ಸೆ.22ರಿಂದ ಮತ್ತೆ ಮರು ಜಾತಿಗಣತಿ - ಅಕ್ಟೋಬರ್‌ ಅಂತ್ಯಕ್ಕೆ ವರದಿಗೆ ಸೂಚನೆ

KannadaprabhaNewsNetwork |  
Published : Jul 24, 2025, 01:45 AM ISTUpdated : Jul 24, 2025, 05:46 AM IST
CM Meeting | Kannada Prabha

ಸಾರಾಂಶ

ತೀವ್ರ ಚರ್ಚೆಗೆ ಕಾರಣವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ (ಜಾತಿ ಆಧಾರಿತ ಜನಗಣತಿ) ಸಿದ್ಧಪಡಿಸುವ ಸಂಬಂಧ ರಾಜ್ಯಾದ್ಯಂತ ನಡೆಸಲುದ್ದೇಶಿಸಿರುವ ಮರು ಸಮೀಕ್ಷೆಯು ಸೆ.22 ರಿಂದ ಅ.7ರವರೆಗೆ ನಡೆಸಲು ಸರ್ಕಾರ ನಿರ್ಧರಿಸಿದೆ.  

 ಬೆಂಗಳೂರು :  ತೀವ್ರ ಚರ್ಚೆಗೆ ಕಾರಣವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ (ಜಾತಿ ಆಧಾರಿತ ಜನಗಣತಿ) ಸಿದ್ಧಪಡಿಸುವ ಸಂಬಂಧ ರಾಜ್ಯಾದ್ಯಂತ ನಡೆಸಲುದ್ದೇಶಿಸಿರುವ ಮರು ಸಮೀಕ್ಷೆಯು ಸೆ.22 ರಿಂದ ಅ.7ರವರೆಗೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಸಮೀಕ್ಷೆ ಕುರಿತ ವರದಿಯನ್ನು ಅಕ್ಟೋಬರ್‌ ಅಂತ್ಯದ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದೆ.

ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

2026-27ರ ಬಜೆಟ್‌ಗೆ ಆಧಾರ:

ಸಭೆ ಆರಂಭದಲ್ಲೇ ಸಮೀಕ್ಷೆ ಯಾವ ಹಾದಿಯಲ್ಲಿರಬೇಕು ಎಂಬ ಕುರಿತು ಸೂಚನೆಗಳನ್ನು ನೀಡಿದ ಸಿದ್ದರಾಮಯ್ಯ, ರಾಜ್ಯದ ಎಲ್ಲ 7 ಕೋಟಿ ಜನರನ್ನೂ ಸಮೀಕ್ಷೆಗೊಳಪಡಿಸಬೇಕು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶವಾಗಿದ್ದು, ಅದಕ್ಕೆ ತಕ್ಕಂತೆ ಸಮೀಕ್ಷೆ ನಡೆಸಬೇಕು. ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಅವರ ಒಡೆತನದಲ್ಲಿ ಭೂಮಿ ಇದೆಯೇ? ಇಲ್ಲವೇ ಎಂಬುದು ಸೇರಿ ಸಮಗ್ರ ಸಮೀಕ್ಷೆ ನಡೆಯಬೇಕು. ಸಮೀಕ್ಷೆ ವರದಿ ಮುಂದಿನ ಬಜೆಟ್‌ ಸಿದ್ಧಪಡಿಸಲು ಆಧಾರವಾಗಲಿದೆ. ಅಲ್ಲದೆ, ದೇಶಕ್ಕೆ ಮಾದರಿಯಾಗುವಂತೆ ಸಮೀಕ್ಷೆ ನಡೆಸುವಂತೆ ಸೂಚಿಸಿದರು. 

ಸೆ.22ರಿಂದ ಸಮೀಕ್ಷೆ:

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಸೆ.22ರಿಂದ ಅ.7ರವರೆಗೆ ಒಟ್ಟು 15 ದಿನಗಳ ಕಾಲ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ, ಸಮೀಕ್ಷಾ ವರದಿ ಕ್ರೋಢೀಕರಿಸಿ ಯಾವುದೇ ದೂರುಗಳಿಗೂ ಆಸ್ಪದವಿಲ್ಲದಂತೆ ವರದಿ ಸಿದ್ಧಪಡಿಸಬೇಕು. ಅಕ್ಟೋಬರ್‌ ತಿಂಗಳ ಅಂತ್ಯದೊಳಗೆ ಸಮೀಕ್ಷಾ ವರದಿಯನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಬೇಕು. ಅದಕ್ಕಾಗಿ ಈಗಿನಿಂದಲೇ ಪೂರ್ವ ಸಿದ್ಧತಾ ಕ್ರಮಗಳನ್ನು ಆರಂಭಿಸುವ ಕುರಿತು ತೀರ್ಮಾನಿಸಲಾಯಿತು.

