ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಈಗ ಕ್ಯಾಶ್‌ಲೆಸ್‌ ಟಿಕೆಟ್‌ ಸೌಲಭ್ಯ!

KannadaprabhaNewsNetwork |  
Published : Nov 24, 2024, 01:47 AM IST
ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಕ್ಯೂಆರ್‌ ಕೋಡ್‌ ಮೂಲಕ ಡಿಜಿಟಲ್‌ ಪಾವತಿ ವ್ಯವಸ್ಥೆ  | Kannada Prabha

ಸಾರಾಂಶ

ಬಿಎಂಟಿಸಿಯಲ್ಲಿ ಏಕರೂಪದ ಕ್ಯೂಆರ್‌ ಕೋಡ್‌ ಅಳವಡಿಸಿದರೆ, ಕೆಎಸ್ಆರ್‌ಟಿಸಿಯಲ್ಲಿ ಡೈನಾಮಿಕ್‌ ಕ್ಯೂಆರ್‌ ಕೋಡ್‌ ಅಳವಡಿಸಲಾಗಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲೂ ಕ್ಯಾಶ್‌ಲೆಸ್‌ ಟಿಕೆಟ್‌ ಸೌಲಭ್ಯ ಲಭ್ಯ.

ಕೆಎಸ್ಆರ್‌ಟಿಸಿ ಸ್ಮಾರ್ಟ್‌ ಟಿಕೆಟ್‌ ಮಿಷಿನ್‌ನ ಕ್ಯೂಆರ್‌ ಕೋಡ್‌ನ್ನು ಸ್ಕ್ಯಾನ್‌ ಮಾಡುವ ಮೂಲಕ ಮೊಬೈಲ್‌ ಮೂಲಕವೇ ಡಿಜಿಟಲ್‌ ಪಾವತಿ ಸಾಧ್ಯ. ಈ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ಕರ್ನಾಟಕ ರಾಜ್ಯದಾದ್ಯಂತ ಎಲ್ಲ 16 ವಿಭಾಗಗಳಲ್ಲಿ ಅನುಷ್ಠಾನಕ್ಕೆ ತಂದಿದೆ. ಈ ಮೂಲಕ ಸಾರಿಗೆ ವಿಭಾಗದಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಕ್ರಾಂತಿಕಾರಿ ಬದಲಾವಣೆಗೆ ತೆರೆದುಕೊಂಡಂತಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ದಲ್ಲಿ ಆರು ತಿಂಗಳ ಹಿಂದೆಯೇ ಯುಪಿಐ ಪಾವತಿ ವ್ಯವಸ್ಥೆ ಕಾರ್ಯಗತಗೊಂಡಿತ್ತು. ಇದೀಗ ಕಳೆದ ಒಂದು ವಾರದಿಂದ ಕೆಎಸ್ಆರ್‌ಟಿಸಿಯ ಎಲ್ಲ ವಿಭಾಗಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.

ಕ್ಯಾಶ್‌ಲೆಸ್ ಟಿಕೆಟ್‌ ಹೇಗೆ?:

ನಿರ್ವಾಹಕರು ಸ್ಮಾರ್ಟ್‌ ಟಿಕೆಟ್‌ ಮಿಷಿನ್‌ನಲ್ಲಿ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎಂಬುದನ್ನು ಟೈಪ್‌ ಮಾಡುತ್ತಾರೆ. ಬಳಿಕ ಬಟನ್‌ ಒತ್ತುವ ಮೂಲಕ ಕ್ಯೂಆರ್‌ಕೋಡ್‌ ಸ್ಕ್ಯಾನರ್‌ ಪ್ರತ್ಯಕ್ಷವಾಗುತ್ತದೆ. ಆಗ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಡಿಜಿಟಲ್‌ ಪಾವತಿಗೆ ಯುಪಿಐ ಅಥವಾ ಪೇ ವ್ಯಾಲೆಟ್‌ಗಳನ್ನು ತೆರೆದು ಕ್ಯೂಆರ್‌ ಕೋಡ್‌ನ್ನು ಸ್ಮಾರ್ಟ್‌ ಟಿಕೆಟ್‌ ಮಿಷಿನ್‌ನಿಂದ ಸ್ಕ್ಯಾನ್‌ ಮಾಡಬೇಕು. ಮೊತ್ತ ಕಡಿತಗೊಂಡ ಕೂಡಲೇ ಟಿಕೆಟ್‌ ಪ್ರಿಂಟ್ ಆಗಿ ಪ್ರಯಾಣಿಕರ ಕೈಸೇರುತ್ತದೆ. ಸುಲಭ ವಿಧಾನದಲ್ಲಿ ಕ್ಯಾಶ್‌ಲೆಸ್‌ ಟಿಕೆಟ್‌ ಪಡೆದುಕೊಳ್ಳಬಹುದು.

