250 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಯೋಜನೆ

KannadaprabhaNewsNetwork |  
Published : Jul 22, 2025, 01:16 AM IST
ಕೆ ಕೆ ಪಿ ಸುದ್ದಿ 02:ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆ ಉದ್ದೇಶಸಿ ಡಿ ಕೆ ಶಿವಕುಮಾರ್ ಮಾತನಾಡಿದರು.  | Kannada Prabha

ಸಾರಾಂಶ

ಕನಕಪುರ: ಬೆಂಗಳೂರು ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು ಪಂಪ್ ಮಾಡಿ ಈ ಕ್ಷೇತ್ರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ತಲುಪಿಸುವ ಯೋಜನೆ ರೂಪಿಸುವ ಜೊತೆಗೆ ಕ್ಷೇತ್ರದ ಕೆರೆಗಳಿಗೂ ನೀರನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕನಕಪುರ: ಬೆಂಗಳೂರು ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು ಪಂಪ್ ಮಾಡಿ ಈ ಕ್ಷೇತ್ರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ತಲುಪಿಸುವ ಯೋಜನೆ ರೂಪಿಸುವ ಜೊತೆಗೆ ಕ್ಷೇತ್ರದ ಕೆರೆಗಳಿಗೂ ನೀರನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀರಾವರಿ ಸಚಿವನಾದ ನಾನು ನನ್ನ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. ಶಿಂಷಾದಿಂದ ಸಾತನೂರು ಹೋಬಳಿಗೆ ನೀರು ತರುತ್ತಿದ್ದು ಅರ್ಕಾವತಿಯಿಂದ ಕಸಬಾ ಹೋಬಳಿ ಕೆರೆಗಳನ್ನು ತುಂಬಿಲಾಗುತ್ತಿದೆ. ಹೊಸದುರ್ಗ ಭಾಗದ ಕೆರೆಗಳನ್ನು ಕಾವೇರಿ ನದಿ ನೀರಿನಿಂದ ತುಂಬಿಸಲಾಗುವುದು ಎಂದರು

ಈ ಅವಧಿಯಲ್ಲೇ ಮೆಡಿಕಲ್ ಕಾಲೇಜಿಗೆ ಮುಕ್ತಿ ನೀಡಲಾಗುವುದು ಕ್ಷೇತ್ರದಲ್ಲಿ ಎರಡು ಮೆಡಿಕಲ್ ಕಾಲೇಜು ಇರಲಿದೆ. ಕನಕಪುರದಲ್ಲಿ ಇನ್ಫೋಸಿಸ್ ಸಹಾಯದಲ್ಲಿ ತಾಯಿ-ಮಗು ಆಸ್ಪತ್ರೆ ತೆರೆಯಲಾಗಿದೆ. ಇಂತಹ ಸರ್ಕಾರಿ ಆಸ್ಪತ್ರೆ ಬೇರೆ ಎಲ್ಲಾದರೂ ಇದೆಯೇ? ನಾವು ಮಾಡುತ್ತಿರುವ ಕೆಲಸ ದೇಶಕ್ಕೆ ಮಾದರಿಯಾಗಿದೆ. ನಾವು ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪಾರ್ಕ್ ಮಾಡಿದೆವು. ನಂತರ ಈ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹಾಕಿಬಿಟ್ಟರು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ನೀವು ಯಾರೂ ಬೆಂಗಳೂರಿಗೆ ಹೋಗಬೇಕಿಲ್ಲ ಎಂದರು.

