ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಸಮೀಪದ ಸುಮಾರು 150 ವರ್ಷದ ಇತಿಹಾಸವಿರುವ ಕೊಡೆತ್ತೂರು ಗುತ್ತಿನಲ್ಲಿ ಪೇಟೆಯ ಶಾಲೆಯ ವಿದ್ಯಾರ್ಥಿಗಳು ಹಳ್ಳಿಯ ಸೊಗಡನ್ನು ಸಂಭ್ರಮಿಸಿದರು.ಗದ್ದೆಯ ಹುಣಿಗಳಲ್ಲಿ ಕೆಸರಿನಲ್ಲಿ ನಡೆಯುತ್ತ, ಮಳೆಗೆ ತುಂಬಿ ಹರಿಯುತ್ತಿದ್ದ ತೋಡು, ತೋಟಗಳಲ್ಲಿ ಸಾಗಿ ಸಂಭ್ರಮಿಸಿದರು. ಸುಮಾರು 150 ವರ್ಷಗಳ ಹಳೆಯದಾದ ಕೊಡೆತ್ತೂರು ಗುತ್ತು ಮನೆಯನ್ನು ವೀಕ್ಷಿಸಿದರು. ಗುತ್ತಿನ ದೈವಾರಾಧನೆ, ಕೊಠಡಿಗಳ ವೈಶಿಷ್ಟ್ಯ, ಕೃಷಿ ಭೂಮಿ ಇತ್ಯಾದಿ ಮಾಹಿತಿಗಳನ್ನು ಗುತ್ತಿನಾರ್ ನಿತಿನ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ ನೀಡಿದರು.ಅಲ್ಲಿಂದ ಹಸುರು ತುಂಬಿದ ಗದ್ದೆಗಳಲ್ಲಿ, ಕೆಸರುಮಯವಾಗ ಹುಣಿಗಳಲ್ಲಿ, ಮಳೆಯಿಂದ ತುಂಬಿ ಹರಿಯುವ ತೋಡುಗಳಲ್ಲಿ ನಡೆಯುತ್ತ ಸಾಗಿದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಇತರ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರಾಸಕ್ತರು ಹೀಗೆ 120ಕ್ಕೂ ಹೆಚ್ಚು ಮಂದಿ ಕೊಡೆತ್ತೂರು ದೇವಸ್ಯ ಮಠವನ್ನು ಸಂದರ್ಶಿಸಿದರು. ಇಲ್ಲಿನ ಮಹತ್ವದ ಬಗ್ಗೆ ವೇದವ್ಯಾಸ ಉಡುಪ, ಸುಧಾ ಉಡುಪ ಮಾಹಿತಿ ನೀಡಿದರು. ಇಲ್ಲಿಂದ ಸಾಗುತ್ತ ಕಂಬಳದ ಕೋಣಗಳು, ಕಾಂತಾವರ ದೇಗುಲಕ್ಕೆ ಸಂಬಂಧಿಸಿ ಕೊಡೆತ್ತೂರಿನಲ್ಲಿರುವ ಶಿಲಾಶಾಸನ, ಕುಂಜರಾಯ ದೈವಸ್ಥಾನ ಹೀಗೆ ನೋಡುತ್ತ, ಕೊಡೆತ್ತೂರು ಎಂಬ ಪುಟ್ಟ ಹಳ್ಳಿ ಡಾ. ನರಸಿಂಹ ಉಡುಪ ಹಾಗೂ ಹೃದಯತಜ್ಞ ಡಾ. ದೇವೀಪ್ರಸಾದ ಶೆಟ್ಟಿಯಂತಹ ಇಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಪಡೆದಿದೆ ಎಂಬಂತಹ ಮಾಹಿತಿಗಳನ್ನು ತಿಳಿದುಕೊಂಡರು.ಮಾಂಜದಲ್ಲಿರುವ ಕಟೀಲು ದೇವಳದ ಗೋಶಾಲೆ ವೀಕ್ಷಿಸಿದರು. ಅಲ್ಲಿರುವ ನೂರೈವತ್ತಕ್ಕೂ ಹೆಚ್ಚು ದೇಸೀ ತಳಿಯ ದನಗಳ ಬಗ್ಗೆ ಮಾಹಿತಿ ಪಡೆದು ಅಲ್ಲಿಂದ ಕಟೀಲು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲಿ ನಂದಿನೀ ನದಿ ಮಧ್ಯದ ಮೂಲ ಕುದ್ರುವನ್ನು ಅಲ್ಲಿರುವ ಸಸ್ಯ ವೈವಿಧ್ಯವನ್ನು ಗಮನಿಸಿದರು. ಹಾದಿಯುದ್ದಕ್ಕೂ ಕಾಣ ಸಿಗುವ ಅನೇಕ ಸಸ್ಯ ವೈವಿಧ್ಯಗಳ ಬಗ್ಗೆ ಪಿಲಿಕುಳದ ಸಸ್ಯಗಳ ಜ್ಞಾನಿ ಉದಯಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಹಳ್ಳಿ ಹಾಗೂ ಕೃಷಿಯ ಕುರಿತು ಕಿಶೋರ್ ಶೆಟ್ಟಿ ವಿವರ ನೀಡಿದರು. ಮಂಗಳೂರು ಸಾವಯವ ಕೃಷಿಕ ಬಳಗದ ರತ್ನಾಕರ ಕುಳಾಯಿ ವಿದ್ಯಾರ್ಥಿಗಳಿಗೆ ಹಳ್ಳಿ ನಡಿಗೆ ಸಂಘಟಿಸಿದ್ದು. ಹಳ್ಳಿಯ ಜನಜೀವನ, ಅಲ್ಲಿನ ಕೃಷಿ ಬದುಕು ಪೇಟೆಯ ಮಂದಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಅನುಭವ ಆಗಬೇಕೆಂಬ ಪರಿಕಲ್ಪನೆಯಲ್ಲಿ ಈ ಕಾರ‍್ಯಕ್ರಮ ನಡೆಸಿದರು.