ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಿ: ಡಾ.ಸುಶೀಲಾ

KannadaprabhaNewsNetwork |  
Published : Mar 19, 2024, 12:46 AM IST
ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹೋಳಿ ಹಬ್ಬದ ಆಚರಣೆ ನಿಮಿತ್ತ ಅಧಿಕಾರಿಗಳು ಮತ್ತು ಶಾಂತಿ ಪಾಲನೆ ಸಮಿತಿ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಶಾಂತಿ ಸಭೆ ನಡೆಯಿತು. | Kannada Prabha

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹೋಳಿ ಹಬ್ಬದ ಆಚರಣೆ ನಿಮಿತ್ತ ಅಧಿಕಾರಿಗಳು ಮತ್ತು ಶಾಂತಿ ಪಾಲನೆ ಸಮಿತಿ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಶಾಂತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಹೋಳಿ ಆಚರಣೆ ಒಂದು ಐತಿಹಾಸಿಕ ಮತ್ತು ಸಾಂಪ್ರದಾಯಿಕ ಹಬ್ಬವಾಗಿದ್ದು, ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅವರು ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹೋಳಿ ಹಬ್ಬದ ಆಚರಣೆ ನಿಮಿತ್ತ ಅಧಿಕಾರಿಗಳು ಮತ್ತು ಶಾಂತಿ ಪಾಲನೆ ಸಮಿತಿ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಶಾಂತಿ ಸಭೆ ನಡೆಸಿ ಅವರು ಮಾತನಾಡಿದರು.

ಶಾಂತಿ ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸ್‌ ಇಲಾಖೆ ಕೆಲಸವಲ್ಲ, ಜತೆಗೆ ಸಾರ್ವಜನಿಕರು, ಇತರೆ ಇಲಾಖೆಗಳು ಕೈಜೋಡಿಸಬೇಕು. ಹೋಳಿ ಹಬ್ಬಕ್ಕೆ ಸಂಬಂಧಿಸಿದಂತೆ ಪರಿಸರ ಮತ್ತು ಆರೋಗ್ಯ ಇಲಾಖೆಗಳು ಸಹಕರಿಸಬೇಕು. ಅಪಾಯಕಾರಿ ರಾಸಾಯನಿಕ ಭರಿತ ಬಣ್ಣ ಬಳಸಬಾರದು, ರಸ್ತೆಯಲ್ಲಿ ಹೋಗುವವರಿಗೆ ಒತ್ತಾಯ ಪೂರ್ವಕ ಬಣ್ಣ ಹಚ್ಚಿ ತೊಂದರೆ ಕೊಡಬಾರದು ಎಂದರು.

ಹಲವು ಕಡೆಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದೊಡ್ಡ ಪ್ರಮಾಣದ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳ ಬಳಕೆಗೆ ಮುಂಚಿತವಾಗಿ ಪೊಲೀಸ್ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು ಹಾಗೂ ಯಾವುದೇ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಹೇಳಿದರು.

ಹೋಳಿ ಹಬ್ಬದ ಸಂದರ್ಭದಲ್ಲಿಯೇ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಇರುವುದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿ ತೊಂದರೆಯಾಗದಂತೆ ನೋಡಿಕೊಳ್ಳಲು ಸಹಕರಿಸುವಂತೆ ತಿಳಿಸಿದರು.

ಹೋಳಿ ಹಬ್ಬದ ದಿನದಂದು ಕಾಮದಹನ ಮಾಡುವ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಗ್ನಿ ಅನಾಹುತ ಆಗದಂತೆ ನೋಡಿಕೊಂಡು ಹೋಗಲು ಅಗ್ನಿಶಾಮಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಡಿವೈಎಸ್ಪಿ ಅರುಣಕುಮಾರ ಕೋಳೂರು, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಪೊಲೀಸ್ ಇನ್ಸ್ ಪೆಕ್ಟರ್ ದೇವಿಂದ್ರಪ್ಪ, ಸಂಜೀವಕುಮಾರ, ಪ್ರಕಾಶ ಯಾತನೂರ, ಸೈದಾಪೂರ ಪಿಎಸ್ಐ ಎಸ್.ಎಲ್. ಪಟೇಲ, ಟ್ರಾಫಿಕ್ ಪಿ.ಎಸ್.ಐ. ವಿಜಯಕುಮಾರ ನಾಯ್ಕ, ಶ್ರೀರಾಮ ಸೇನೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ವಿಜಯಕುಮಾರ ಪಾಟೀಲ್, ಸಾಮಾಜಿಕ ಕಾರ್ಯಕರ್ತ ಭೀಮು ಪೂಜಾರಿ, ಶೇಖ್ ಇಮ್ರಾನ್, ಉಮೇಶ ಗುಳಗಿ, ಮುತ್ತು ಪಾಟೀಲ್ ಸೇರಿದಂತೆ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