ರಾಮನಗರ: ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕೆಂದು ನಮ್ಮ ಪಕ್ಷದ ಹೈಕಮಾಂಡ್ ಪ್ರಣಾಳಿಕೆಯಲ್ಲಿಯೇ ತಿಳಿಸಿದೆ.
ನಮ್ಮ ಪಕ್ಷದ ಸಿದ್ದಾಂತ ಕೂಡ ಅದೇ ಇದೆ. ಶೋಷಿತ ಸಮಾಜಕ್ಕೆ ಸಮ ಸಮಾಜ ನಿರ್ಮಾಣ ಆಗಬೇಕು, ಎಲ್ಲರಿಗೂ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ಜಾತಿಗಣತಿ ವರದಿ ಬಗ್ಗೆ ಚರ್ಚೆ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಗ್ಗೆ ಚರ್ಚೆಗಳು ಆದಾಗಲೇ ವಾಸ್ತವ ತಿಳಿಯುತ್ತದೆ. ಜೆಡಿಎಸ್ - ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ, ವಿಜಯೇಂದ್ರ, ರಾಜಕೀಯವಾಗಿ ಲಾಭ ನೋಡುತ್ತಾರೆ. ಬಿ.ಕೆ ಹರಿಪ್ರಸಾದ್ ಹೇಳಿಕೆ ಅವರ ವೈಯಕ್ತಿಕವಾಗಿದ್ದು, ಅವರ ನಿಲುವುನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಯಾರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನಾನೊಬ್ಬ ಶಾಸಕನಾಗಿ ಪಕ್ಷದ ಆಂತರಿಕ ಚರ್ಚೆಗಳಲ್ಲೂ ಭಾಗಿಯಾಗಿದ್ದೇನೆ. ಕಳೆದ ವಾರ ನಾವೆಲ್ಲಾ ಒಕ್ಕಲಿಗ ಸಚಿವರು, ಶಾಸಕರು ಸೇರಿದ್ದೆವು.ಅಭಿವೃದ್ಧಿ ಹಾಗೂ ಸಮಾಜದ ಒಳಿತಿನ ಬಗ್ಗೆ ಚರ್ಚೆ ಮಾಡಿದ್ದೇವೆ. ಪಕ್ಷದ ಆಗು- ಹೋಗುಗಳ ಬಗ್ಗೆ ಚರ್ಚೆ ಆಗುತ್ತದೆ. ಸಭೆ ಸೇರಿ ಮಾತನಾಡಿದ್ದಕ್ಕೆಲ್ಲಾ ಬೇರೆ ಅರ್ಥಗಳನ್ನು ಕಲ್ಪಿಸುವುದು ತಪ್ಪು. ಯಾರೋ ನಾಲ್ಕು ಹಿರಿಯ ಸಚಿವರು ಸಭೆ ಸೇರಿ ಮಾತಾನಾಡಿದ್ದನ್ನೇ ಸಿಎಂ ಬದಲಾವಣೆಗೆ ಸಭೆ ಮಾಡಿದ್ದಾರೆ ಅಂತಾ ಏಕೆ ತಿಳಿದುಕೊಳ್ಳುತ್ತೀರಿ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರು. ಸಚಿವರು ಕರೆದರೆ ಎಲ್ಲರೂ ಹೋಗುತ್ತಾರೆ.ಅವರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಮೂಡಾ ಕೇಸ್ ಗೂ ಸಭೆ ಮಾಡುವುದಕ್ಕೂ ಏನು ಸಂಬಂಧ. ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಸಿಎಂ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಣಯ ಮಾಡಲಿದೆ ಎಂದು ರವಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
(ಅಗತ್ಯ ಬಿದ್ದರೆ ಎಂಎಲ್ಸಿ ಎಸ್.ರವಿ ಮಗ್‌ಶಾಟ್ ಬಳಸಿ)