ಆನೆಗಳ ಹಾವಳಿ ತಡೆಯಲು 50 ಕಿ.ಮೀ.ಉದ್ದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮಿಕ್ಕ 50 ಕಿ.ಮೀ. ಶೀಘ್ರವೇ ಪೂರ್ಣಗೊಳಿಸಿ ರೈತರಿ ಅನುಕೂಲ ಮಾಡಿಕೊಡಲಾಗುವುದು. ಕ್ಷೇತ್ರದಲ್ಲಿ ಇಬ್ಬರು ರೈತರಿಗೆ ಒಂದರಂತೆ ಟ್ರಾನ್ಸ್‌ಫಾರ್ಮರ್‌ ನೀಡಿ ವಿದ್ಯುತ್ ಕ್ರಾಂತಿ ಮಾಡಿದ್ದೇವೆ. ಪಕ್ಕದ ಯಾವುದೇ ಕ್ಷೇತ್ರದಲ್ಲಿಯೂ ಈ ಸೌಲಭ್ಯವಿಲ್ಲ, ಹುಣಸನಹಳ್ಳಿ ಸೇರಿದಂತೆ ದೊಡ್ಡಾಲಹಳ್ಳಿಯಲ್ಲಿ ಸೋಲರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ, ಹಗಲಲ್ಲಿಯೇ ರೈತರಿಗೆ ವಿದ್ಯುತ್ ನೀಡಲಾಗುವುದು ಎಂದರು.

ತಮ್ಮನ ಸೋಲು ಮರೆಯದ ಡಿಕೆಶಿ:

ಸುರೇಶ್ ವಿರುದ್ಧ ದೇವೇಗೌಡರು ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ಆನಂತರ ಕುಮಾರಸ್ವಾಮಿ ಮಗನ ವಿರುದ್ಧ ಸುರೇಶ್ ಅವರನ್ನು ನಿಲ್ಲಿಸಬೇಕು ಎಂದು ಒತ್ತಡ ತರಲಾಯಿತು. ಆನಂತರದ ಬೆಳವಣಿಗೆಯಲ್ಲಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದರು. ಅವರು ಜನರ ಆಶೀರ್ವಾದಿಂದ 22 ಸಾವಿರ ಮತಗಳ ಅಂತರದಿಂದ ಗೆದ್ದು ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 4 ಜನ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಇರುವುದು ನಿಮ್ಮೆಲ್ಲರ ಆಶೀರ್ವಾದಿಂದಲೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ನಮ್ಮ ಗ್ರಾಮೀಣ ಜನ ಮೋಸ ಮಾಡಿಲ್ಲ. ನಮಗೆ ಬೆಂಗಳೂರಿನಲ್ಲಿ ಮೋಸ ಆಗಿದೆ. ಬೇರೆ ಕಡೆ ವಾಲಿರುವವರಿಗೆ ಬುದ್ಧಿ ಹೇಳಿ. ಚುನಾವಣೆ ಸಮಯದಲ್ಲಿ ಅನೇಕರು ಬಂದು ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ. ನೀವು ಯಾವುದಕ್ಕೂ ಮಣಿಯಬಾರದು ಎಂದು ಹೇಳಿದರು.

ನಮ್ಮ ಗುರುತು ಉಳಿಸಿಕೊಳ್ಳಲು ಜಿಲ್ಲೆಗೆ ಮರುನಾಮಕರಣ:

ನಾನು ನನ್ನ ಹುಟ್ಟಿದ ಊರು, ತಂದೆಯ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ? ಅದೇ ರೀತಿ ಕುಮಾರಸ್ವಾಮಿ ಅವರು ರಾಮನಗರ ಕುಮಾರಸ್ವಾಮಿ ಎಂದು ಬದಲಾವಣೆ ಮಾಡಿಕೊಳ್ಳಲು ಸಾಧ್ಯವೇ? ಕುಮಾರಸ್ವಾಮಿ ನಮ್ಮ ಹೆಸರು ಬದಲಾವಣೆ ಮಾಡಿದ್ದರು ನಾನು ಅದನ್ನು ಸರಿ ಮಾಡಿದ್ದೇನೆ. ಈ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೋದ ವೇಳೆ ಬಿಡುವುದಿಲ್ಲ ಎಂದರು, ಶಿವಕುಮಾರ ಸ್ವಾಮೀಜಿ ಅವರು, ಕೆಂಗಲ್ ಹನುಮಂತಯ್ಯ ಅವರು ಈ ನೆಲದವರಾಗಿದ್ದು ಅವರು ರಾಜಕಾರಣ ಮಾಡಲು ಅಲ್ಲಿಂದ ಇಲ್ಲಿಗೆ ಬಂದು ಮಾಡುತ್ತಿದ್ದಾರೆ. ರಾಮಕೃಷ್ಣ ಹೆಗಡೆಯವರು ಕನಕಪುರದಲ್ಲಿಯೇ ಚುನಾವಣೆಗೆ ನಿಂತು ಜಯಶಾಲಿಯಾಗಿದ್ದರು ಎಂಬುದನ್ನು ಇದೇ ವೇಳೆ ನೆನಪಿಸಿಕೊಂಡರು.

