ಸಂಪುಟ ಚರ್ಚೆ ಬಳಿಕ ಜಾತಿ ಜನಗಣತಿ ವರದಿ ತೀರ್ಮಾನ: ಸಿದ್ದರಾಮಯ್ಯ

KannadaprabhaNewsNetwork | Published : Mar 2, 2024 1:45 AM

ಸಾರಾಂಶ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದ್ದು, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದ್ದು, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜಯಪ್ರಕಾಶ ಹೆಗ್ಡೆ ಅವರು ಅಧ್ಯಕ್ಷರಲ್ಲವೇ ಅವರು ವರದಿಯನ್ನು ಸಲ್ಲಿಸಿದ್ದಾರೆ. ಅದನ್ನು ಸ್ವೀಕರಿಸಿದ್ದೇವೆ. ಅದರಲ್ಲಿ ಏನಿದೆ ಏನೆಲ್ಲ ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಎಂಬುದನ್ನು ಸಂಪುಟದಲ್ಲಿ ವಿಸ್ತೃತವಾಗಿ ಚರ್ಚೆ ಮಾಡುತ್ತೇವೆ ಎಂದರು. ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ತಕ್ಷಣದಲ್ಲೇ ಮಾಡಲಾಗುವುದು. ಎಲ್ಲರೂ ಒಗ್ಗಟ್ಟಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿರುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಜಾತ್ಯಾತೀತ ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ: ವಿರೋಧಪಕ್ಷದವರು ಅಧಿವೇಶನವನ್ನು ಬಹಿಷ್ಕರಿಸಿ ರಾಜ್ಯಪಾಲರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯವರು ಒಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ , ಮತ್ತೊಬ್ಬರು ಗೈರಾಗಿದ್ದರು. ಇದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಪಕ್ಷವು ಮಾಡಿಕೊಂಡಿರುವ ಮೈತ್ರಿಯನ್ನು ಶಾಸಕರೇ ಒಪ್ಪಿರುವುದಿಲ್ಲ. ಜೆಡಿಎಸ್ ಅವರು ಜಾತ್ಯಾತೀತರಾಗಿದ್ದು, ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು ಎಂದು ತಿಳಿಸಿದರು. ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಸಿಎಂ ರಾಜಕೀಯ ಭಾಷಣ ಮಾಡುತ್ತಾರೆ ಎಂಬ ಪ್ರತಿಪಕ್ಷಗಳ ಮಾತಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷ ಪ್ರಾರಂಭಿಸಿದ್ದ ಹಲವು ಕಾರ್ಯಕ್ರಮಗಳನ್ನ ಜೆಡಿಎಸ್ ಹಾಗೂ ಬಿಜೆಪಿಯವರು ಉದ್ಘಾಟನೆ ಮಾಡಿದ್ದಾರೆ. ಸರ್ಕಾರದಲ್ಲಿ ಇದು ನಿರಂತರ ಪ್ರಕ್ರಿಯೆ. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವುದನ್ನು ಪ್ರಧಾನಿ ಮೋದಿ ಅವರಿಂದಲೇ ಕಲಿತಿದ್ದು. ಅವರು ಸಂಸತ್ ಭವನದಲ್ಲಿ ರಾಜಕೀಯ ಭಾಷಣ ಮಾಡುತ್ತಾರೆ ಎಂದರು. ಹಾಸನ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ೪೮ ಕೋಟಿ ರು. ಕೊಟ್ಟಿಲ್ಲ ಎಂದು ಜೆಡಿಎಸ್ ಟೀಕೆಗೆ ಪ್ರತಿಕ್ರಿಯೆ ನೀಡಿ, ಇದಕ್ಕೆ ಅನುದಾನವನ್ನು ಜೆಡಿಎಸ್ ಅವರಲ್ಲ, ನಮ್ಮ ಸರ್ಕಾರವೇ ನೀಡುತ್ತದೆ ಎಂದರು.

