ಸೆಂಟ್ರಿಂಗ್‌ ಶೀಟ್‌ ಕಳವು: ಮೂವರ ಬಂಧನ

KannadaprabhaNewsNetwork |  
Published : Dec 08, 2024, 01:15 AM IST
7ಕೆಡಿವಿಜಿ14-ದಾವಣಗೆರೆ ತಾಲೂಕಿನ ವಿವಿಧೆಡೆ ಸೆಂಟ್ರಿಂಗ್ ಶೀಟುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 8 ಲಕ್ಷ ಮೌಲ್ಯದ ಸ್ವತ್ತು, ಕೃತ್ಯಕ್ಕೆ ಬಳಸಿದ್ದ ಎರಡು ವಾಹನ ಜಪ್ತು ಮಾಡಿರುವ ಗ್ರಾಮಾಂತರ ಪೊಲೀಸರು.  | Kannada Prabha

ಸಾರಾಂಶ

ಗ್ರಾಮಾಂತರ ಪೊಲೀಸರು ಮೂವರು ಸೆಂಟ್ರಿಂಗ್ ಶೀಟು ಕಳ್ಳರ ಬಂಧಿಸಿ, ₹8 ಲಕ್ಷ ಮೌಲ್ಯದ ಸ್ವತ್ತು, 2 ವಾಹನಗಳನ್ನು ಜಪ್ತಿ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈಲ್ವೆ ಕಾಮಗಾರಿಗೆ ಬಳಸುತ್ತಿದ್ದ ಸೆಂಟ್ರಿಂಗ್ ಶೀಟ್ ಕಳವು ಸೇರಿದಂತೆ ವಿವಿಧ ಪ್ರಕರಗಳಲ್ಲಿ ಸೆಂಟ್ರಿಂಗ್ ಮತ್ತು ಕಬ್ಬಿಣದ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ, ₹5 ಲಕ್ಷ ಮೌಲ್ಯದ ಸೆಂಟ್ರಿಂಗ್ ಶೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ 2 ವಾಹನ ಸೇರಿ ₹8 ಲಕ್ಷ ಮೌಲ್ಯದ ಸ್ವತ್ತುಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದ್ದಾರೆ.

ತಾಲೂಕಿನ ತೋಳಹುಣಸೆ ಗ್ರಾಮದ ದಿನೇಶ ನಾಯ್ಕ ಅಲಿಯಾಸ್ ಕಾಳು (26), ಶಿವು ಅಲಿಯಾಸ್ ಶಿವು ನಾಯ್ಕ (36) ಹಾಗೂ ದಾವಣಗೆರೆ ಬೀಡಿ ಲೇಔಟ್‌ ವಾಸಿ ಇಸ್ಮಾಯಿಲ್‌ ಜಬೀವುಲ್ಲಾ ಅಲಿಯಾಸ್ ಇಸ್ಸು (31) ಬಂಧಿತರು. ಪರಾರಿಯಾದ ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಆರೋಪಿಗಳ ವಿಚಾರಣೆ ನಡೆಸಿದಾಗ, ಮೂರು ಕಳವು ಪ್ರಕರಣ ಪತ್ತೆಯಾಗಿವೆ. ಕಳುವಾಗಿದ್ದ ₹3.5 ಲಕ್ಷ ಮೌಲ್ಯದ ಸ್ವತ್ತು, ಆರ್‌ಎಂಸಿ ಯಾರ್ಡ್‌ ಠಾಣೆ ವ್ಯಾಪ್ತಿಯ ₹1.5 ಲಕ್ಷ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್‌ ಹಾಗೂ ಹ್ಯಾಂಗ್ಲರ್‌ಗಳು, ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಟಾಟಾ ಏಸ್ ವಾಹನ, ಪ್ಯಾಸೆಂಜರ್ ಆಟೋ ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಶಿವಕುಮಾರ ಗುರಣ್ಣಗೌಡ ಗುರಡ್ಡಿ ನೈರುತ್ಯ ರೈಲ್ವೆಯ ತೋಳಹುಣಸೆಯಿಂದ ತುಮಕೂರುವರೆಗೆ ಕೈಗೊಂಡ ಹೊಸ ರೈಲ್ವೆ ಮಾರ್ಗದ ಕಾಮಗಾರಿಯಲ್ಲಿ ರೈಲ್ವೆ ಟ್ರ್ಯಾಕ್‌ನ ಎರಡೂ ಬದಿ ಕಾಂಕ್ರೀಟ್ ಚರಂಡಿ ಮಾಡುವ ಗುತ್ತಿಗೆ ಪಡೆದಿದ್ದರು. ಹೆಬ್ಬಾಳ್ ಬಡಾವಣೆ ಹಿಂಭಾಗದಲ್ಲಿ ರೈಲ್ವೆ ಟ್ರ್ಯಾಕ್‌ ಬಳಿ ಕಾಂಕ್ರೀಟ್ ಚರಂಡಿ ಮಾಡಲು ಅಳವಡಿಸಿದ್ದ ಕಬ್ಬಿಣದ 48 ಸೆಂಟರಿಂಗ್ ಮೋಲ್ಡ್‌ ಪ್ಲೇಟ್ಸ್‌, 23 ಹ್ಯಾಂಗ್ಲರ್‌ಗಳು ಕಳುವಾಗಿದ್ದ ಬಗ್ಗೆ ದೂರು ನೀಡಿದ್ದರು.

ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕಾಡಜ್ಜಿ ಗ್ರಾಮದ ಐ.ಕೆ. ಮಹಮ್ಮದ್ ಖಾಜಾ ಠಾಣೆಗೆ ಹಾಜರಾಗಿ, ದೊಡ್ಡಬಾತಿ ರಿ.ಸ.ನಂ. 96ರಲ್ಲಿನ ಜಮೀನಿನಲ್ಲಿ ಹೊಸದಾಗಿ ಲೇಔಟ್ ನಿರ್ಮಿಸುತ್ತಿದ್ದು, ಲೇಔಟ್‌ನಲ್ಲಿ ಕಾಂಕ್ರೀಟ್‌ ಚರಂಡಿ ಮಾಡಲು ಕಬ್ಬಿಣದ 8 ಅಡಿ ಉದ್ದ 2 ಅಡಿ ಅಗಲದ ಸೆಂಟ್ರಿಂಗ್ ಪ್ಲೇಟ್‌ ಅಳವಡಿಸಲಾಗಿತ್ತು. ಕಳ್ಳರು 66 ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳವು ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.

ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್‌ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಇ.ವೈ. ಕಿರಣಕುಮಾರ ನೇತೃತ್ವದಲ್ಲಿ ಪಿಎಸ್ಐ ಜೋವಿತ್ ರಾಜ್‌ ಹಾಗೂ ಸಿಬ್ಬಂದಿ ತಂಡವು ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಸ್ವತ್ತು, ಕೃತ್ಯಕ್ಕೆ ಬಳಸಿದ್ದ 2 ವಾಹನ ಸೇರಿದಂತೆ ಒಟ್ಟು ₹8 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