ಪರಿಸರ ಕಾರ್ಯದ ಮೂಲಕ ಗಣರಾಜ್ಯೋತ್ಸವ ಆಚರಣೆ

KannadaprabhaNewsNetwork | Published : Jan 27, 2024 1:20 AM

ಸಾರಾಂಶ

ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೆ ‘ಸಹಾಯ’ ಎಂಬ ಯೋಜನೆಯನ್ನು ರೂಪಿಸಿ ಪ್ರತಿ ಸೆಮಿಸ್ಟರ್‌ನಲ್ಲಿ 20 ಗಂಟೆಗಳ ಸಮಯವನ್ನು ಪರಿಸರ ಕಾಳಜಿ, ಆರೋಗ್ಯ ಅರಿವು, ರೋಗ ರುಜಿನಗಳ ಅರಿವು, ವೃದ್ಧಾಶ್ರಮ ಮಾಹಿತಿ ಕಾರ್ಯಗಳು, ಪರಿಸರ ಸ್ವಚ್ಛತೆಗಾಗಿ ಮೀಸಲಿಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ತಾಲೂಕಿನ ಮಾಳ ಪೇರಡ್ಕದ ಪರಿಸರ ಹೋರಾಟಗಾರ್ತಿ ಆರತಿ ಅಶೋಕ್ ಅವರ ತೋಟದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಡುತೋಪುಗಳಲ್ಲಿ ಗೋಳಿಮರದ ಗಿಡಗಳನ್ನು ನೆಟ್ಟು ವಿಶೇಷವಾಗಿ ಗಣರಾಜ್ಯೋತ್ಸವ ಆಚರಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸೊಸೈಟಿ ಫಾರ್ ಫಾರೆಸ್ಟ್ ಆ್ಯಂಡ್ ಎನ್ವಿರಾನ್ಮೆಂಟ್ ಕ್ಲೈಮೇಟ್‌ ಚೇಂಜ್‌, ವನ‌ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಅಲೋಶಿಯಸ್ ಕಾಲೇಜಿನ ಸಹಾಯ ತಂಡದ ವಿದ್ಯಾರ್ಥಿಗಳು ಶ್ರಮಿಸುತಿದ್ದಾರೆ. ಅದರಲ್ಲೂ ಪರಿಸರ ಹೋರಾಟಗಾರರಾದ ಹರಿಣಿ ಶೆಟ್ಟಿ ಮಂಗಳೂರು, ಪ್ರಸಾದ್ ಬೈಂದೂರು, ಜೀತ್ ಮಿಲನ್ ರೋಶ್, ಅಶೋಕ್ ನಾಯರ್, ಆರ್ಯ ಅಶೋಕ್, ಆರತಿ‌ ಅಶೋಕ್, ಅನಿಲ್ ಪೂಜಾರಿ, ನೋಯಲ್ ಡಿಸೋಜ, ಉಪನ್ಯಾಸಕರಾದ ವಿದ್ಯಾರಾಣಿ, ಗೋಪಿಕಾ, ಅಲ್ಬಿ ಥೋಮಸ್, ಶೈಲೇಶ್ ಜೈನ್ ಪುಚ್ಚೆಬೆಟ್ಟು ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಸಾಥ್ ನೀಡುತ್ತಿದ್ದಾರೆ.ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೆ ‘ಸಹಾಯ’ ಎಂಬ ಯೋಜನೆಯನ್ನು ರೂಪಿಸಿ ಪ್ರತಿ ಸೆಮಿಸ್ಟರ್‌ನಲ್ಲಿ 20 ಗಂಟೆಗಳ ಸಮಯವನ್ನು ಪರಿಸರ ಕಾಳಜಿ, ಆರೋಗ್ಯ ಅರಿವು, ರೋಗ ರುಜಿನಗಳ ಅರಿವು, ವೃದ್ಧಾಶ್ರಮ ಮಾಹಿತಿ ಕಾರ್ಯಗಳು, ಪರಿಸರ ಸ್ವಚ್ಛತೆಗಾಗಿ ಮೀಸಲಿಡುತ್ತಿದ್ದಾರೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವ ಕಾರಣ ಅಂಕಗಳನ್ನು ನಿಗದಿಪಡಿಸಲಾಗಿದೆ.* ಹತ್ತು ಸಾವಿರ ಗಿಡ ನೆಡುವ ಗುರಿ