ಇದೇ ವೇಳೆ ಸಿದ್ದರಾಮಯ್ಯ ಅವರು, ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೂ ಆಸ್ಪದವಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆವಹಿಸಬೇಕು. ಸಮೀಕ್ಷಾ ವರದಿ ಸಿದ್ಧಪಡಿಸುವುದಕ್ಕೂ ಮುನ್ನ ಯಾರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ಮೊಬೈಲ್‌ ಆ್ಯಪ್‌ ಬಳಸಿ ಸಮೀಕ್ಷೆ:

ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ 54 ಪ್ರಶ್ನೆಗಳನ್ನು ಸಿದ್ಧಪಡಿಸಿ, ಅದರ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿತ್ತು. ಈ ಬಾರಿ ಬದಲಾದ ಪರಿಸ್ಥಿತಿಗನುಗುಣವಾಗಿ ಮತ್ತಷ್ಟು ಅಂಶಗಳನ್ನು ಸೇರ್ಪಡೆ ಮಾಡುವ ಬಗ್ಗೆ ಆಯೋಗ ಪರಿಶೀಲಿಸಬೇಕು. ಅಲ್ಲದೆ, ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದಂತೆ ಮೊಬೈಲ್‌ ಆ್ಯಪ್‌ ಬಳಸಿ ಸಮೀಕ್ಷೆ ನಡೆಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದೇ ವೇಳೆ ಸಮೀಕ್ಷೆ ಕಾರ್ಯಕ್ಕೆ 1.65 ಲಕ್ಷ ಗಣತಿದಾರರು ಸೇರಿ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲದ ಅವಶ್ಯಕತೆಯಿದೆ ಎಂದು ಆಯೋಗದ ಅಧ್ಯಕ್ಷ ಮಧುಸೂಧನ ಆರ್‌.ನಾಯ್ಕ್‌ ಮಾಹಿತಿ ನೀಡಿದರು.

ಅದಕ್ಕೆ ಸಿದ್ದರಾಮಯ್ಯ ಅವರು, ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಜತೆಗೆ ಇತರ ಇಲಾಖೆಗಳ ಸಿಬ್ಬಂದಿಯನ್ನೂ ಬಳಸಿಕೊಳ್ಳಬೇಕು. ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಬೇಕು. ಹಾಗೆಯೇ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಲು ಸಮರ್ಪಕ ಯೋಜನೆ ರೂಪಿಸುವಂತೆಯೂ ಸೂಚಿಸಿದರು.

ಪ್ರಶ್ನಾವಳಿ ರಚನೆಗೆ ತಜ್ಞರ ಸಮಿತಿ ರಚನೆ:

ತೆಲಂಗಾಣದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ತೆಲಂಗಾಣದ ಸಮೀಕ್ಷಾ ಪ್ರಕ್ರಿಯೆಯನ್ನು ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಸಮೀಕ್ಷೆ ಕಾರ್ಯದ ಮೇಲೆ ನಿಗಾವಹಿಸಲು ಉನ್ನತಮಟ್ಟದ ಸಮಿತಿ ರಚಿಸಬೇಕು. ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನಾವಳಿಯನ್ನು ಅಂತಿಮಗೊಳಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಹೇಳಿದರು.

ಸಚಿವ ಶಿವರಾಜ ತಂಗಡಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಇತರರಿದ್ದರು.

ಸೆಪ್ಟೆಂಬರ್‌ನಲ್ಲೇ ಸಮೀಕ್ಷೆ ಏಕೆ?

ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ದಸರಾ ರಜೆಯಿರಲಿದೆ. ಅಲ್ಲದೆ, ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಶಾಲೆಗಳಿಗೆ ರಜೆ ಇರುವ ಸಂದರ್ಭದಲ್ಲಿ ಶಿಕ್ಷಕರ ಸೇವೆಯನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಸಮಸ್ಯೆಯಿಲ್ಲ. ಹೀಗಾಗಿಯೇ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಮರುಸಮೀಕ್ಷೆ ನಡೆಸಲು ಏನು ಕಾರಣ?

ಈ ಹಿಂದೆ ಕಾತರಾಜು ಅವರು ಸಿದ್ಧಪಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಿದ್ಧಗೊಂಡು 10 ವರ್ಷಗಳಾಗಿವೆ. ನಿಯಮದಂತೆ ಯಾವುದೇ ವರದಿ ಸಿದ್ಧಪಡಿಸಿ 10 ವರ್ಷಗಳ ನಂತರವೂ ಅನುಷ್ಠಾನಗೊಳ್ಳದಿದ್ದರೆ ಅದಕ್ಕೆ ಮಾನ್ಯತೆಯಿರುವುದಿಲ್ಲ. ಹೀಗಾಗಿ ಕಾಂತಾರಾಜು ನೇತೃತ್ವದ ವರದಿಯನ್ನು ರದ್ದು ಮಾಡಿ, ಹೊಸದಾಗಿ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ.

- ಈ ಸಮೀಕ್ಷೆಗೆ 1.65 ಲಕ್ಷ ಗಣತಿದಾರರ ಬಳಕೆ ಸಾಧ್ಯತೆ

- ತೆಲಂಗಾಣದಲ್ಲಿ ನಡೆದ ಸಮೀಕ್ಷಾ ಮಾದರಿಯ ಅಧ್ಯಯನ

- ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ

ಹೇಗಿರಲಿದೆ ಸಮೀಕ್ಷೆ/ಗಣತಿ?

- ಮನೆ ಮನೆಗೆ ತೆರಳಿ ಮೊಬೈಲ್‌ ಆ್ಯಪ್‌ ಬಳಸಿ ಸಮೀಕ್ಷೆ, ಅಂಕಿ-ಅಂಶ ಡಿಜಿಟಲ್‌ ರೂಪದಲ್ಲಿ ಸಂಗ್ರಹ- ಸಾಮಾಜಿಕ, ಶೈಕ್ಷಣಿಕ ಮಾಹಿತಿ ಜತೆ ಆರ್ಥಿಕ ಸ್ಥಿತಿ ಕುರಿತ ಮಾಹಿತಿ ಕಲೆಹಾಕುವ ಪ್ರಶ್ನಾವಳಿಗಳಿ

- ಪ್ರಶ್ನಾವಳಿಗೆ ನೀಡಲಾದ ಉತ್ತರ ಪ್ರತಿ ಸಮೀಕ್ಷೆ ನಂತರ ಪಿಡಿಎಫ್‌ ಮೂಲಕ ಮನೆ ಮಾಲೀಕರಿಗೆ

- ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರು ಆನ್‌ಲೈನ್‌ ಮೂಲಕವೂ ಸಮೀಕ್ಷೆಗೊಳಪಡಲು ಅವಕಾಶ- ಸಮೀಕ್ಷೆ-ವರದಿ ತಯಾರಿ ಸೇರಿ ಎಲ್ಲ ಪ್ರಕ್ರಿಯೆ ಪೂರ್ಣಕ್ಕೆ ಅಕ್ಟೋಬರ್‌ವರೆಗೆ ಕಾಲಾವಕಾಶ

ಹಿಂದುಳಿದವರ ಮೇಲೆತ್ತಲು ಕ್ರಮ

ರಾಜ್ಯ ಸರ್ಕಾರವು ಜಾತಿ ಗಣತಿ ಮಾಡುತ್ತಿಲ್ಲ. ರಾಜ್ಯದ ಪ್ರತಿ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗುತ್ತಿದೆ. ಅದರ ಮೂಲಕ ಹಿಂದುಳಿದ ಸಮುದಾಯದವರನ್ನು ಮೇಲೆತ್ತಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಉದ್ದೇಶದೊಂದಿಗೆ ಸಮೀಕ್ಷೆ ನಡೆಸುವಂತೆ ತಿಳಿಸಿದ್ದಾರೆ- ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

PREV
Read more Articles on

Recommended Stories

ಕರಾವಳಿಯಲ್ಲಿ ಭಾರೀ ಮಳೆ - ರೆಡ್‌ ಅಲರ್ಟ್ : ಶಾಲಾ, ಕಾಲೇಜಿಗೆ ರಜೆ
ಬಿಎಂಟಿಸಿ ನೌಕರರ ಅಪಘಾತ ವಿಮಾ ಮೊತ್ತ 1.25 ಕೋಟಿಗೆ ಏರಿಕೆ