ಕೊಪ್ಪಳ: ಕಬಡ್ಡಿ ಪಂದ್ಯಗಳೆಂದರೆ ಅಪ್ಪಟ ಗ್ರಾಮೀಣ ಸೊಗಡಿನ ಆಟ. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳ ಮೆರಗು ಜೋರಾಗಿತ್ತು. ಮಹಿಳಾ ಹಾಗೂ ಪುರುಷ ತಂಡಗಳಿಂದ ರೋಚಕ ಕಬಡ್ಡಿ ಪಂದ್ಯಗಳು ನಡೆದವು.ಜಾತ್ರೆ ಕೇವಲ ಜಾತ್ರೆಗೆ ಸೀಮಿತವಾಗಿರದೇ ಸಂಪೂರ್ಣವಾಗಿ ವೈವಿಧ್ಯಮಯವಾಗಿರಬೇಕು ಎನ್ನುವುದಕ್ಕೆ ಕೊಪ್ಪಳ ಜಾತ್ರೆ ಮಾದರಿಯಾಗಿದೆ. ಒಂದೆಡೆ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಮಠದ ಆವರಣದಲ್ಲಿ ಗ್ರಾಮೀಣ ಕ್ರೀಡೆಗಳು ನಡೆಯುತ್ತವೆ. ಮಠದ ಆವರಣದಲ್ಲಿ ಆಹ್ವಾನಿತ ಕಬಡ್ಡಿ ತಂಡಗಳಿಂದ ಪಂದ್ಯಗಳು ನಡೆದವು.ಪಂದ್ಯಾವಳಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಕೆ.ವಿ. ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಯುವಕರಲ್ಲಿ ಕ್ರೀಡಾಭಿಮಾನದ ಕೊರತೆ ಕಾಡುತ್ತಿದೆ. ಕ್ರೀಡೆಗಳ ಬಗ್ಗೆ ಗಮನ ಕೊಟ್ಟು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದಾಗಿ ದೈಹಿಕ ಹಾಗೂ ಮಾನಸಿಕ ಸದೃಢವಾಗಿರಲು ಸಾಧ್ಯ. ಪಂದ್ಯಾವಳಿಯಲ್ಲಿ ಪುರುಷರಂತೆ ಮಹಿಳೆಯರು ಕೂಡ ಕಬಡ್ಡಿ ಆಟದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಶರಣಬಸಪ್ಪ ಸುಭೇದಾರ, ಸಿದ್ದಲಿಂಗನಗೌಡ, ಡಿಎಸ್ಪಿ ಗೋಪಿ, ನಗರಸಭೆ ಪೌರಾಯುಕ್ತ ಗಣೇಶ ಸಿಪಿಐ ಮಹಾಂತೇಶ ಸಜ್ಜನ್ , ಪಿಎಸ್ಐ ಸುನೀಲ್ ಸೇರಿ ಇದ್ದರು.ತಂಡಗಳ ಮಾಹಿತಿ:24 ಪುರುಷರು, 8 ಮಹಿಳೆಯರ ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಜೈಭೀಮ್-ಜೈಬಸವ ತಂಡ ಪ್ರಥಮ ಸ್ಥಾನ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ತಂಡ ದ್ವಿತೀಯ ಸ್ಥಾನ, ಎರಡೋಣಿ ಮತ್ತು ಉಡುಮಕಲ್ ತಂಡ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಎ ತಂಡ ಪ್ರಥಮ ಸ್ಥಾನ, ಕರ್ನಾಟಕ ಬಿ ತಂಡ ದ್ವಿತೀಯ ಸ್ಥಾನ, ಕರ್ನಾಟಕ ಸಿ ತಂಡ ತೃತೀಯ ಸ್ಥಾನ ಪಡೆದವು.ನಿರ್ಣಾಯಕರಾಗಿ ಗವಿಸಿದ್ದಪ್ಪ ಆನೆಗುಂದಿ, ಮಂಜುನಾಥ ಅರೆಂಟನೂರ, ಆನಂದ ಕಟ್ಟಿಮನಿ, ಮುತ್ತು ಹೂಗಾರ, ಗದ್ದಿಗೆಪ್ಪ, ನಿರ್ಣಾಯಕರಾಗಿ ಆಗಮಿಸಿದ್ದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ದೈಹಿಕ ನಿರ್ದೇಶಕ ಡಾ.ಶಶಿಧರ್ ಕೆಲ್ಲುರ ವಿಜೇತ ತಂಡಗಳಿಗೆ ಬಹುಮಾನ ಮತ್ತು ಪಾರಿತೋಷಕಗಳನ್ನು ವಿತರಿಸಿದರು.ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಡಾ.ಚನ್ನಬಸವ, ದೈಹಿಕ ನಿರ್ದೇಶಕ ಈಶಪ್ಪ ದೊಡ್ಡಮನಿ, ವಿನೋದ ಮುದಿಬಸನಗೌಡರ್, ಜಯರಾಮ್ ಮರಡಿತೋಟ ಹಾಗೂ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀ ಗವಿಸಿದ್ಧೇಶ್ವರ ಶಾಲಾ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು.