ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎರಡು ತಾಸು ವಿಚಾರಣೆ

KannadaprabhaNewsNetwork | Updated : Aug 23 2024, 05:35 AM IST

ಸಾರಾಂಶ

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವು ಸಿಬಿಐನಿಂದ ಲೋಕಾಯುಕ್ತ ಪೊಲೀಸರಿಗೆ ಹಸ್ತಾಂತರಗೊಂಡ ಬಳಿಕ ಇದೇ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಚಾರಣೆ ಎದುರಿಸಿದರು.

 ಬೆಂಗಳೂರು :  ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವು ಸಿಬಿಐನಿಂದ ಲೋಕಾಯುಕ್ತ ಪೊಲೀಸರಿಗೆ ಹಸ್ತಾಂತರಗೊಂಡ ಬಳಿಕ ಇದೇ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಚಾರಣೆ ಎದುರಿಸಿದರು. 2 ತಾಸು ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.

ಪ್ರಕರಣ ಸಂಬಂಧ ಪೊಲೀಸರು ಡಿಕೆಶಿಗೆ ಸಮನ್ಸ್‌ ಜಾರಿ ಮಾಡಿದ್ದರು. ಹೀಗಾಗಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಮುಗಿದ ಬಳಿಕ ನೇರವಾಗಿ ಲೋಕಾಯುಕ್ತ ಕಚೇರಿಗೆ ಆಗಮಿಸಿ ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಎಚ್.ಸತೀಶ್ ಮುಂದೆ ಹಾಜರಾದರು.

ಸುಮಾರು 74.93 ಕೋಟಿ ರು. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದನೆ ಮಾಡಿರುವ ಆರೋಪ ಸಂಬಂಧ ಡಿಕೆಶಿ ವಿರುದ್ಧದ ಸಿಬಿಐ ತನಿಖೆ ರದ್ದುಪಡಿಸಿದ್ದ ರಾಜ್ಯ ಸರ್ಕಾರ, ಬಳಿಕ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಪ್ರಕರಣವನ್ನು ವಹಿಸಿತ್ತು. ಅಕ್ರಮ ಆಸ್ತಿ ಗಳಿಕೆ ಸಂಬಂಧ ಈ ಹಿಂದೆ ಸಿಬಿಐ ತನಿಖಾಧಿಕಾರಿಗಳಿಗೆ ಒದಗಿಸಿದ ಮಾಹಿತಿ ಹಾಗೂ ದಾಖಲಾತಿಗಳನ್ನು ಪಡೆದಿದ್ದ ಲೋಕಾಯುಕ್ತ ಅಧಿಕಾರಿಗಳು, ಎಫ್ಐಆರ್ ದಾಖಲಿಸಿಕೊಂಡಿದ್ದರು. ಈ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿ ಕರೆಯಲಾಗಿತ್ತು.

ದಾಖಲೆ ನೀಡಲು ಸೂಚನೆ:

‘ಸತತ 2 ತಾಸುಗಳ ಕಾಲ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸುವಂತೆಯೂ ಸೂಚಿಸಿ ವಿಚಾರಣೆಯನ್ನು ಮುಕ್ತಾಯಗೊಳಿಸಲಾಯಿತು. ದಾಖಲೆಗಳನ್ನು ಒದಗಿಸಿದ ಬಳಿಕ ಮುಂದಿನ ವಿಚಾರಣೆಗೆ ಕರೆಯಲಾಗುವುದು’ ಎಂದು ಮೂಲಗಳು ಹೇಳಿವೆ.

ಗುಜರಾತ್‌ನಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಲ್ಲಿನ 42 ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ಉಳಿಯಲು ಡಿ.ಕೆ ಶಿವಕುಮಾರ್ ವ್ಯವಸ್ಥೆ ಮಾಡಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಡಿ.ಕೆ ಶಿವಕುಮಾರ ಮತ್ತವರ ಆಪ್ತರಿಗೆ ಸೇರಿದ 39 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಆಗ ದೆಹಲಿಯಲ್ಲಿ ಕೋಟ್ಯಂತರ ರು. ನಗದು ಪತ್ತೆಯಾಗಿತ್ತು. ನಂತರ ಪ್ರಕರಣದಲ್ಲಿ ಇ.ಡಿ. ಸಹ ಪ್ರವೇಶಿಸಿ ತನಿಖೆ ಕೈಗೊಂಡು ಬಂಧನ ಸಹ ಮಾಡಿತ್ತು. ನಂತರ ಜಾಮೀನಿನ ಮೇಲೆ ಹೊರ ಬಂದರು.

ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಿಬಿಐ ತನಿಖೆಗೆ ವಹಿಸಿರುವ ಆದೇಶವನ್ನು ವಾಪಸ್ ಪಡೆದುಕೊಂಡು ಲೋಕಾಯುಕ್ತಗೆ ತನಿಖೆ ನಡೆಸಲು ವಹಿಸಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

-------

ಲೋಕಾಯುಕ್ತಗಿಂತ ಸಿಬಿಐನೇ ಮೇಲು: ಡಿಕೆಶಿ!

ಬೆಂಗಳೂರಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಲೋಕಾಯುಕ್ತ ಪೊಲೀಸರಿಗಿಂತ ಸಿಬಿಐನವರೇ ಮೇಲು. ಇವರಷ್ಟು ಪ್ರಶ್ನೆಗಳನ್ನು ಸಿಬಿಐ ಕೂಡ ಕೇಳಿರಲಿಲ್ಲ’ ಎಂದು ಹೇಳಿದ್ದಾರೆ.

ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐನಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು. ಆದರೆ, ಸಿಬಿಐನವರು ತನಿಖೆಯನ್ನು ನಿಲ್ಲಿಸದೆ ಮುಂದುವರೆಸಿದ್ದಾರೆ. 100ಕ್ಕೂ ಹೆಚ್ಚು ನನ್ನ ಸ್ನೇಹಿತರು, ಕುಟುಂಬಸ್ಥರಿಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಇದೇ ಕೆಲಸವನ್ನು ಲೋಕಾಯುಕ್ತ ಕೂಡ ಮುಂದುವರೆಸಿದ್ದು, ಅವರಿಂದಲೂ ಕಿರುಕುಳ ಆಗುತ್ತಿದೆ’ ಎಂದು ತಿಳಿಸಿದರು.

‘ಲೋಕಾಯುಕ್ತ ಕಳೆದ ಆರು ತಿಂಗಳಿನಿಂದ ತನಿಖೆ ನಡೆಸುತ್ತಿದ್ದು, ಇವರಿಗಿಂತ ಸಿಬಿಐನವರೇ ಪರವಾಗಿಲ್ಲ. ಲೋಕಾಯುಕ್ತ ಪೊಲೀಸರು ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿಬಿಐನವರೇ ಇನ್ನು ನನಗೆ ಪ್ರಶ್ನೆಗಳನ್ನೇ ಕೇಳಿಲ್ಲ. ಒಂದು ದಿನವೂ ವಿಚಾರಣೆಗೆ ಕರೆಯಲಿಲ್ಲ. ಲೋಕಾಯುಕ್ತ ಪೊಲೀಸರ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದ್ದೇನೆ. ಅಲ್ಲದೇ, ಕೆಲವು ಪೂರಕವಾದ ದಾಖಲೆಗಳನ್ನು ಸಲ್ಲಿಸುತ್ತೇನೆ’ ಎಂದರು.

Share this article