ನಮಗೆ ಪೆನ್ನು ಪೇಪರ್ ಸಿಕ್ಕ ಕಾರಣಕ್ಕೆ ಯಾವುದೇ ಕಾರಣಕ್ಕು ನಮ್ಮ ಮೂಲ ಹೆಸರನ್ನು ಬಿಡುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ್ದೇವೆ. ಮಾಡಲು ಬಿಡುವುದಿಲ್ಲ ಎಂದರು. ನಾನು ಮಾಡಿಯೇ ತೀರುತ್ತೇನೆ ಎಂದು ಮರುನಾಮಕರಣ ಮಾಡಿದ್ದೇನೆ. ನಾನು ನಿಮ್ಮ ಜೇಬಿಗೆ ಹಣ ಹಾಕಲು ಆಗದಿದ್ದರು ನಿಮ್ಮ ಆಸ್ತಿ ಮೌಲ್ಯ ಹೆಚ್ಚಿಸಿದ್ದೇವೆ, ನಾನು ಆರಂಭದಲ್ಲಿ ಇಲ್ಲಿನ ಶಾಸಕನಾದಾಗ ಒಮ್ಮೆ ಕಾರ್ಖಾನೆ ಸ್ಥಾಪನೆಗೆ ಒಬ್ಬರನ್ನು ಕರೆದುಕೊಂಡು ಬಂದೆ ಅವರು ಇಲ್ಲಿನ ರಸ್ತೆ ನೋಡಿ ಬರುವುದಿಲ್ಲ ಎಂದರು. ಅಂದೇ ತೀರ್ಮಾನ ಮಾಡಿ ರಸ್ತೆ ಅಗಲೀಕರಣ ಮಾಡಲಾಯಿತು. ಇದರಿಂದ ಆಸ್ತಿ ಮೌಲ್ಯ ಹೆಚ್ಚಾಗಿದೆ. ಕೋಡಿಹಳ್ಳಿ, ಸಾತನೂರು ಸೇರಿದಂತೆ ಅನೇಕ ಕಡೆ ರಸ್ತೆ ಅಗಲೀಕರಣ ಮಾಡಿದ್ದೇನೆ ಎಂದರು.

ನಿಮ್ಮ ಮನೆ ಮಗನಾಗಿ ಬಂದಿರುವೆ:

ನಾನು ಯಾವುದೇ ಅಧಿಕಾರ ಹೊತ್ತಕೊಂಡು ಇಲ್ಲಿಗೆ ಬಂದಿಲ್ಲ. ನಾನು ನಿಮ್ಮೆಲ್ಲರ ಮನೆಮಗನಾಗಿ ಇಲ್ಲಿಗೆ ಬಂದಿದ್ದೇನೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದ ಕಾರಣಕ್ಕೆ ಮುಂದಿನ ಮೂರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಿಮಗೆ ಮಾತುಕೊಟ್ಟ ಕಾರಣಕ್ಕೆ ನಿಮ್ಮ ಸಮಸ್ಯೆಗಳನ್ನು ಆಲಿಸಲು ಬಂದಿದ್ದು

