ಮರಗಣತಿ ಆರಂಭ, 6 ತಿಂಗಳಲ್ಲಿ ಪೂರ್ಣ; 8 ವಲಯದಲ್ಲಿ ಇಬ್ಬರಿಗೆ ಗುತ್ತಿಗೆ ನೀಡಿದ ಬಿಬಿಎಂಪಿ

KannadaprabhaNewsNetwork | Published : Jan 29, 2024 1:33 AM

ಸಾರಾಂಶ

ಮರಗಣತಿ ಆರಂಭ, 6 ತಿಂಗಳಲ್ಲಿ ಪೂರ್ಣ; 8 ವಲಯದಲ್ಲಿ ಇಬ್ಬರಿಗೆ ಗುತ್ತಿಗೆ ನೀಡಿದ ಬಿಬಿಎಂಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊನೆಗೂ ರಾಜಧಾನಿ ಬೆಂಗಳೂರಿನಲ್ಲಿ ಮರ ಗಣತಿ ಆರಂಭಗೊಂಡಿದ್ದು, ಆರು ತಿಂಗಳಿನಲ್ಲಿ ನಗರದ ಮರಗಳ ಗಣತಿ ಪೂರ್ಣಗೊಳ್ಳಲಿದೆ.

ಕಳೆದೊಂದು ವರ್ಷದ ಹಿಂದೆ ಬಿಬಿಎಂಪಿಯ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಮರಗಳ ಗಣತಿಯನ್ನು ಬಿಬಿಎಂಪಿ ಅರಣ್ಯ ವಿಭಾಗ ನಡೆಸಿತ್ತು. ಈ ಆಧಾರದ ಮೇಲೆ ಎಲ್ಲ 225 ವಾರ್ಡ್‌ಗಳಲ್ಲಿ ಮರಗಣತಿ ಸಮೀಕ್ಷೆ ನಡೆಸಲು ಟೆಂಡರ್ ಆಹ್ವಾನಿಸಿ ಗುತ್ತಿಗೆದಾರರನ್ನು ಇದೀಗ ಅಂತಿಮಗೊಳಿಸಲಾಗಿದೆ.

ಎಂಟು ವಲಯದಲ್ಲಿ ಇಬ್ಬರು ಗುತ್ತಿಗೆದಾರರಿಗೆ ಅವಕಾಶ ನೀಡಲಾಗಿದೆ. ಈ ಗುತ್ತಿಗೆದಾರರು ಆರು ತಿಂಗಳಲ್ಲಿ ನಗರದಲ್ಲಿರುವ ಪ್ರತಿಯೊಂದು ಮರದ ಗಣತಿ ನಡೆಸಿ ಬಿಬಿಎಂಪಿಗೆ ಮಾಹಿತಿ ನೀಡಬೇಕು. ಮರ ಗಣತಿಗೆ ಬಿಬಿಎಂಪಿ ₹4 ಕೋಟಿ ವೆಚ್ಚ ಮಾಡಲಿದೆ.

ಮರ ಗಣತಿ ಸಂದರ್ಭದಲ್ಲಿ 20 ಸೆಂ.ಮೀ.ಗಿಂತ ದೊಡ್ಡ ಗಾತ್ರದ ಕಾಂಡ ಇರುವ ಮರವನ್ನು ಮಾತ್ರ ಪರಿಗಣಿಸಬೇಕು. ಪ್ರತಿ ಮರಕ್ಕೆ ಸಂಖ್ಯೆ ನೀಡಬೇಕು. ಯಾವ ಜಾತಿಯ ಮರ, ಎಷ್ಟು ವಯಸ್ಸು ಸೇರಿದಂತೆ ಮೊದಲಾದ ಅಂಶವನ್ನು ಸಂಗ್ರಹಿಸಬೇಕಿದೆ. 50 ಮರಕ್ಕಿಂತ ಕಡಿಮೆ ಮರಗಳು ಖಾಸಗಿ ಜಮೀನಿನಲ್ಲಿ ಇದ್ದರೆ, ಬಿಬಿಎಂಪಿಯು ನೇಮಕ ಮಾಡಿದ ಗುತ್ತಿಗೆದಾರರೇ ಗಣತಿ ನಡೆಸಲಿದ್ದಾರೆ. ಇಲ್ಲವಾದರೆ, ಸಂಬಂಧಪಟ್ಟ ಇಲಾಖೆ ಅಥವಾ ಮಾಲೀಕರು ಗಣತಿ ನಡೆಸಿ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಎಷ್ಟು ಮರ, ಯಾವ ಜಾತಿ ಮರ ಸೇರಿದಂತೆ ಮೊದಲಾದ ಮಾಹಿತಿಯನ್ನು ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ. ಈ ಮಾಹಿತಿಯನ್ನು ಮರ ಗಣತಿ ಅಂಕಿ ಅಂಶಕ್ಕೆ ಕ್ರೋಢೀಕರಿಸಲಾಗುವುದು ಎಂದು ಪಾಲಿಕೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಮರಕ್ಕೆ ಇಲ್ಲ

ಕ್ಯೂಆರ್ ಕೋಡ್‌

ಈ ಹಿಂದೆ ಮರ ಗಣತಿ ಸಂದರ್ಭದಲ್ಲಿ ಪ್ರತಿ ಮರಕ್ಕೆ ಕ್ಯೂಆರ್ ಕೋಡ್‌ ಅಳವಡಿಸಲು ಪಾಲಿಕೆ ಅರಣ್ಯ ವಿಭಾಗ ಚಿಂತನೆ ನಡೆಸಿತ್ತು. ಆದರೆ, ಪ್ರತಿ ಮರಕ್ಕೆ ಕ್ಯೂಆರ್ ಕೋಡ್‌ ಅಳವಡಿಕೆ ಮಾಡಲು ಮೊಳೆ ಹಾಕಬೇಕಾಗಲಿದೆ. ಇದರಿಂದ ಮರಕ್ಕೆ ಹಾನಿಯಾಗಲಿದೆ. ಹಾಗಾಗಿ, ಪ್ರತಿ ರಸ್ತೆಯ ಒಂದು ಮರದ ಮುಂದೆ ದೊಡ್ಡ ಕ್ಯೂಆರ್ ಕೋಡ್‌ ಫಲಕ ಅಳವಡಿಕೆ ಮಾಡಲಾಗುತ್ತದೆ. ಆ ಕ್ಯೂಆರ್ ಕೋಡ್‌ನಲ್ಲಿ ಸಂಬಂಧ ಪಟ್ಟ ರಸ್ತೆಯಲ್ಲಿ ಎಷ್ಟು ಮರ ಇವೆ. ಯಾವ ಜಾತಿಯ ಮರಗಳು ಇವೆ ಸೇರಿದಂತೆ ಮೊದಲಾದ ಮಾಹಿತಿಯನ್ನು ಅಳವಡಿಕೆ ಮಾಡಲಾಗುತ್ತದೆ. ಯಾರು ಬೇಕಾದರೂ ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಬಹುದಾಗಿದೆ. ಸ್ಕ್ಯಾನ್ ಮಾಡಿದರೆ ರಸ್ತೆಯಲ್ಲಿರುವ ಮರಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

Share this article