ಪ್ರಯೋಜನ ಏನು?:

ಕ್ಯಾಶ್‌ಲೆಸ್‌ ಟಿಕೆಟ್‌ ಖರೀದಿ ವ್ಯವಸ್ಥೆಯಿಂದ ಪ್ರಯಾಣಿಕರ ಚಿಲ್ಲರೆ ಸಮಸ್ಯೆ ಬಗೆಹರಿದಂತಾಗುತ್ತದೆ. ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡಿದ ಬಳಿಕ ಪ್ರಯಾಣಿಕರ ಖಾತೆಯಿಂದ ಸ್ವಯಂ ಆಗಿ ಹಣ ಕಡಿತಗೊಳ್ಳುತ್ತದೆ. ಆಗ ಮಾತ್ರ ಟಿಕೆಟ್‌ ಜನರೇಟ್‌ ಆಗುತ್ತದೆ. ಇಲ್ಲದಿದ್ದರೆ ಟಿಕೆಟ್‌ ಬರುವುದಿಲ್ಲ. ಹಾಗಾಗಿ ಟಿಕೆಟ್‌ ನೀಡಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಂತಾಗುತ್ತದೆ. ಕ್ಯಾಶ್‌ಲೆಸ್‌ ಟಿಕೆಟ್ ಸೌಲಭ್ಯ ಜಾರಿಗೊಂಡಿರುವ ಕುರಿತಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಲ್ಲಲ್ಲಿ ಸೂಚನಾ ಚೀಟಿ ಅಂಟಿಸಲಾಗಿದೆ.

......................ಡೈನಾಮಿಕ್‌ ಕೋಡ್‌

ಬಿಎಂಟಿಸಿಯಲ್ಲಿ ಏಕರೂಪದ ಕ್ಯೂಆರ್‌ ಕೋಡ್‌ ಅಳವಡಿಸಿದರೆ, ಕೆಎಸ್ಆರ್‌ಟಿಸಿಯಲ್ಲಿ ಡೈನಾಮಿಕ್‌ ಕ್ಯೂಆರ್‌ ಕೋಡ್‌ ಅಳವಡಿಸಲಾಗಿದೆ.

ಏಕರೂಪದ ಕ್ಯೂಆರ್‌ ಕೋಡ್‌ನಲ್ಲಿ ಎಷ್ಟು ಬಾರಿ ಟಿಕೆಟ್‌ ಪಡೆದರೂ ಅದೇ ಕ್ಯೂಆರ್‌ ಕೋಡ್‌ ಇರುತ್ತದೆ. ಡೈನಮಿಕ್‌ ಕ್ಯೂಆರ್‌ ಕೋಡ್‌ನಲ್ಲಿ ಪ್ರತಿ ಪಾವತಿಗೆ ಪ್ರತ್ಯೇಕ ಕೋಡ್‌ ಇರುತ್ತದೆ. ಇದರಿಂದಾಗಿ ಪ್ರಯಾಣಿಕರ ವ್ಯಕ್ತಿಗತ ಪಾವತಿ ಲೆಕ್ಕಾಚಾರ ಸುಲಭವಾಗುತ್ತದೆ. ಡಿಜಿಟಲ್‌ ಪಾವತಿಗೊಂಡ ಕೂಡಲೇ ಕೆಎಸ್‌ಆರ್‌ಟಿಸಿ ಸರ್ವರ್‌ಗೆ ಎಸ್‌ಎಂಎಸ್‌ ರವಾನೆಯಾಗುತ್ತದೆ.

ಇಷ್ಟೆಲ್ಲ ಹೈಟೆಕ್‌ ಆಗಿದ್ದರೂ ಮೊಬೈಲ್‌ ನೆಟ್‌ವರ್ಕ್‌ ವಿರಳವಾಗಿರುವ ಗ್ರಾಮೀಣ ಭಾಗದಲ್ಲಿ ಈ ವ್ಯವಸ್ಥೆ ಕಾರ್ಯನಿರ್ವಹಿಸದು. ಇದಕ್ಕೆ ಮೊಬೈಲ್‌ ನೆಟ್‌ವರ್ಕ್‌ ಬೇಕೇ ಬೇಕು. ಮಂಗಳೂರಲ್ಲಿ ಕೆಲವು ಖಾಸಗಿ ನಗರ ಸಾರಿಗೆಯಲ್ಲಿ ಈಗಾಗಲೇ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ.

ಡಿಜಿಟಲ್‌ ಪಾವತಿಯಿಂದಾಗಿ ಪ್ರಯಾಣಿಕರಿಗೆ ಹಾಗೂ ನಿರ್ವಾಹಕರಿಗೆ ಚಿಲ್ಲರೆ ಸಮಸ್ಯೆ ಇನ್ನು ಬಾರದು. ಟಿಕೆಟ್‌ ನೀಡಿಕೆ ಮೇಲಿನ ಸೋರಿಕೆ ಕಡಿಮೆಯಾಗಲಿದೆ. ಮಂಗಳೂರು ವಿಭಾಗದಲ್ಲಿ ಒಂದು ವಾರದಿಂದ ಇಲ್ಲಿವರೆಗೆ ಶೇ.10ರಿಂದ ಶೇ.15ರಷ್ಟು ಮಂದಿ ಕ್ಯಾಶ್‌ಲೆಸ್‌ ಟಿಕೆಟ್‌ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

-ರಾಜೇಶ್‌ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