ಗೊಡ್ಡಾಗುತ್ತಿರುವ ಜಾನುವಾರು, ವಿಷವಾಗುತ್ತಿರುವ ನೀರು!

KannadaprabhaNewsNetwork | Published : Feb 16, 2025 1:46 AM

ಸಾರಾಂಶ

ಇಲ್ಲಿಯ ಬೆಳೆಯ ಮೇಲೆ ಕಾರ್ಖಾನೆಯ ಧೂಳು ಬೀಳುತ್ತಿದೆ. ಇದನ್ನು ತಿನ್ನುವುದರಿಂದ ಜಾನುವಾರುಗಳು ರೋಗಗಳಿಗೆ ತುತ್ತಾಗುತ್ತಿವೆ. ಹೀಗಾಗಿ, ಇಲ್ಲಿ ಜಾನುವಾರುಗಳನ್ನು ಸಾಕದೆ ಇರುವುದು ಸೂಕ್ತ ಎಂದು ಮುದ್ದಾಬಳ್ಳಿ ಪಶುವೈದ್ಯಾಧಿಕಾರಿಗಳೇ ವರದಿ ಸಲ್ಲಿಸಿದ್ದಾರೆ.

ಈಗಾಗಲೇ ಇರುವ ಕಾರ್ಖಾನೆಯಿಂದಾದ ದುಷ್ಪರಿಣಾಮ

ಮತ್ತೆ ಹೊಸ ಕಾರ್ಖಾನೆ ಬಂದರೇನು ಗತಿ?

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ವ್ಯಥೆ-1

ನಮ್ಮ ಮನೆಯಲ್ಲಿ ಹತ್ತನ್ನೆರಡು ದನಗಳಿದ್ದವು, ಅವು ಗರ್ಭ ಧರಿಸಲೇ ಇಲ್ಲ. ಅಷ್ಟೇ ಅಲ್ಲ ಅವುಗಳಲ್ಲಿ ನಾಲ್ಕಾರು ಸತ್ತೇ ಹೋದವು. ವೈದ್ಯರನ್ನು ಕರೆಯಿಸಿದರೆ ಇನ್ಮುಂದೆ ನೀವು ಜಾನುವಾರು ಸಾಕಬೇಡಿ ಎಂದಿದ್ದಾರೆ.

ಮಹೇಶ ವದನಗನಾಳ, ಹಿರೇಬಗನಾಳ ಗ್ರಾಮಸ್ಥ

ವ್ಯಥೆ-2

ಮನೆಯಿಂದ ಆಚೆ ಹೋಗುವಾಗ ರೊಟ್ಟಿಯ ಮೇಲೆ ಮುಚ್ಚಿ ಹೋಗದಿದ್ದರೆ ಬರುವುದರೊಳಗಾಗಿ ಕಪ್ಪಾಗಿರುತ್ತವೆ. ಅವುಗಳನ್ನು ನಾವು ತಿಂದರೆ ದೇವರೇ ಕಾಪಾಡಬೇಕು. ದನಗಳೇ ಹೊಲದಲ್ಲಿನ ಮೇವು ತಿನ್ನುವುದಿಲ್ಲ, ಅದರಲ್ಲಿ ಬೆಳೆದ ಬೆಳೆಯನ್ನು ನಾವು ತಿನ್ನುತ್ತೇವೆ. ಇದೆಂತ ದುರ್ಗತಿ ನೋಡಿ.

ರೇಣಮ್ಮ ಪಲ್ಲೇದ, ಹಿರೇಬಗನಾಳ

ವ್ಯಥೆ-3

ಇಲ್ಲಿಯ ಬೆಳೆಯ ಮೇಲೆ ಕಾರ್ಖಾನೆಯ ಧೂಳು ಬೀಳುತ್ತಿದೆ. ಇದನ್ನು ತಿನ್ನುವುದರಿಂದ ಜಾನುವಾರುಗಳು ರೋಗಗಳಿಗೆ ತುತ್ತಾಗುತ್ತಿವೆ. ಹೀಗಾಗಿ, ಇಲ್ಲಿ ಜಾನುವಾರುಗಳನ್ನು ಸಾಕದೆ ಇರುವುದು ಸೂಕ್ತ ಎಂದು ಮುದ್ದಾಬಳ್ಳಿ ಪಶುವೈದ್ಯಾಧಿಕಾರಿಗಳೇ ವರದಿ ಸಲ್ಲಿಸಿದ್ದಾರೆ!

