ಕನ್ನಡಪ್ರಭ ವಾರ್ತೆ ತಾಳಿಕೋಟೆ
ಜಾತ್ರೆ, ಉತ್ಸವಗಳು ಹಾಗೂ ಹಬ್ಬ ಹರಿದಿನಗಳನ್ನು ಸೌಹಾರ್ದತೆ ಭಾವನೆಯಿಂದ ಆಚರಣೆ ಮಾಡಬೇಕು ಎಂದು ಬ.ಬಾಗೇವಾಡಿಯ ಡಿ.ಎಸ್.ಪಿ.ಬಲ್ಲಪ್ಪ ನಂದಗಾವಿ ಹೇಳಿದರು.ಭಾನುವಾರ ಸ್ಥಳೀಯ ಶ್ರೀಖಾಸ್ಗತೇಶ್ವರ ಜಾತ್ರೋತ್ಸವ ಹಾಗೂ ಮೊಹರಂ ಹಬ್ಬ ಆಚರಣೆ ಕುರಿತು ಪೊಲೀಸ್ ಠಾಣೆಯಲ್ಲಿ ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಖಾಸ್ಗತೇಶ್ವರರ ಜಾತ್ರೆ ಜು.೧೧ ರಿಂದ ಪ್ರಾರಂಭಗೊಂಡು ೧೯ ರಂದು ರಥೋತ್ಸವದೊಂದಿಗೆ ಮಂಗಲಗೊಳ್ಳಲಿದೆ. ಆದರೆ ೧೭ ರಂದು ಭಜನೆಯ ಮುಕ್ತಾಯದಿನದಂದು ಅಂದೇ ಮೊಹರಂ ಹಬ್ಬದ ದೇವರುಗಳ ಧಪನದ ಕಾರ್ಯ ನಡೆಯುವುದರಿಂದ ಎರಡೂ ಉತ್ಸವಗಳು ಅಂದೇ ಆಗುತ್ತಿದ್ದ ಕಾರಣದಿಂದ ಮುಸ್ಲಿಂ ಬಾಂಧವರು ೧೭ರಂದು ರಾತ್ರಿ ೧೦ ಗಂಟೆಯ ಒಳಗೆ ದೇವರ ಧಪನ್ ಕಾರ್ಯಕ್ರಮ ಮುಗಿಸುವ ವ್ಯವಸ್ಥೆ ಮಾಡಬೇಕೆಂದರು.
ಅಲ್ಲದೇ ಈ ಎರಡೂ ಉತ್ಸವಗಳಲ್ಲಿ ಡಿಜೆ ಹಚ್ಚಿ ಕುಣಿದು ಕುಪ್ಪಳಿಸುವಂತಹ ವ್ಯವಸ್ಥೆ ಬೇಡ. ಈ ಎರಡೂ ಹಬ್ಬಗಳು ದೇವತಾ ಹಬ್ಬಗಳಾಗಿ ಪರಿಣಮಿಸಿದ್ದು, ಇವುಗಳಲ್ಲಿ ಭಕ್ತಿ ಎಂಬುವುದು ಎದ್ದು ಕಾಣಬೇಕೆಂದರು. ತಾಳಿಕೋಟೆ ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಜನತೆ ಸಹ ಬಾಳ್ವೆಯಿಂದ ಕೂಡಿ ಬಂದವರಾಗಿದ್ದು, ಇವರಲ್ಲಿ ನಾ ದೊಡ್ಡವ ನೀ ದೊಡ್ಡವ ಎಂಬ ಬೇಧ ಭಾವವಿಲ್ಲ. ಕಾರಣ ಸಹಕಾರದಿಂದ ಈ ಎರಡೂ ಉತ್ಸವಗಳನ್ನು ಶಾಂತತೆಯೊಂದಿಗೆ ಆಚರಿಸಬೇಕೆಂದರು.ನಮ್ಮ ಪೊಲೀಸ್ ಇಲಾಖೆಯಿಂದ ಮಾಡುವ ವ್ಯವಸ್ಥೆ ಎಂದಿನಂತೆ ಮಾಡೇ ಮಾಡುತ್ತೇವೆ. ಈ ಉತ್ಸವಗಳಲ್ಲಿ ಭಕ್ತಿ ಎಂಬುದು ಕಡಿಮೆಯಾಗಿ ವಿಜೃಂಬಣೆಯೇ ಹೆಚ್ಚಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಈ ಉತ್ಸವ ಸಂಬಂಧಿತ ಕಮಿಟಿಯವರದ್ದಾಗಿದೆ. ಬರು ಹೋಗುವ ಮೋಟರ್ ಬೈಕ್, ಇನ್ನಿತರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಜಾಗೆಯನ್ನು ಸಂಬಂಧಿತ ಉತ್ಸವದವರು ಸೂಚಿಸಬೇಕು ಸಂಬಂಧಿಸಿದ ಉತ್ಸವ ಕಮಿಟಿಯ ನೇತೃತ್ವದಾರಿಗಳಾದ ಅವರು ತಮ್ಮ ತಮ್ಮ ವಿವರಣೆ ನೀಡಬೇಕೆಂದರು.
ಇದೇ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿಗಳಾದ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ, ೧೧ ರಿಂದ ಶ್ರೀ ಖಾಸ್ಗತ ಮಠದಲ್ಲಿ ಜಾತ್ರೋತ್ಸವ ಕುರಿತು ಶಿವ ಭಜನೆ ಪ್ರಾರಂಭವಾಗಲಿದೆ. ೧೮ ರಂದು ಭಜನೆ ಮಂಗಲಗೊಳ್ಳಲಿದೆ. ೧೯ರಂದು ಬೆಳಿಗ್ಗೆ ೯ ಗಂಟೆಯಿಂದ ಆನೆ ಅಂಬಾರಿಯೊಂದಿಗೆ ಶ್ರೀ ಖಾಸ್ಗತರ ಶ್ರೀ ವಿರಕ್ತಶ್ರೀಗಳ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ಶ್ರೀಮಠದಿಂದ ಪ್ರಾರಂಭಗೊಂಡು ಶ್ರೀ ಬಾಲಾಜಿ ಮಂದಿರ ರಸ್ತೆ, ಮೂಲಕ ಕತ್ರಿ ಭಜಾರ ಮಾರ್ಗವಾಗಿ ಶ್ರೀಮಠ ತಲುಪಲಿದೆ. ಸಾಯಂಕಾಲ ೫ ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ವ್ಯವಸ್ಥೆ ಕುರಿತು ವಿವರಿಸಿದರು.ಮೋಹರಂ ಹಬ್ಬದ ಕುರಿತು ಕಾಳಿಫೀರಾ ಹಾಗೂ ಫಯಾಜ್ ಅವರು ಮೊಹರಂ ಹಬ್ಬದ ದೇವರು ಮಾಹಿತಿ ನೀಡಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.
ಇನ್ನೋರ್ವ ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿದರು.ಇನ್ನೋರ್ವ ಪಿಎಸ್‌ಐ ರಾಮನಗೌಡ ಸಂಕನಾಳ ಅವರು ಮಾತನಾಡಿ, ಹೋದವರ್ಷ ಜರುಗಿದ ಮೊಹರಂ ಹಾಗೂ ಶ್ರೀ ಖಾಸ್ಗತೇಶ್ವರ ಜಾತ್ರೆ ಈ ಎರಡೂ ಹಬ್ಬಗಳಲ್ಲಿಯೂ ನಾನು ಇದ್ದೆ. ಅವುಗಳನ್ನು ನೋಡಿದ್ದೇನೆ ದೇವರು ದೇವರುಗಳ ನಡುವೆ ಪೈಪೋಟಿ ನಡೆಯುವಂತಹ ವ್ಯವಸ್ಥೆ ಮೊಹರಂ ಹಬ್ಬದಲ್ಲಿ ಆಗಿತ್ತು. ಕಾರಣ ಅದಕ್ಕೆ ಸಂಬಂಧಿಸಿದವರು ಹಾಗಾಗದಂತೆ ನೋಡಿಕೊಳ್ಳಬೇಕೆಂದರು.
ಅಪರಾಧ ವಿಭಾಗದ ಪಿ.ಎಸ್.ಆಯ್.ಆರ್.ಎಸ್.ಭಂಗಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಅವರ ಸಲಹೆ ಸೂಚನೆಯಂತೆ ಉತ್ಸವಗಳ ಸಮಿತಿಯ ಸದಸ್ಯರು ಹಾಗೂ ನಾವು ಕೂಡಾ ನಡೆಯುತ್ತೇವೆಂದರು.ಸಂಗಮೇಶ ಚಲವಾದಿ ಸ್ವಾಗತಿಸಿ ವಂದಿಸಿದರು.