ಘೋಷಣೆ ಕೂಗಿದ್ದು ನಿಜವಾದರೆ ಕಠಿಣ ಕ್ರಮಎಫ್ಎಸ್ಎಲ್ ವರದಿ ಬಹಿರಂಗಪಡಿಸುವಂತೆ ವಿಪಕ್ಷ ನಾಯಕರ ಒತ್ತಾಯ ವಿಚಾರವಾಗಿ ಮಾತನಾಡಿದ ಸಿಎಂ, ವರದಿ ಬಂದ ಕೂಡಲೇ ಬಹಿರಂಗ ಮಾಡ್ತಿವಿ ಅನುಮಾನ ಬೇಡ, ಯಾರೇ ಆದರೂ ಕೂಡ ಭಾರತದ ಪರ ಇಲ್ಲದಿರುವ ಘೋಷಣೆ ಕೂಗಬಾರದು. ಬೇರೆ ದೇಶದ ಮೇಲೆ ನಿಷ್ಠೆ ಇದ್ದರೆ ಅಂತಹವರ ಇಲ್ಲಸಲ್ಲದ ಘೋಷಣೆ ಕೂಗುವುದು ಸರಿಯಲ್ಲ. ಅಂತಹವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳುತ್ತೇವೆ ಎಂದರು. ದೇಶ ಭಕ್ತಿಯನ್ನು ನಮಗೆ ಬಿಜೆಪಿಯವರು ಹೇಳಿ ಕೊಡಬೇಕಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಅವರೇನಾ ಎಂದು ಪ್ರಶ್ನಿಸಿದರು...ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿ ಹೇಳಿ ಕೊಡಬೇಕಾ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು?, ಅವರು ರಾಜಕೀಯ ಕ್ಕೋಸ್ಕರ ಏನೋ ಹೇಳ್ತಾರೆ. ಅದು ಬೇರೆ ವಿಚಾರ. ಅವರು ಏನಾದರೂ ಆ ತರ ಕೂಗಿದ್ರೆ ಕಠಿಣವಾದ ಕ್ರಮ ತೆಗೆದುಕೊಳ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಧರ್ಮದಲ್ಲಿ ರಾಜಕಾರಣ ಇರಬಾರದು: ಡಿ.ಕೆ.ಶಿವಕುಮಾರ್

ಹಾಸನ: ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಚಕರು ಯಾರು? ಅವರು ಒಂದು ಪಾರ್ಟಿಯವರಾ? ಬಿಜೆಪಿಯವರಿಗೆ ಸೇರಿದವರೇ? ಅವರಿಗೆ ಅನುಕೂಲ ಮಾಡಲು, ಸಣ್ಣ ಸಣ್ಣ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಮಸೂದೆ ತಂದೆವು ಅದನ್ನೂ ವಿರೋಧಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಪಾಪ ರೇವಣ್ಣ ಯಾವಾಗಲೂ ದೇವಸ್ಥಾನ, ದೇವಸ್ಥಾನ ಅಂತ ಹೋಗ್ತಾರೆ, ಇದನ್ನು ರೇವಣ್ಣ ಅವರಿಗೆ ಹೇಳಬೇಕು ಎಂದರು. ದೇವರು ವರನೂ ಕೊಡಲ್ಲ ಶಾಪನೂ ಕೊಡಲ್ಲ. ವರ್ಷಕ್ಕೆ ಒಂದು ಸಾರಿ ಬಾಗಿಲು ತೆರೆದಾಗ ಹಾಸನಾಂಬೆಗೆ ನಮಸ್ಕಾರ ಮಾಡಿ ಹೋಗ್ತಿನಿ ಎಂದರು. ನನಗೆ ಹಾಸನ ಜಿಲ್ಲೆಯ ಜನತೆ ಬಗ್ಗೆ ಬಹಳ ವಿಶ್ವಾಸ ಇದೆ. ಹಾಗಾಗಿ ಹಿಮಾಚಲ ಪ್ರದೇಶದಿಂದ ರಾತ್ರೋ ರಾತ್ರಿ ಪ್ರಯಾಣ ಮಾಡಿ ನಿಮ್ಮನ್ನೆಲ್ಲಾ ಭೇಟಿ ಮಾಡಲು ಹಾಸನಕ್ಕೆ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಶಕ್ತಿ ಕೊಡ್ತಿರಾ ಅನ್ಕೊಂಡಿದ್ದೆ. ಕೊಟ್ಟಿದ್ದಾರೆ ಕೆಲವರೆಲ್ಲ ಹತ್ತಿರ ಹತ್ತಿರಕ್ಕೆ ಬಂದು ಸೋತರು, ಆ ರೀತಿ ಶಕ್ತಿ ಕೊಟ್ಟಿದ್ದೀರಿ. ನೀವು ಕೊಟ್ಟ ಮತ ಐದು ಗ್ಯಾರಂಟಿಗಳನ್ನು ತರಲು ಶಕ್ತಿ ಆಯ್ತು ಎಂದರು. ಗ್ಯಾರಂಟಿ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ ಹಾಸನ: ಗ್ಯಾರಂಟಿಗಳಿಂದ ನೆಮ್ಮದಿ ಗಳಿಸಿರುವ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ ಮಾಡುತ್ತಿದೆ. ಬಿಜೆಪಿಯ ಟೀಕೆ ಡ್ರಾಮಾಗಳಿಗೆ ಮರುಳಾಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ವಿವಿಧ ಇಲಾಖೆಗಳ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ, ಹೊಸ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಜನರ ತಲಾ ಆದಾಯ ಹೆಚ್ಚಳವಾಗಿದೆ. ಈ ಜಿಡಿಪಿ ಬೆಳವಣಿಗೆಗೆ ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕಾರಣ. ಇಡೀ ದೇಶದಲ್ಲಿ ೧೮% ಜಿಡಿಪಿ ಬೆಳವಣಿಗೆಯಾಗಿ ದೇಶದ ಅಭಿವೃದ್ಧಿಗೆ ಅತಿ ಹೆಚ್ಚು ಕೊಡುಗೆ ನೀಡಿದ ಪ್ರಥಮ ರಾಜ್ಯ ನಮ್ಮದಾಗಿದೆ. ಈ ಬೆಳವಣಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಫಲ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ಹಾಸನ ಜಿಲ್ಲೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದಕ್ಕಾಗಿ ೧೬೬ ಕೋಟಿ ಕೊಟ್ಟಿದ್ದೇವೆ. ಈ ಮಟ್ಟದ ಹಣ ಹಾಸನ ಮಹಿಳೆಯರಿಗೆ ಉಳಿತಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಹಾಸನ ಜಿಲ್ಲೆಯ ಮಹಿಳೆಯರಿಗೆ ೪೭೭ ಕೋಟಿ ರೂಪಾಯಿ ನೀಡಿದ್ದೇವೆ. ಈ ಹಣವೂ ಮಹಿಳೆಯರ ಖಾತೆಗೆ ನೇರವಾಗಿ ಹೋಗಿದೆ. ಉಚಿತ ವಿದ್ಯುತ್ ನಿಂದಾಗಿ ಹಾಸನ ಜಿಲ್ಲೆಯೊಂದರಲ್ಲೇ ೮೯ ಕೋಟಿ ರೂಪಾಯಿ ಹಣ ಜನರಿಗೆ ಉಳಿತಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ೧೩೫.೩೩ ಕೋಟಿ ಹಣ ಹಾಸನ ಜಿಲ್ಲೆಗೆ ನೀಡಲಾಗಿದೆ. ಯುವನಿಧಿಯಲ್ಲಿ ಮಾಡಿರುವ ಹಣ ಕೂಡ ಜಿಲ್ಲೆಯ ಯುವಜನತೆಗೆ ಉಳಿತಾಯವಾಗಿದೆ. ಹೀಗೆ ಪ್ರತಿಯೊಂದು ಗ್ಯಾರಂಟಿ ಯೋಜನೆಯಲ್ಲಿ ಜಿಲ್ಲೆಯ ಜನರಿಗೆ ನೂರಾರು ಕೋಟಿ ಹಣ ಉಳಿತಾಯವಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ಹೀಗೆ ಜಿಲ್ಲೆಯ ಜನರ ಖಾತೆಗೆ ಬಂದ ನೇರ ಹಣದಿಂದಾಗಿ ಜನರ ಕೊಳ್ಳುವ ಶಕ್ತಿ, ಉಳಿತಾಯದ ಶಕ್ತಿ ಹೆಚ್ಚಾಗಿ ಇದರ ಒಟ್ಟು ಪರಿಣಾಮ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ತೀವ್ರಗೊಂಡು ಆರ್ಥಿಕ ಪ್ರಗತಿ ಕಂಡಿದೆ ಎಂದರು. ಮಹಿಳೆಯರು, ರೈತರು, ಕಾರ್ಮಿ ಕರು, ಹಿಂದುಳಿದವರು, ದುಡಿಯುವವರು, ಶ್ರಮಿಕರು ಎಲ್ಲರಿಗೂ ಅನುಕೂಲ ಆಗುವ ಜಾತಿ, ಧರ್ಮದ ಮಿತಿ ಇಲ್ಲದ ಕಾರ್ಯಕ್ರಮ ಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಈ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾನಾ ಡ್ರಾಮಗಳನ್ನು ಸೃಷ್ಟಿಸುತ್ತಿದೆ, ಭರ್ಜರಿ ನಾಟಕ ಆಡುತ್ತಿದೆ ಎಂದು ಟೀಕಿಸಿದರು. ಹಾಸನದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಏರ್ ಪೋರ್ಟ್ ನಿರ್ಮಾಣಕ್ಕೆ ರಾಜ್ಯದ ಪಾಲಿನ ಹಣವನ್ನು ನಿರಂತರವಾಗಿ ನೀಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶ ಕೊಡದೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು ಎಂದರು. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಮನ್ನಣೆ: ಚಲುವರಾಯಸ್ವಾಮಿ ಹಾಸನ: ರಾಜ್ಯದ ಕೃಷಿಕರನ್ನು ಸಧೃಡಗೊಳಿಸುವ ಜೊತೆಗೆ ಕೃಷಿ ಕ್ಷೇತ್ರಕ್ಕೆ ವಿಶೇಷ ಮನ್ನಣೆ ಒದಗಿಸುವುದು ಸರ್ಕಾರದ ಆಶಯ. ಅದಕ್ಕಾಗಿ ಈ ಬಾರಿ ಸಮಗ್ರ ಬೇಸಾಯ ಸೇರಿದಂತೆ ಹತ್ತಾರು ಹೊಸ ಯೋಜನೆ ರೂಪಿಸಿ ಜಾರಿಗೆ ತರಲಾಗುತ್ತದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು. ಹಾಸನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಹಲವು ಸಚಿವ ಸಹದ್ಯೋಗಿಗಳೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಸಚಿವರು, ಸಂಶೋಧನೆಗಳ ಜೊತೆಗೆ, ತಂತ್ರಜ್ಞಾನ ಯಾಂತ್ರೀಕರಣದ ಲಾಭವನ್ನು ರೈತರಿಗೆ ತಲುಪಿಸಬೇಕು. ಆ ಮೂಲಕ ಕೃಷಿಕರನ್ನು ಸಭಲರನ್ನಾಗಿಸಬೇಕು ಎಂಬುದು ನಮ್ಮ ಚಿಂತನೆ ಎಂದು ಚಲುವರಾಯಸ್ವಾಮಿ ಹೇಳಿದರು. ಬರ ನಿರ್ವಹಣೆ ಕೇಂದ್ರದ ತಾರತಮ್ಯ ನೀತಿ:ರಾಜ್ಯದಲ್ಲಿ ತೀವ್ರ ಬರ ಇದೆ ರಾಜ್ಯದಿಂದ ೨೬ ಬಿ.ಜೆ.ಪಿ ಸಂಸದರಿದ್ದಾರೆ ಆದರೂ ಕೇಂದ್ರ ಸರ್ಕಾರ ಯಾವುದೇ ಪರಿಹಾರ ಒದಗಿಸದೆ ನಿರ್ಲಕ್ಷ್ಯ ವಹಿಸಿದೆ. ಕಳೆದ ೭೭ ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಯಾವುದೇ ಸರ್ಕಾರ ಹೀಗೆ ತಾರತಮ್ಯ ನೀತಿ ಅನುಸಿರಲಿಲ್ಲ ಎಂಬುದನ್ಮು ಜನರು ಮನಗಾಣಬೇಕು ಎಂದರು. ರಾಜ್ಯದ ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಜನ ಸಾಮಾನ್ಯರ ಮನೆಗಳಿಗೆ ಮಾಸಿಕ ಕನಿಷ್ಠ ೫೦೦೦ ರೂ ಆರ್ಥಿಕ ಅನುಕೂಲ ತಲುಪಿಸುವ ಕೆಲಸ ಮಾಡುತ್ತಿದೆ .ಇದಕ್ಕಾಗಿ ೫೬೦೦೦ ಕೋಟಿ ರೂ ತೆಗೆದಿಡಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಕೇವಲ ೮ ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲಾಗಾಗಿದೆ. ಮಂದೆಯೂ ನಮ್ಮ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ದಿಗೆ ಶ್ರಮಿಸಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು. ರಾಜ್ಯ ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ .ಈ ವರ್ಷ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ತರಲಾಗುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಪ್ರತ್ಯೇಕ ಆಹಾರ ಸಂಸ್ಕರಣೆ ಆಯುಕ್ತಾಲಯ ರಚನೆ ಘೋಷಿಸಲಾಗಿದೆ ಆಹಾರ ಪಾರ್ಕ್ ಗಳ ಸ್ಥಾಪನೆ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದರು. ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ನಮ್ಮ ಮಿಲೆಟ್ -ಸಿರಿಧಾನ್ಯ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಗುವುದು. ೫ ಸಾವಿರ ಸಣ್ಣ ಸರೋವರಗಳ ನಿರ್ಮಾಣ ಮಾಡಲಾಗುತ್ತದೆ. ಆಹಾರ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ ಪ್ರತ್ಯೇಕ ಆಯುಕ್ತಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು. ಕೆಪೆಕ್ ೮೦ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಕೃಷಿ ವಿವಿ ಸಂಶೋಧನೆಗಳು ರೈತರಿಗೆ ನೇರವಾಗಿ ತಲುಪಿಸಲು ಆದ್ಯತೆ ನೀಡಲಾಗುತ್ತಿದೆ. ದತ್ತಾಂಶ ಅಭಿವೃದ್ಧಿ, ಸ್ಟಾರ್ಟ್ ಅಫ್ ಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಸಚಿವರ ಎನ್. ಚಲುವರಾಯಸ್ವಾಮಿ ತಿಳಿಸಿದರು.

Share this article