ಇ-ಖಾತಾ ಮಾಡಿಸಲು ನಾವು ತೀರ್ಮಾನ ಮಾಡಿದ್ದು ನೀವು ಯಾರಿಗೂ ಲಂಚ ನೀಡದೇ ಖಾತಾ ಪಡೆಯಬೇಕು. ಅದಕ್ಕಾಗಿ ಇ-ಖಾತಾ ತಂದಿದ್ದೇವೆ. ಇದು ದೇಶಕ್ಕೆ ಮಾದರಿ ಕೆಲಸ. ಈಗಾಗಲೇ ಪೋಡಿ ಮುಕ್ತ ಗ್ರಾಮ ಮಾಡಲು ಮುಂದಾಗಿದ್ದೇವೆ, 175 ಉಪ ಗ್ರಾಮ ಮಾಡುತ್ತಿದ್ದೇವೆ. ಇಲ್ಲಿ ಸಾಕಷ್ಟು ಜನರಿಗೆ ಬಗರ್ ಹುಕುಂ ಜಮೀನು ನೀಡಲಾಗಿದೆ. ಇನ್ನಷ್ಟು ಜನರಿಗೆ ನೀಡಲು ಸುರೇಶ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಇಕ್ಬಾಲ್ ಹುಸೇನ್ ಶಾಸಕರಾದ ಬಳಿಕ ರಾಮನಗರದಲ್ಲಿ 1 ಸಾವಿರ ಕೋಟಿ ಅನುದಾನ ನೀಡಿ ರಾಮನಗರ ಪಟ್ಟಣ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ. ನಮ್ಮ ಯೋಜನೆಗಳನ್ನು ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಟೀಕೆ ಮಾಡುತ್ತಿರುವ ಬಿಜೆಪಿ ಹಾಗು ದಳದ ಮುಖಂಡರು ತಮ್ಮ ಮನೆಯವರಿಗೆ ಗ್ಯಾರಂಟಿ ಲಾಭ ಬಿಡಲು ಹೇಳಿ ಎಂದು ಸವಾಲು ಹಾಕಿದರು.

ಗ್ರೇಟರ್ ಬೆಂಗಳೂರು ಮಾಡಲಾಗುತ್ತಿದೆ, ಇಂತಹ ಬದಲಾವಣೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನೀವು ಶಕ್ತಿಕೊಟ್ಟ ಶಕ್ತಿಯಿಂದಾಗಿ ನಾವು ಜನರ ಜೀವನ ಬದಲಾವಣೆ ಮಾಡುತ್ತಿದ್ದೇವೆ. ತನ್ನ ಜೀವನದಲ್ಲಿ ಒಂದೇ ಒಂದು ರುಪಾಯಿ ಪಡೆಯದೇ ಕೆಲಸ ಮಾಡುವ ಅಧಿಕಾರಿಗಳನ್ನು ಇಲ್ಲಿಗೆ ಹಾಕಿದ್ದೇನೆ. ಮುಂದಿನ ದಿನಗಳಲ್ಲಿ ಜನಸಂಪರ್ಕ ಸಭೆಗಳನ್ನು ನಿರಂತರವಾಗಿ ಮಾಡಲಾಗುವುದು ಎಂದರು.

(ಮೇಲೆ ಪ್ಯಾನಲ್‌ನಲ್ಲಿ ಬಳಸಿ)

ಕೋಟ್‌...............

ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ನನ್ನ ಭೇಟಿ ಸಾಧ್ಯವಾಗದೆ ನನ್ನನ್ನು ಬೈದುಕೊಂಡು ವಾಪಸ್ ಬರುತ್ತಿರುವ ಕಾರಣಕ್ಕೆ ನಾನೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಬಂದಿದ್ದೇನೆ. ನಿಮ್ಮ ಹೆಣ, ಪಲ್ಲಕ್ಕಿ ಹೊರುವವನು ನಾನೇ, ನನ್ನ ಹೆಣ ಪಲ್ಲಕ್ಕಿ ಹೊರುವವರು ನೀವೇ.

-ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