ಕನಕಗಿರಿಯಲ್ಲಿ ಸಂಭ್ರಮದ ಹಾಲುಗಂಬ ಉತ್ಸವ

KannadaprabhaNewsNetwork |  
Published : Sep 17, 2025, 01:07 AM IST
ಪೋಟೋಕನಕಗಿರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಾಲುಗಂಬ ಉತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.  | Kannada Prabha

ಸಾರಾಂಶ

ಮುಜರಾಯಿ ಇಲಾಖೆಯ ಕನಕಾಚಲಪತಿ ದೇವಸ್ಥಾನ ಸಮಿತಿ ವತಿಯಿಂದ ಪ್ರತಿ ವರ್ಷ ಮೂಲಾ ನಕ್ಷತ್ರ ದಿನದಂದು ನಡೆಯುವ ಹಾಲುಗಂಬ ಉತ್ಸವವು ನೂರಾರು ವರ್ಷಗಳಿಂದ ಯಾದವರ(ಗೊಲ್ಲ) ಸಮ್ಮುಖದಲ್ಲಿ ನಡೆದುಕೊಂಡು ಬಂದಿದ್ದು, ಸಂಪ್ರದಾಯದಂತೆ ಗೊಲ್ಲರು ತಮ್ಮ ಹಟ್ಟಿಗಳಲ್ಲಿ ಮೀಸಲಿಟ್ಟಿದ್ದ ಹಾಲು, ಮೊಸರು, ತುಪ್ಪವನ್ನು ಉತ್ಸವ ಆಚರಣೆಗೆ ನೀಡುತ್ತಾರೆ.

ಕನಕಗಿರಿ:

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದ ಶ್ರೀಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ಹಾಲುಗಂಬ ಉತ್ಸವವು ಸಾವಿರಾರು ಜನರ ಸಮ್ಮುಖದಲ್ಲಿ ಮಂಗಳವಾರ ಸಂಭ್ರಮದಿಂದ ನಡೆಯಿತು.

ಮುಜರಾಯಿ ಇಲಾಖೆಯ ಕನಕಾಚಲಪತಿ ದೇವಸ್ಥಾನ ಸಮಿತಿ ವತಿಯಿಂದ ಪ್ರತಿ ವರ್ಷ ಮೂಲಾ ನಕ್ಷತ್ರ ದಿನದಂದು ನಡೆಯುವ ಹಾಲುಗಂಬ ಉತ್ಸವವು ನೂರಾರು ವರ್ಷಗಳಿಂದ ಯಾದವರ(ಗೊಲ್ಲ) ಸಮ್ಮುಖದಲ್ಲಿ ನಡೆದುಕೊಂಡು ಬಂದಿದ್ದು, ಸಂಪ್ರದಾಯದಂತೆ ಗೊಲ್ಲರು ತಮ್ಮ ಹಟ್ಟಿಗಳಲ್ಲಿ ಮೀಸಲಿಟ್ಟಿದ್ದ ಹಾಲು, ಮೊಸರು, ತುಪ್ಪವನ್ನು ಉತ್ಸವ ಆಚರಣೆಗೆ ನೀಡುತ್ತಾರೆ. ಸಂಜೆ ಅಶ್ವಾರೋಹಣ ಉತ್ಸವ ಮೆರವಣಿಗೆ ನಂತರ ದೇಗುಲದ ಮುಂಭಾಗದಲ್ಲಿ ಸಾವಿರಾರು ಜನರು ಜಮಾವಣೆಯಾಗುತ್ತಿದ್ದಂತೆ ಯಾದವ ಸಮಾಜದ ಯುವಕರು ಕೇಕೆ, ಶಿಳ್ಳೆ ಹಾಕುತ್ತಾ ಹಾಲುಗಂಬ ಏರಲು ಆರಂಭಿಸುತ್ತಾರೆ. ಹೀಗೆ ಒಬ್ಬರ ಮೇಲೊಬ್ಬರು ೮೦ ಅಡಿ ಎತ್ತರದ ಕಂಬ ಏರಲು ಮುಂದಾದಾಗ ಜಾರಿ ಕೆಳಕ್ಕೆ ಬೀಳುವುದನ್ನು ನೆರದಿದ್ದವರು ವೀಕ್ಷಿಸಿ ಖುಷಿಪಟ್ಟರು.

ಇನ್ನೂ ಕಂಬ ಏರುವುದಕ್ಕಾಗಿ ಇದ್ದ ಮೂರು ಅವಕಾಶಗಳನ್ನು ಕಳೆದುಕೊಂಡ ಯುವಕರು ಕೊನೆಗೂ ಹಗ್ಗದ ಸಹಾಯದಿಂದ ಕಂಬದ ತುದಿಯಲ್ಲಿ ಕಟ್ಟಲಾಗಿದ್ದ ಖರ್ಚಿಕಾಯಿ, ಚಕ್ಕಲಿ, ಉತ್ತತ್ತಿ ತಿಂದು ಉತ್ಸವಕ್ಕೆ ತೆರೆ ಎಳೆಯಲಾಯಿತು. ಇದಕ್ಕೂ ಮೊದಲು ಕನಕಾಚಲಪತಿ ದೇಗುಲದಿಂದ ರಾಜಬೀದಿಯ ಮೂಲಕ ತೇರಿನ ಹನುಮಪ್ಪ ದೇಗುಲದ ವರೆಗೆ ಸಾಗಿದ ಅಶ್ವಾರೋಹಣ ಉತ್ಸವವು ಕನಕಾಚಲಪತಿ ದೇವಸ್ಥಾನಕ್ಕೆ ಮರಳಿತು. ಕನಕಾಚಲಪತಿ, ಲಕ್ಷ್ಮೀದೇವಿಗೆ ವಿಶಿಷ್ಠ ಪೂಜೆ ಸಲ್ಲಿಸಿದ ಯಾದವರು ಪೂರ್ವಜರ ಸಂಪ್ರದಾಯವನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ಈ ವೇಳೆ ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ಡಮ್ಮಣ್ಣ ಗುರುವಿನ್, ಹಿರೇ ದುರುಗಪ್ಪ ಗುರುವಿನ್, ದುರ್ಗಾದಾಸ ಯಾದವ, ವೆಂಕಟೇಶ ಬಂಡ್ಲಿ, ನಿರುಪಾದಿ ದಾಸರ, ಪಾಮಣ್ಣ ಬಿಲಕಂಠಿ, ಮೂರ್ತೆಪ್ಪ ದಾಸರ, ಮರಿಸ್ವಾಮಿ ಯಾದವ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮಗಳ ಯಾದವರು, ಮಹಿಳೆಯರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