ಕಾವೇರಿ ವಿವಾದ: ಕಾನೂನು ಮಂಡನೆಯಲ್ಲಿ ರಾಜ್ಯ ವಿಫಲ

KannadaprabhaNewsNetwork | Published : Oct 6, 2024 1:19 AM

ಸಾರಾಂಶ

ತುಮಕೂರು: ಪರಂಪರಾನುಗತ ಹಕ್ಕು ಇಲ್ಲದಿರುವಾಗ ತಮಿಳುನಾಡು ರಾಜ್ಯವು, ತನ್ನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಲು ಬಿಡಬಾರದಿತ್ತು. ಕಾನೂನು ಮಂಡನೆಯಲ್ಲಿ ರಾಜ್ಯದ ಹಿನ್ನಡೆಯಿಂದ ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ವಿಷಾದಿಸಿದರು.

ತುಮಕೂರು: ಪರಂಪರಾನುಗತ ಹಕ್ಕು ಇಲ್ಲದಿರುವಾಗ ತಮಿಳುನಾಡು ರಾಜ್ಯವು, ತನ್ನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಲು ಬಿಡಬಾರದಿತ್ತು. ಕಾನೂನು ಮಂಡನೆಯಲ್ಲಿ ರಾಜ್ಯದ ಹಿನ್ನಡೆಯಿಂದ ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ವಿಷಾದಿಸಿದರು.

ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಶನಿವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ನಿವೃತ್ತ ಆರಕ್ಷಕ ಮಹಾನಿರೀಕ್ಷಕ ಸಿ.ಚಂದ್ರಶೇಖರ್ ವಿರಚಿತ ‘ಕಾವೇರಿ ವಿವಾದ -ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ತಮಿಳುನಾಡು ಒಪ್ಪಂದ ಮೀರಿ, ಕೃಷಿ ಜಮೀನು ವಿಸ್ತರಿಸಿದೆ ಎಂದು ಕಾವೇರಿ ನದಿ ನ್ಯಾಯಮಂಡಳಿ ಕೂಡ ಹೇಳಿದೆ. ಅದರೆ ಆನಂತರ ರಾಜ್ಯ ಕಾನೂನು ಮಂಡನೆಯನ್ನು ಸರಿಯಾಗಿ ಮಾಡಿಲ್ಲ. ಇದರಿಂದ ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ನೀಡಿದ್ದ ಆದೇಶ ಕರ್ನಾಟಕಕ್ಕೆ ಅನುಕೂಲ ಆಗಿತ್ತು. ಆದರೆ, ಮದ್ರಾಸ್ ಸರ್ಕಾರದ ಒತ್ತಾಯದಿಂದಾಗಿ, ಬ್ರಿಟಿಷ್ ಸರ್ಕಾರ ಅದನ್ನು ಅಸಿಂಧುಗೊಳಿಸಿತು. ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಮೇಲೆ ತಮಿಳುನಾಡಿಗೆ ಪರಂಪರಾನುಗತ ಹಕ್ಕು ಇರಲಿಲ್ಲ ಎಂದು ಹೇಳಿದರು.

ಅಂತಾರಾಷ್ಟ್ರೀಯ ನಿಯಮಗಳಂತೆ ನದಿ ನೀರು ಹಂಚಿಕೆ ಸಮಾನ ಭಾಗಗಳಾಗಿ ಹಂಚಬೇಕಾಗಿತ್ತು. ಆದರೆ ಬ್ರಿಟಿಷರ ಕಾಲದಿಂದ ಸುಪ್ರೀಂ ಕೋರ್ಟ್ ತೀರ್ಪಿನ ತನಕ ರಾಜ್ಯಕ್ಕೆ ವಿರುದ್ಧವಾದ ತಿರ್ಮಾನಗಳೇ ಬಂದವು. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳು ಬದ್ಧತೆಯ ಕೆಲಸ ಸಮರ್ಥವಾಗಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಹಿರಿಯ ಪೋಲೀಸ್ ಅಧಿಕಾರಿ ಹಾಗೂ ಲೇಖಕ ಸಿ.ಚಂದ್ರಶೇಖರ್ ಮಾತನಾಡಿ, 1990ರಲ್ಲಿ ಕಾವೇರಿ ವಿವಾದ ಭುಗಿಲೆದ್ದಾಗ 21 ಮಂದಿ ಬಲಿಯಾದರು. ಈ ಘಟನೆಯನ್ನು ಕಣ್ಣಾರ ಕಂಡ ನಾನು ಕಾವೇರಿ ವಿವಾದ ಐತಿಹಾಸಿಕ ಹಿನ್ನೆಲೆಯ ಸಮಗ್ರ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಬೇಕೆಂದು ನಿರ್ಧರಿಸಿದ್ದೆ. ಅದು ಈಗ ಸಾಧ್ಯವಾಗಿದೆ. ಕಾವೇರಿ ವಿಷಯದಲ್ಲಿ ಆರಂಭದಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ನಿಖರವಾದ ದಾಖಲೆಗಳನ್ನು ಹೊಂದಿದ್ದರೂ, ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಹೇಳಿದರು.

ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ ಕೆ ಬಿ ಲಿಂಗೇಗೌಡ ಮಾತನಾಡಿ, ಕಾವೇರಿ ನಾಡಿನ ಅಮೂಲ್ಯ ಜಲಸಂಪತ್ತು. ಅದರ ಅರಿವುವನ್ನು ತಿಳಿದುಕೊಳ್ಳುವುದು ಮುಖ್ಯ. ಯವಜನತೆ ಅದರಲ್ಲೂ ವಿದ್ಯಾರ್ಥಿಗಳು ಜಲಸಂಪತ್ತಿನ ಮೌಲ್ಯಗಳನ್ನು ಕುರಿತು, ಜಲಮೂಲಗಳ ರಕ್ಷಣೆಗೆ ಮುಂದಾಗಬೇಕಿದೆ. ಮೊಬೈಲ್‌ಗಳ ಅಡಿಯಾಳಾಗದೇ ವಿಚಾರಮಂಥನಗಳಿಗೆ ಕಿವಿಕೊಡಬೇಕಾಗಿದೆ ಎಂದರು.

ರಾಜ್ಯ ರೈತ ಸಂಘದ ಮುಖಂಡರಾದ ಸುನಂದಾ ಜಯರಾಮು, ಕರ್ನಾಟಕ ರಾಜ್ಯ ನೂಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿದೇರ್ಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ, ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಸುಪಾಲ ಡಾ.ಎಂ.ಎಸ್.ರವಿಪ್ರಕಾಶ್, ರಾಜ್ಯ ರೈತಸಂಘದ ಮುಖಂಡರಾದ ಬೋರೇಗೌಡ, ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲರಾದ ಡಾ ಮಮತ ಜಿ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಇದ್ದರು.

ಕನ್ನಡ ಪ್ರಾಧ್ಯಾಪಕ ಡಾ.ರೇಣುಕಾಪ್ರಸಾದ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ರಾಜೇಶ್ ಸ್ವಾಗತಿಸಿದರೆ, ಶಾಲಿಕ ವಂದಿಸಿದರು.

Share this article