ಇದು, ಜಿಲ್ಲೆಯಲ್ಲಿ ಈಗಾಗಲೇ ಇರುವ ಕಾರ್ಖಾನೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು. ತಾಲೂಕಿನಲ್ಲಿಯೇ ಸುಮಾರು 17 ಬೃಹತ್ ಕಾರ್ಖಾನೆಗಳು, 100ಕ್ಕೂ ಹೆಚ್ಚು ಸಣ್ಣಪುಟ್ಟ ಕಾರ್ಖಾನೆಗಳು ಇವೆ. ಇದರಿಂದಲೇ ಇಲ್ಲಿಯ ಜನರ ಬದುಕು ಅಸಹನೀಯವಾಗಿದೆ.

ತಾಲೂಕಿನ ಹಿರೇಬಗನಾಳ, ಮುದ್ದಾಬಳ್ಳಿ, ಹಾಲವರ್ತಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಜಾನುವಾರುಗಳು ಗೊಡ್ಡಾಗಿವೆ. ಮುದ್ದಾಬಳ್ಳಿ ಗ್ರಾಮದ ಬಳಿ ಡೈರಿ ಮಾಡಿದ ರೈತನೋರ್ವ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಿದ್ದಾನೆ. ಕಾರ್ಖಾನೆಗಳ ಧೂಳಿನಿಂದಲೇ ಈತನ ಜಾನುವಾರುಗಳು ಸತ್ತು ಹೋದವು. ಹೀಗೆ ಇಲ್ಲಿಯ ರೈತರು ಅನುಭವಿಸುತ್ತಿರುವ ಯಾತನೆ ಅಷ್ಟಿಷ್ಟಲ್ಲ. ಇಲ್ಲಿ ಕಾರ್ಖಾನೆ ಧೂಳು ಬೆಳೆ ಮತ್ತು ಮೇವಿನ ಮೇಲೆ ಹೊದಿಕೆಯಂತೆ ಬೀಳುವುದರಿಂದ ಅದನ್ನು ಮೇಯುವ ಜಾನುವಾರುಗಳು ಗೊಡ್ಡಾಗುತ್ತಿವೆ, ಸಾವನ್ನಪ್ಪುತ್ತಿವೆ. ಇದನ್ನು ಖುದ್ದು ಪಶು ಸಂಗೋಪನಾ ಇಲಾಖೆಯ ವೈದ್ಯರೇ ಕಳೆದ ವರ್ಷ ವರದಿ ಮಾಡಿದ್ದಾರೆ.

ಇದು ಜಾನುವಾರುಗಳ ಕತೆಯಾದರೆ, ರೈತರ ಭೂಮಿ ಬರಡಾಗುತ್ತಿದೆ. ಬೆಳೆದು ನಿಲ್ಲುವ ಬೆಳೆ ಫಲ ನೀಡುವುದೇ ಇಲ್ಲ. ರೈತರು ಇಲ್ಲಿ ತಮ್ಮ ಭೂಮಿಯಲ್ಲಿ ಎರಡನೇ ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಮಳೆಗಾಲದಲ್ಲಿ ಮೇಲಿಂದ ನೀರು ಬೆಳೆಗೆ ಬೀಳುವುದರಿಂದ ಆಗ ಮಾತ್ರ ಒಂದು ಬೆಳೆ ಬರುತ್ತದೆ. ಬೇಸಿಗೆ ಬೆಳೆ ಬರುವುದೇ ಇಲ್ಲ. ಈ ಕುರಿತು ಸಹ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ಸಲ್ಲಿಸಿದೆ. ಇದನ್ನು ಸಚಿವರೇ ಸದನದಲ್ಲಿ ಉತ್ತರಿಸಿದ್ದಾರೆ.

ಈಗಾಗಲೇ ಅನೇಕ ರೈತರು ಕೋರ್ಟ್ ಮೊರೆ ಹೋಗಿದ್ದು, 20 ವರ್ಷಗಳ ಸತತ ಹೋರಾಟದ ಬಳಿಕ ಹೈಕೋರ್ಟ್‌ನಲ್ಲಿ ರೈತರ ಭೂಮಿ ಕೊಂಡುಕೊಂಡು ಅವರಿಗೆ ಪರಿಹಾರ ನೀಡಿ, ಅವರು ಎಲ್ಲಿಯಾದರೂ ಬದುಕಿಕೊಳ್ಳುತ್ತಾರೆ ಎಂದು ಅನೇಕ ಪ್ರಕರಣಗಳಲ್ಲಿ ಕೋರ್ಟ್ ಸಹ ಹೇಳಿದೆ.