ವಿದ್ಯಾರ್ಥಿಗಳು, ಗೋಳಿಮರ, ಪೈಕಾಸ್ ಜಾತಿಯ ಗಿಡಗಳು ಹಾಗೂ ವಿವಿಧ ಹಣ್ಣಿನ ಗಿಡಗಳನ್ನು ನೆಡುತೋಪುಗಳನ್ನು ನಿರ್ಮಿಸಿ ಹತ್ತು ಸಾವಿರ ಗಿಡಗಳನ್ನು ನೆಡುವ ಗುರಿ ಹಾಕಲಾಗಿದೆ. ಈಗಾಗಲೇ ಮಾಳ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದ ಸಂದರ್ಭ ಕಾಮಗಾರಿ ಮುಗಿಸಿದ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಕಾರ್ಯ ಹಾಕಿಕೊಳ್ಳಲಾಗಿದೆ.ಮಾಳ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ 1634 ಮರಗಳು ಬಲಿಯಾಗಲಿದ್ದು, ಅದರಲ್ಲಿ1051 ಮರಗಳನ್ನು ಕಡಿಯಲಾಗಿದೆ. ಉಳಿದ 508 ಮರಗಳ ಸ್ಥಳಾಂತರಕ್ಕೆ ಮಂಗಳೂರಿನ ಜೀತ್‌ ಮಿಲನ್ ರೋಶ್ ಹಾಗೂ ಆರತಿ ಅಶೋಕ್ ಅವರ ತಂಡ ಹಗಲಿರುಳು ಶ್ರಮಿಸುತ್ತಿದೆ.

ವಿದ್ಯಾರ್ಥಿಗಳ ವ್ಯಕ್ತಿ ತ್ವ ವಿಕಸನ ಹಾಗೂ ಪರಿಸರ ಕಾಳಜಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಕಾಲೇಜು ವಿದ್ಯಾರ್ಥಿಗಳು ಪಿಲಿಕುಳ ಸ್ವಚ್ಛತೆ ಸೇರಿದಂತೆ ಅನೇಕ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿದ್ದಾರೆ.

। ವಿದ್ಯಾರಾಣಿ, ಶಿಕ್ಷಕರು ಸೈಂಟ್ ಅಲೋಶಿಯಸ್ ಕಾಲೇಜು -----------

ಪರಿಸರ ಉಳಿಸುವಲ್ಲಿ ಯುವ ಜನತೆ ಪಾತ್ರ ಪ್ರಮುಖವಾಗಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವಲ್ಲಿ ನಮ್ಮ ಪ್ರಯತ್ನ ಮುಖ್ಯವಾಗಿದೆ. ಸಹಬಾಳ್ವೆಯಿಂದ ಒಗ್ಗಟ್ಟಾಗಿ ಪರಿಸರ ಉಳಿಸಲು ಪ್ರಯತ್ನಿಸೋಣ.। ಸುಮಿತ್ ನಾಯಕ್, ಕಾಲೇಜು ವಿದ್ಯಾರ್ಥಿ----------------

ಪರಿಸರ ನಾಶವೇ ತಾಪಮಾನ ಏರಿಕೆಗೆ ಮುಖ್ಯ ಕಾರಣ. ಕಳೆದ ಬಾರಿ ಮಳೆಯೇ ಕುಂಠಿತಗೊಂಡಿರುವುದು ಬರಗಾಲಕ್ಕೆ ಮುಖ್ಯ ಕಾರಣವಾಗಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.। ಆರತಿ ಅಶೋಕ್, ಪರಿಸರ ಹೋರಾಟ ಗಾರ್ತಿ.

Share this article