾ.

Share this article