ಕನ್ನಡಪ್ರಭ ವಾರ್ತೆ ರಾಯಚೂರು
ಇದೇ ರಾಜ್ಯ ಬಜೆಟ್‌ನಲ್ಲಿ ಸ್ಮಶಾನ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಜಿಲ್ಲಾ ಘಟಕದಿಂದ ಸ್ಮಶಾನ ಭೂಮಿಯಲ್ಲಿ ಕುಣಿ (ಗುಂಡಿ) ತೋಡಿ, ಕುತ್ತಿಗೆಮಟ ಹೂತುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.
ಸ್ಥಳೀಯ ಜಲಾಲ್ ನಗರದಲ್ಲಿರುವ ಸ್ಮಶಾನದಲ್ಲಿ ಸೇರಿದ ಸಂಘದ ಪದಾಧಿಕಾರಿಗಳು, ಸದಸ್ಯರು ಬೇಡಿಕೆ ಈಡೇರಿಸಲು ಆಗ್ರಹಿಸಿ ಘೋಷಣೆ ಕೂಗಿದರು. ಹೋರಾಟದಲ್ಲಿ ಒಬ್ಬ ಮಸಣ ಕಾರ್ಮಿಕ ಗುಂಡಿಯಲ್ಲಿ ಕುತ್ತಿಗೆಮಟ ಹೂತುಕೊಂಡು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಮಸಣಕಾರ್ಮಿಕರ ಸಂಘದ ವತಿಯಿಂದ ಕಳೆದ 4 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಲಾಗಿದೆ. ಪ್ರತಿ ಸ್ಮಶಾನದಲ್ಲಿ ಒಬ್ಬರಂತೆ ಕಾರ್ಮಿಕರನ್ನು ನೌಕರರೆಂದು ನೇಮಕ ಮಾಡಿಕೊಳ್ಳಬೇಕು.
ಕುಣಿ ಅಗೆಯಲು ಪರಿಕರಗಳನ್ನು ನೀಡಬೇಕು ಹಾಗೂ ನರೇಗಾ ಯೋಜನೆಯಡಿ ಪರಿಗಣಿಸಿ ಕೂಲಿ ನಿಗದಿ ಮಾಡಬೇಕು ಎಂದು ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದು ಹೇಳಿದರು.
ಕಳೆದ ಡಿ.21 ರಿಂದ 23ರ ವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಸಮಾಜ ಕಲ್ಯಾಣ ಆಯುಕ್ತರು ಫೆ.2 ರಂದು ನಗರಾಭಿವೃದ್ಧಿ ಇಲಾಖೆಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಹೆಣ್ಣು ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ, ಪಿಂಚಣಿ, ನಿವೇಶನ, ಮನೆ ನಿರ್ಮಾಣದ ಭರವಸೆ ನೀಡಿದ್ದರು.
ಅದರಂತೆ ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಬೇಡಿಕೆಗಳ ಈಡೇರಿಕಗೆ ಖಾತ್ರಿ ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಜಿ ವೀರೇಶ, ನರಸಿಂಹಲು ಶಾಖವಾದಿ, ಜಂಬಯ್ಯ ಪಲ್ಕಂದೊಡ್ಡಿ, ಹನುಮಂತು ಮಟಮಾರಿ, ಚಂದ್ರಯ್ಯ, ಕರಿಯಪ್ಪ ಬೂರ್ದಿಪಾಡ, ರಾಮಣ್ಣ ಸುಲ್ತಾನಪೂರು, ಲಕ್ಷ್ಮಣ ಆತ್ಕೂರು, ರಾಮಪ್ಪ ಹೆಗ್ಗಸನಹಳ್ಳಿ, ಅಂಜಿನಯ್ಯ ಶಾಖವಾದಿ, ನಾಗಪ್ಪ ಮಾಮಡದೊಡ್ಡಿ, ಡಿ.ಎಸ್ ಶರಣಬಸವ ಇದ್ದರು.