ವಿಷವಾಗುತ್ತಿರುವ ನೀರು:

ಕೊಪ್ಪಳ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಆದರೆ, ದುರ್ದೈವ ಎಂದರೆ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದರಲ್ಲೂ ಕೊಪ್ಪಳ ತಾಲೂಕಿನ ಕನಕಾಪುರ, ಬೇವಿನಳ್ಳಿ, ಹಿರೇಬಗನಾಳ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿನ ರೈತರ ಬೋರ್‌ವೆಲ್‌ನ ನೀರು ವಿಷದಂತೆ ಇದೆ.

ಬೇವಿನಳ್ಳಿ ಗ್ರಾಮಸ್ಥರಿಗೆ ಬೇರೆಡೆಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ಹೀಗೆ ಭೂಮಿಯೊಳಗಿನ ನೀರು ಸಹ ವಿಷವಾಗುತ್ತಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತವಾಗಿದೆ.

ಇದು, ಈಗಿರುವ ಕಾರ್ಖಾನೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು. ಇನ್ನು ಇದರ ಜತೆಗೆ ಈಗ ಕೊಪ್ಪಳಕ್ಕೆ ಹೊಂದಿಕೊಂಡೇ ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಕಾರ್ಖಾನೆ ಆರಂಭಿಸಲು ಸರ್ಕಾರ ಅನುಮತಿ ನೀಡಿರುವುದು ಕೊಪ್ಪಳ ಮತ್ತು ಸುತ್ತಮುತ್ತಲ ಗ್ರಾಮಗಳ ಜನರ ನಿದ್ದೆಗೆಡಿಸಿದೆ.

ಮನೆ ತೊರೆಯುತ್ತಿರುವ ಜನರು:

ಕೊಪ್ಪಳ ನಗರದ ಡಿಸಿ ಕಚೇರಿ ಸುತ್ತಮುತ್ತಲ ಪ್ರದೇಶದಲ್ಲಿ ಈಗಾಗಲೇ ಮನೆ ಕಟ್ಟಿಕೊಂಡವರು ಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ವಾಸಿಸುವುದು ಬೇಡವೇ ಬೇಡ ಎನ್ನುತ್ತಿದ್ದಾರೆ, ಬಾಡಿಗೆಗೂ ಯಾರೂ ಬರುತ್ತಿಲ್ಲವಂತೆ. ಅಷ್ಟೇ ಅಲ್ಲ ಕೆಲವರು ಇಲ್ಲಿ ಇನ್ಮುಂದೆ ವಾಸಿಸಲು ಸಾಧ್ಯವೇ ಇಲ್ಲ ಎಂದು ತಮ್ಮ ಮನೆಯನ್ನೇ ಮಾರಿಕೊಂಡು ಹೋಗಿರುವ ಉದಾಹರಣೆಗಳು ಇವೆ ಎನ್ನಲಾಗುತ್ತಿದೆ.

ಜಿಲ್ಲಾಡಳಿತದ ಭವನದ ಮೇಲೆ ಹಾಗೂ ಜಿಲ್ಲಾಧಿಕಾರಿ ಮನೆಯ ಚಾವಣಿಗಳು ಕಪ್ಪಾಗಿರುತ್ತವೆ. ಅಂಗಳದಲ್ಲಿಯೂ ನಿತ್ಯವೂ ಕಸ ಗುಡಿಸುವಾಗ ಕಪ್ಪು ಹುಡಿ ಹಾರುತ್ತಿರುತ್ತವೆ. ನಗರದ ಶೇ. 25ರಷ್ಟು ಭಾಗದಲ್ಲಿ ಈ ಸಮಸ್ಯೆ ಈಗಲೇ ಇದೆ. ಹೀಗಾಗಿ, ಮತ್ತೊಂದು ಕಾರ್ಖಾನೆ ನಮ್ಮೂರಿಗೆ ಬೇಡ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಿವೆ.

Share this article