ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕ್ರೈಸ್ತ ಸಮುದಾಯ ಬಾಂಧವರು ಸೋಮವಾರ ಕ್ರಿಸ್ಮಸ್ ಹಬ್ಬವನ್ನು ಮಹಾನಗರದಲ್ಲಿ ಸಡಗರ-ಸಂಭ್ರಮದಿಂದ ಆಚರಿಸಿದರು.ಕ್ರಿಸ್ಮಸ್ ಅಂಗವಾಗಿ ನಗರದ ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಿತು. ನಂತರ ಕ್ರಿಶ್ಚಿಯನ್ ಧರ್ಮಗುರುಗಳು ಕ್ರಿಸ್ಮಸ್ ಸಂದೇಶ ನೀಡಿದರು. ಕುಟುಂಬ ಸಮೇತರಾಗಿ ಆಗಮಿಸಿದ್ದ ಸಮಾಜದ ಬಾಂಧವರು ಧರ್ಮಗುರುಗಳ ಸಮ್ಮುಖದಲ್ಲಿ ಏಸುವಿಗೆ ಪ್ರಾರ್ಥನೆ ಸಲ್ಲಿಸಿದರು.
ಕೇಶ್ವಾಪುರದ ಸೇಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚ್, ಕಾರವಾರ ರಸ್ತೆಯ ಮೈಯರ್ ಮೆಮೋರಿಯಲ್ ಚರ್ಚ್‌ನಲ್ಲಿ (ಬಾಸೆಲ್ ಮಿಷನ್), ದೇಶಪಾಂಡೆ ನಗರದ ಸ್ವರ್ಗಾರೋಹಣ ದೇವಾಲಯ, ಉಣಕಲ್ ಗ್ರಾಮದ ಮೈಯರ್ ಮುಲ್ಲರ ಚರ್ಚ್ ಹಾಗೂ ಟೀಚರ್ಸ್ ಕಾಲನಿಯ ದಿ ಹೋಲಿ ನೆಮ್ ಕ್ಯಾಥಡ್ರಲ್ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ವಿವಿಧ ಸಾಂಸ್ಕೃತಿ ಸ್ಪರ್ಧೆಗಳು ಜರುಗಿದವು.ಚರ್ಚಗಳಲ್ಲಿ ತಯಾರಿಸಿದ್ದ ವಿಶೇಷ ಕೇಕ್ ಕತ್ತರಿಸುವ ಮೂಲಕ ಸಮಾಜದ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಹಂಚುವ ಮೂಲಕ ಕ್ರಿಸ್ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಸಾಂತಾಕ್ಲಾಸ್ ವೇಷಧಾರಿಗಳು ಚರ್ಚ್‌ಗೆ ಆಗಮಿಸಿದ ಮಕ್ಕಳಿಗೆ, ಯುವಕ-ಯುವತಿಯರಿಗೆ ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಹಬ್ಬದ ಅಂಗವಾಗಿ ಹೊಸ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು, ಚರ್ಚ್ ಆವರಣದಲ್ಲಿ ಸಂಭ್ರಮಿಸಿದರು. ಮತ್ತೆ ಕೆಲವರು ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಬೇಕರಿಯಲ್ಲಿ ತಯಾರಿಸಿದ ವಿವಿಧ ಬಗೆಯ ಕೇಕ್ ಹಾಗೂ ಉಡುಗೊರೆಗಳನ್ನು ನೀಡುವ ಮೂಲಕ ಶುಭಾಶಯ ಕೋರಿದರು. ಸಂಜೆ ಚರ್ಚ್ ಸಭಾಭವನ ಹಾಗೂ ಹೊರಾಂಗಣದಲ್ಲಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಡರಾತ್ರಿಯವರೆಗೂ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಎಲ್ಲ ಚರ್ಚಗಳಲ್ಲಿ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಅಂಗವಾಗಿ ಚರ್ಚಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಾತ್ರಿಯ ವೇಳೆ ಚರ್ಚ್ ಕಟ್ಟಡಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.